ದೊಣೆನಾಯಕನ ಅಪ್ಪಣೆ ಬೇಕೇ?

ಪ್ರಸಕ್ತ ನಾವು ಅನುಭವಿಸುತ್ತಿರುವ ನೋವಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕಿದೆ. ಮಸೂದ್ ಅಜರ್​ನನ್ನು ‘ಜಾಗತಿಕ ಭಯೋತ್ಪಾದಕ’ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಘೊಷಿಸಬೇಕಾದ ಸಮಯದಲ್ಲಿ ಚೀನಾ ಮತ್ತೆ ಭಯೋತ್ಪಾದಕ ದೇಶ ಹಾಗೂ ಭಯೋತ್ಪಾದಕರ ಪರವಾಗಿ ನಿಂತಿರುವುದು ಕಳವಳಕಾರಿ ಸಂಗತಿ. ಇಲ್ಲಸಲ್ಲದ ನೆಪವೊಡ್ಡಿ ಇನ್ನಷ್ಟು ಸಮಯಾವಕಾಶ ಬೇಕೆಂದಿರುವುದು ನೋಡಿದರೆ ಪಾಕಿಸ್ತಾನ ಮಾಡುತ್ತಿರುವ ಪುಂಡಾಟಿಕೆಗೆ ಚೀನಾದ ಬೆಂಬಲ ಇದೆ ಎನ್ನುವುದು ಸಾಬೀತಾಗಿದೆ. ಇಂಗ್ಲೆಂಡ್, ಫ್ರಾನ್ಸ್, ರಷ್ಯಾ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಬೆಂಬಲಕ್ಕಿರುವಾಗ, ಭಯೋತ್ಪಾದನೆ ವಿರುದ್ಧವಾಗಿರುವಾಗ ಚೀನಾವೊಂದೇ ಪಾಕಿಸ್ತಾನದ ಪರವಾಗಿ ನಿಂತಿರುವುದು ನೋಡಿದರೆ, ‘ನಮ್ಮ ದೇಶದ ನಿಜವಾದ ಶತ್ರು ಚೀನಾ’ ಎಂದು ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಹೇಳಿದ್ದು ನೆನಪಾಗುತ್ತಿದೆ.

ಭಯೋತ್ಪಾದನೆಯ ಸಂತ್ರಸ್ತರಾಗಿ ನೋವು ಅನುಭವಿಸಿದ್ದು ನಾವು, ಸೈನಿಕರನ್ನು, ನಾಗರಿಕರನ್ನು ಕಳೆದುಕೊಂಡು ದುಃಖ ಅನುಭವಿಸಿದ್ದು ನಾವು. ಹಾಗಾಗಿ, ಭಾರತ ಸುಮ್ಮನೆ ಕುಳಿತು ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಸೂದ್ ಅಜರ್​ನನ್ನು ಜಾಗತಿಕ ಭಯೋತ್ಪಾದಕ ಎಂದು ಘೊಷಿಸುವವರೆಗೂ ಕಾಯುವುದು ಸೂಕ್ತವಲ್ಲ. ಅಮೆರಿಕ ಈ ಹಿಂದೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅನುಮತಿಗೆ ಕಾಯದೆ ಒಸಾಮಾ ಬಿನ್ ಲಾಡೆನ್​ನನ್ನು ಹೊಡೆದುರುಳಿಸಿತ್ತು. ಚೀನಾ, ಪಾಕಿಸ್ತಾನ ಬಿಟ್ಟು ಪ್ರಪಂಚದ ಬಹುತೇಕ ಎಲ್ಲ ದೇಶಗಳು ಭಯೋತ್ಪಾದನೆ ವಿರುದ್ಧವಾಗಿರುವಾಗ ಉಗ್ರರಿಗೆ ಹಾಗೂ ಉಗ್ರರಿಗೆ ಸಹಾಯ ಮಾಡುವ ದೇಶಗಳಿಗೆ ತಡಮಾಡದೇ ತಕ್ಕ ಪಾಠ ಕಲಿಸಬೇಕಿದೆ .

| ಎಂ.ಪರಮೇಶ್ವರ ಮದ್ದಿಹಳ್ಳಿ (ಹಿರಿಯೂರು ತಾಲೂಕು)

ಮತದಾರರಿಗೆ ಹಿತಸಂಹಿತೆ

ಲೋಕಸಭಾ ಚುನಾವಣೆ ಘೊಷಣೆಯಾಗಿ ನೀತಿಸಂಹಿತೆ ಜಾರಿಗೆ ಬಂದಿದೆ. ಮತದಾರರಾದ ನಾವೂ ದೇಶಹಿತಕ್ಕಾಗಿ ಮತ್ತು ನಮ್ಮ ಉತ್ತಮ ಭವಿಷ್ಯತ್ತಿಗಾಗಿ ಈ 3 ಹಿತಸಂಹಿತೆಗಳನ್ನು ಪಾಲಿಸೋಣ. ಮತದಾನದ ದಿನಾಂಕಗಳು ರಜೆಗಳಿಗೆ ಅಂಟಿಕೊಂಡು ಬಂದಿವೆ. ಆ ದಿನಗಳಲ್ಲಿ ಪ್ರವಾಸದ ಕ್ಷಣಿಕಖುಷಿಗೆ ಬಲಿಯಾಗದೆ ಮತದಾನ ಮಾಡಿ ಉತ್ತಮ ಸರ್ಕಾರವನ್ನು ಅಧಿಕಾರಕ್ಕೆ ತರುವುದರ ಮೂಲಕ ದೀರ್ಘಕಾಲೀನ ಸುಖಶಾಂತಿಗಳನ್ನು ನಮ್ಮದಾಗಿಸಿಕೊಳ್ಳೋಣ. ಅಭ್ಯರ್ಥಿಗಳೂ ಸೇರಿದಂತೆ ನೇತಾರರ ಬಣ್ಣದ ಮಾತುಗಳಿಗೆ ಮಾರುಹೋಗದೆ ಅವರ ಸಾಧನೆ, ಸಾಮರ್ಥ್ಯ, ಸಿದ್ಧಾಂತ ಮತ್ತು ಮುಖ್ಯವಾಗಿ ಪ್ರಾಮಾಣಿಕತೆ ಇವುಗಳನ್ನು ಪರಿಗಣಿಸಿ ಸೂಕ್ತ ಅಭ್ಯರ್ಥಿಗೆ ಮತ ನೀಡೋಣ. ಜಾತಿ, ಮತ, ಪಂಥ ಮತ್ತು ವೈಯಕ್ತಿಕ ಆಮಿಷ ಇವುಗಳ ಬೆನ್ನುಹತ್ತದೆ ಆತ್ಮಸಾಕ್ಷಿಗನುಗುಣವಾಗಿ ಮತ ನೀಡೋಣ. ದೇಶದ ಮತ್ತು ನಮ್ಮ ಭವಿಷ್ಯತ್ತನ್ನು ರೂಪಿಸಲು ನಮಗಿರುವ ಮತದಾನವೆಂಬ ಏಕೈಕ ಅವಕಾಶವನ್ನು ಎಂದೂ ವ್ಯರ್ಥಗೊಳಿಸದಿರೋಣ.

| ಎಚ್. ಆನಂದರಾಮ ಶಾಸ್ತ್ರೀ ಬೆಂಗಳೂರು