ಕುಮಟಾ: ಕುಮಟಾ-ಸಿದ್ದಾಪುರ ಮಾರ್ಗದ ದೊಡ್ಮನೆ ಘಟ್ಟದ ರಸ್ತೆ ಕೆಳಭಾಗದ ಬೆಟ್ಟದ ಮಣ್ಣು ಕುಸಿದಿರುವ ಹಿನ್ನೆಲೆಯಲ್ಲಿ ವಾಕರಸಾ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಶಾಲಾ ಕಾಲೇಜ್ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಕುರಿತು ‘ವಿಜಯವಾಣಿಯೊಂದಿಗೆ’ ಸಮಸ್ಯೆ ತೋಡಿಕೊಂಡ ವಂದಾನೆಯ ಕೃಷ್ಣಮೂರ್ತಿ ನಾಯ್ಕ, ‘ಸಿದ್ದಾಪುರ ದೊಡ್ಮನೆ ಘಟ್ಟದಲ್ಲಿ ರಸ್ತೆಯ ಕೆಳಭಾಗದ ಬೆಟ್ಟ ಕುಸಿದಿದೆ ಎಂದು ಬಸ್ ಸಂಚಾರ ನಿಲ್ಲಿಸಲಾಗಿದೆ. ಆದರೆ, ಇದೇ ರಸ್ತೆಯಲ್ಲಿ ಖಾಸಗಿ ಬಸ್, ಲಾರಿ, ಮುಂತಾದ ಭಾರಿ ವಾಹನಗಳು ಓಡಾಡುತ್ತವೆ. ಆದರೆ, ಬಸ್ ಸಂಚಾರ ಸ್ಥಗಿತಗೊಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಬಸ್ ಸಂಚಾರ ಸ್ಥಗಿತದಿಂದ ಸಾರ್ವಜನಿಕರು, ವಿದ್ಯಾರ್ಥಿಗಳು 8-10 ದಿನಗಳಿಂದ ಪರದಾಡುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಬೆಳಗ್ಗೆ ಹೊರಡುವ ಮಾವಿನಗುಂಡಿ ಬಸ್ನಲ್ಲಿ ಸಿದ್ದಾಪುರದಿಂದಲೇ ನಿತ್ಯ 50ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಾರೆ. ಕುಮಟಾ, ಚಂದಾವರ, ಬಡಾಳ, ಹೊನ್ನಾವರ ಇತರ ಕಡೆಗಳಲ್ಲಿ ಉದ್ಯೋಗ ಮಾಡುವವರು ಪ್ರಯಣಿಸುತ್ತಾರೆ. ಹೀಗಾಗಿ ಕೂಡಲೇ ಬಸ್ ಸೇವೆ ಆರಂಭಿಸಬೇಕು’ ಎಂದು ಸಾರ್ವಜನಿಕರು ವಿನಂತಿಸಿದ್ದಾರೆ.
ಬಸ್ ಸೇವೆ ಪುನರಾರಂಭಕ್ಕೆ ಸಾರ್ವಜನಿಕರ ಒತ್ತಾಯ
ಸಿದ್ದಾಪುರ: ಸಿದ್ದಾಪುರದಿಂದ ಹಾರ್ಸಿಕಟ್ಟಾ- ಮುಠ್ಠಳ್ಳಿ-ಹಾಲ್ಕಣಿ-ಕಾನ್ಸೂರು ಮಾರ್ಗವಾಗಿ ಶಿರಸಿಗೆ ಸಂಚರಿಸುತ್ತಿದ್ದ ಬಸ್ ಸೇವೆ ಏಕಾ ಏಕಿ ಬಂದ್ ಆದ ಕಾರಣ ವಿದ್ಯಾರ್ಥಿಗಳು-ಪ್ರಯಾಣಿಕರು ತೊಂದರೆ ಪಡುವಂತಾಗಿದೆ. ಬಸ್ ಸೇವೆ ಪುನರಾರಂಭಿಸದಿದ್ದರೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕಿಲಾರ, ಹಾಲ್ಕಣಿ, ಹಿರೇಕೈ ಮತ್ತಿತರ ಗ್ರಾಮಸ್ಥರು, ನಿತ್ಯ ಬೆಳಗ್ಗೆ ಸಿದ್ದಾಪುರದಿಂದ 7.30ಕ್ಕೆ ಹೊರಡುವ ಬಸ್ 9ಕ್ಕೆ ಶಿರಸಿಗೆ ತಲುಪುತ್ತಿತ್ತು. ಈ ಬಸ್ ಮೂಲಕ 50-60 ವಿದ್ಯಾರ್ಥಿಗಳು ವಿವಿಧ ಶಾಲೆ-ಕಾಲೇಜ್ಗೆ ತೆರಳುತ್ತಿದ್ದು, ಅಲ್ಲದೆ, ಪ್ರಯಾಣಿಕರು ಸಂಚರಿಸುತ್ತಿದ್ದರು. ಆದರೆ, ಏಕಾಏಕಿ ಬಂದ್ ಆಗಿದ್ದರಿಂದ ತೀವ್ರ ತೊಂದರೆಯಾಗಿದೆ. ಈ ಕುರಿತು ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀಹರಿ ಬಾಬು ಅವರನ್ನು ವಿಚಾರಿಸಿದಾಗ, ಮಾನಿಹೊಳೆ ಕುಸಿದ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎಲ್ಲ ಬಸ್ಗಳನ್ನು ಈ ಮಾರ್ಗದಲ್ಲಿ ಓಡಿಸುತ್ತಿದ್ದೇವೆ. ಅದೇ ಬಸ್ ಹತ್ತಿ ಕೊಡ್ಸರದಲ್ಲಿ ಇಳಿದು ಬಾಳೇಸರ ಬಸ್ ಹತ್ತಿ ಶಿರಸಿಗೆ ತಲುಪಬಹುದು’ ಎಂದು ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.
ಸಿದ್ದಾಪುರ-ಕುಮಟಾ ನಡುವಿನ ಘಟ್ಟದಲ್ಲಿ ಗುಡ್ಡ ಅಪಾಯಕಾರಿಯಾಗಿ ಕುಸಿದಿದ್ದು ಮುಂದಿನ ಆದೇಶ ನೀಡುವವರೆಗೂ ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಸಿದ್ದಾಪುರ ಬಂದರು ಹಾಗೂ ಒಳನಾಡು ಸಾರಿಗೆ ಕಚೇರಿಯಿಂದ ನಿರ್ದೇಶನ ಬಂದಿದೆ. ಅನುಮತಿ ದೊರೆಯುವವರೆಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಘಟ್ಟದಲ್ಲಿ ಬಸ್ ಬಿಡಲಾಗದು.
| ಸೌಮ್ಯಾ ನಾಯಕ
ಕುಮಟಾ ವಾಕರಸಾ ಘಟಕದ ವ್ಯವಸ್ಥಾಪಕಿ