ದೊಡ್ಡ ಅಂತರದಿಂದ ಕಾಂಗ್ರೆಸ್ ಸೋತಿಲ್ಲ – ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿಕೆ

ಕೊಪ್ಪಳ: ಬಿಜೆಪಿ ಟ್ರೆಂಡ್ ಹಾಗೂ ಪ್ರಧಾನಿ ಮೋದಿ ಅಲೆಯಿಂದ ಕೊಪ್ಪಳದಲ್ಲಿ ಕಾಂಗ್ರೆಸ್ ಸೋಲಬೇಕಾಗಿದೆ. ಆದರೂ ಜನರು ಕಾಂಗ್ರೆಸ್‌ಗೆ ಕಳೆದ ಬಾರಿಗಿಂತ ಹೆಚ್ಚು ಮತ ನೀಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.

ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಮತದಾರರು ಕಾಂಗ್ರೆಸ್‌ನ್ನು ಬೆಂಬಲಿಸಿದ್ದಾರೆ. ಇತರ ಕ್ಷೇತ್ರಗಳಿಗೆ ಹೋಲಿಸಿದರೆ, ನಾವು ದೊಡ್ಡ ಮೊತ್ತದ ಅಂತರದಿಂದ ಸೋತಿಲ್ಲ. 38 ಸಾವಿರ ಮತಗಳ ಅಂತರದಿಂದ ಸೋತಿದ್ದು, ಜನರ ತೀರ್ಪನ್ನು ಸ್ವಾಗತಿಸುತ್ತೇವೆ. ಮೈತ್ರಿ ಪಕ್ಷಗಳು ಸರಿಯಾಗಿ ಸಮನ್ವಯದಿಂದ ಕೆಲಸ ಮಾಡಿದ್ದರೆ ಸೋಲಾಗುತ್ತಿರಲಿಲ್ಲ. ಕುಟುಂಬ ರಾಜಕಾರಣ ಎಲ್ಲಿಲ್ಲ? ಕ್ಷೇತ್ರದಲ್ಲಿ ಒಂದೂ ಅಭಿವೃದ್ಧಿ ಕೆಲಸ ಮಾಡದವರನ್ನು ಮತದಾರರು ಗೆಲ್ಲಿಸಿದ್ದಾರೆ. ಗೋಡ್ಸೆಯನ್ನು ದೇಶಭಕ್ತ, ಸಂವಿಧಾನ ಬದಲಾಯಿಸುತ್ತೇವೆ ಎಂದವರನ್ನು ಗೆಲ್ಲಿಸಿದ್ದು, ಇದನ್ನು ಹೇಗೆ ವ್ಯಾಖ್ಯಾನ ಮಾಡಬೇಕೆಂದು ಗೊತ್ತಾಗುತ್ತಿಲ್ಲವೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿದರು.

ಲೋಕಸಭೆ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಾತನಾಡಿ, ನಾವು ದೇಶಾದ್ಯಂತ ಇದ್ದ ಬಿಜೆಪಿ ಬಿರುಗಾಳಿಯನ್ನು ಸಮರ್ಥವಾಗಿ ಎದುರಿಸಿದ್ದೇವೆ. ಎರಡನೇ ಅವಧಿಗೆ ಸಂಸದರಾಗಿ ಆಯ್ಕೆಯಾದ ಸಂಗಣ್ಣ ಕರಡಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪ್ರಧಾನಿ ಮೋದಿಗೆ ಮತ್ತೆ 5 ವರ್ಷ ಅವಕಾಶ ದೊರೆತಿದೆ. ರೈತರು, ಬಡವರು, ಯುವಕರು, ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಆಡಳಿತ ನೀಡಲಿ. ಸೋಲನ್ನು ಎಲ್ಲ ನಾಯಕರು ಸಾಮೂಹಿಕವಾಗಿ ಸ್ವೀಕರಿಸಿದ್ದೇವೆ. ನನಗೂ ಜಿಲ್ಲಾಧ್ಯಕ್ಷನಾಗಿ ಮುಂದುವರೆಯಬೇಕೆಂದು ಕೇಳಿಲ್ಲ. ರಾಜೀನಾಮೆ ನೀಡಬೇಕೆಂದು ಅಂದುಕೊಂಡಿರುವೆ. ವರಿಷ್ಠರೊಂದಿಗೆ ಮಾತನಾಡಿ ನಿರ್ಧರಿಸುವೆ. ಲೋಕಸಭೆ ಫಲಿತಾಂಶದಿಂದ ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ.
| ಶಿವರಾಜ ತಂಗಡಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಕೊಪ್ಪಳ

ನಾವು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದ್ದೇವೆ. ನಮ್ಮ ಮತಗಳೆಲ್ಲ ನಮಗೆ ಬಂದಿವೆ. ಆದರೆ, ಕೆಲ ಮತಗಳು ಮಾತ್ರ ಬಿಜೆಪಿ ಕಡೆ ವಾಲಿವೆ. ಕೊಪ್ಪಳ ಕ್ಷೇತ್ರದ ಜನರೂ ಕೈ ಹಿಡಿದಿದ್ದು, ರಾಜ್ಯ, ಕೇಂದ್ರ ರಾಜಕಾರಣವನ್ನು ದೃಷ್ಠಿಯಲ್ಲಿಟ್ಟುಕೊಂಡು ಮತದಾನ ಮಾಡಿದ್ದಾರೆ. ನಮ್ಮೆಲ್ಲ ನಾಯಕರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಕ್ಕೆ ಮತಗಳಿಕೆ ಪ್ರಮಾಣ ಹೆಚ್ಚಾಗಿದೆ.
| ರಾಜಶೇಖರ ಹಿಟ್ನಾಳ, ಕಾಂಗ್ರೆಸ್ ಪರಾಜಿತ ಅರ್ಭರ್ಥಿ

Leave a Reply

Your email address will not be published. Required fields are marked *