Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ದೇಹದಲ್ಲಿ ಮಚ್ಚೆ ಇದೆ ಆದರೆ ಅದು ಮುಚ್ಚಿದೆ!

Sunday, 08.07.2018, 3:02 AM       No Comments

| ಎಚ್.ಡುಂಡಿರಾಜ್

ಸಲಹೆ ಸಲಹೆ ಬಿಟ್ಟಿ ಸಲಹೆ

ಯಾರಿಗೆ ಬೇಕು ಕೇಳಿ

ನಿಮ್ಮ ಸಮಸ್ಯೆಗೆ ಪರಿಹಾರ

ನಮ್ಮಲ್ಲುಂಟು ಹೇಳಿ

ಏಕೆ ಅನುಮಾನ? ಹಿಂಜರಿಕೆ?

ನಾಚಿಕೊಳ್ಳಬೇಡಿ

ಗುರೂಜಿಯೊಂದಿಗೆ ಮಾತನಾಡಲು

ಈಗಲೆ ಕರೆಮಾಡಿ

ನೀರಾ: ಬ್ರೇಕ್​ನ ನಂತರ ಮತ್ತೊಮ್ಮೆ ನಿಮ್ಮ ನೆಚ್ಚಿನ ಟೈಂಪಾಸ್ ಟೀವಿಯ ಬಿಟ್ಟಿ ಸಲಹೆ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಅಕ್ಕರೆಯ ಸ್ವಾಗತ. ವೀಕ್ಷಕರ ಸಮಸ್ಯೆಗೆ ಪರಿಹಾರ ನೀಡಲು ಸಕಲ ಶಾಸ್ತ್ರ ಪಾರಂಗತರಾದ ವಿದ್ವಾನ್ ಮಿಥ್ಯಾನಂದ ಗುರೂಜಿ ನಮ್ಮೊಂದಿಗೆ ಇದ್ದಾರೆ. ನಮಸ್ಕಾರ ಗುರೂಜಿ. ಕರೆಗಳನ್ನು ಸ್ವೀಕರಿಸುವ ಮೊದಲು ಚುಟುಕಾಗಿ ರಾಜಕಾರಣಿಗಳ ಇಂದಿನ ಭವಿಷ್ಯ ಹೇಗಿದೆ ಅಂತ ತಿಳಿಸ್ತೀರಾ?

ಗುರೂಜಿ: ಓಹೋ ಧಾರಾಳವಾಗಿ. ಓಂ ಶ್ರೀ ದೇವಿಯೇ ನಮಃ, ಓಂ ಶ್ರೀ ಕಾವಿಯೇ ನಮಃ, ಓಂ ಶ್ರೀ ಟೀವಿಯೇ ನಮಃ, ಮೊದಲಿಗೆ ಮೇಷ ರಾಶಿ. ಮೇಷ ಅಂದರೆ ಆಡು. ಆಡೂ ಆಟ ಆಡು! ಈ ರಾಶಿಯ ಶಾಸಕರು ಎಷ್ಟೇ ಆಟ ಆಡಿದರೂ ಗುರು ಬಲ ಇಲ್ಲವಾದ್ದರಿಂದ ಗೋಲ್ ಹೊಡೆಯೋಕೆ ಆಗಲ್ಲ.

ನೀರಾ: ಅಂದ್ರೆ ಮಂತ್ರಿಗಿರಿ ಸಿಗಲ್ಲ.

ಗುರೂಜಿ: ಹೌದು. ಮುಂದಿನ ರಾಶಿ ವೃಷಭ. ಕುಜನ ದೃಷ್ಟಿ ಇರುವುದರಿಂದ ಈ ರಾಶಿಯ ಪುಢಾರಿಗಳಿಗೆ ಇಂದು ಮಿಶ್ರ ಫಲ. ಸಚಿವ ಸ್ಥಾನ ಸಿಗುತ್ತೆ. ಆದರೆ ಮೇಯಲು ಫಲವತ್ತಾದ ಖಾತೆ ಸಿಗಲ್ಲ. ಮಿಥುನ ರಾಶಿಯವರಿಗೆ ಬುಧ ದೆಸೆ. ನಿಗಮ ಮಂಡಳಿ ಅಧ್ಯಕ್ಷತೆ ಸಿಗಬಹುದು. ಕರ್ಕಾಟಕ ರಾಶಿಯ ರಾಜಕಾರಣಿಗಳು..

ನೀರಾ: ಏನಾಯ್ತು ಗುರೂಜಿ?

ಗುರೂಜಿ: ತುಂಬಾ ಹುಷಾರಾಗಿರಬೇಕು. ವರಮಾನ ಇಲಾಖೆಯವರು ದಾಳಿ ಮಾಡುವ ಸಂಭವ ಉಂಟು. ಸಿಂಹ ರಾಶಿಯವರ ಆರ್ಭಟ ಏನಿದ್ದರೂ ಕಚೇರಿಯಲ್ಲಿ. ಮನೆಯಲ್ಲಿ ಬಾಲ ಬಿಚ್ಚಲು ಕೇತು ಬಿಡಲ್ಲ. ಕನ್ಯಾ ರಾಶಿಯವರಿಗೆ ಶನಿ ಕಾಟ ಇದೆ. ಡೆಲ್ಲಿಗೆ ಹೋದರೆ ಹೈಕಮಾಂಡ್ ಭೇಟಿಯಾಗಲು ಸಾಧ್ಯವಾಗುವುದಿಲ್ಲ. ತುಲಾ ರಾಶಿಯವರಿಗೆ ಇಂದು ಒಳ್ಳೆಯ ದಿನ. ತಕ್ಕಡಿ ಇವರ ಕಡೆ ವಾಲುತ್ತೆ. ವೃಶ್ಚಿಕ ರಾಶಿಯವರಿಗೆ ಕುಜದೋಷದಿಂದಾಗಿ ವಿಪಕ್ಷದವರ ಕಾಟ, ಹಳೆಯ ಹಗರಣ ಹೊರಗೆ ಬರುತ್ತೆ.

ನೀರಾ: ಧನು ರಾಶಿಯ ರಾಜಕಾರಣಿಗಳಿಗೆ ಈ ದಿನ ಹೇಗೆ ಗುರೂಜಿ?

ಗುರೂಜಿ: ಧನು ಅಂದರೆ ಬಿಲ್ಲು. ಗುರುಬಲ ಇರುವುದರಿಂದ ಧನುರಾಶಿಯವರು ಬೋಗಸ್ ಬಿಲ್ ಮಾಡಿ ರಾಶಿ ರಾಶಿ ಧನ ಸಂಪಾದಿಸಬಹುದು. ಮಕರ ರಾಶಿಯ ರಾಜಕಾರಣಿಗಳಿಗೆ ಶುಕ್ರ ವಕ್ರನಾಗಿರುವುದರಿಂದ ಆರೋಗ್ಯ ಏರುಪೇರಾಗುತ್ತೆ. ಕುಂಭ ರಾಶಿಯವರಿಗೆ ರಾಹು ಉಚ್ಛನಾಗಿರುವುದರಿಂದ ಸ್ವಪಕ್ಷೀಯರಿಂದಲೆ ತೊಂದರೆ. ಮೀನರಾಶಿಯವರಿಗೆ ರವಿಯ ಕೃಪೆಯಿಂದ ದಿನ ಚೆನ್ನಾಗಿದೆ. ಹೆಂಡತಿಯ ಜತೆ ಪ್ರವಾಸ, ಪ್ರಶಂಸೆ, ಸುಖ.

ನೀರಾ: ಹೆಂಡತಿಯಿಂದ ಪ್ರಶಂಸೆ ಸಿಗುವುದು ತುಂಬಾ ಕಷ್ಟ ಅಲ್ವಾ ಗುರೂಜಿ?

ಗುರೂಜಿ: ನಾನು ಹೇಳಿದ್ದನ್ನು ಸರಿಯಾಗಿ ಕೇಳ್ಕೊಳ್ಳಿ. ಹೆಂಡತಿಯ ಜತೆ ಪ್ರವಾಸ ಅಂದೆ. ಅವರ ಹೆಂಡತಿ ಅಂತ ಹೇಳಿಲ್ಲ!

ನೀರಾ: ಓಹ್, ಹೌದಲ್ವಾ. ಸರಿ. ಒಂದು ಕರೆ ಬರ್ತಾ ಇದೆ. ಇವತ್ತಿನ ಕೊನೆಯ ಕರೆ ಯಾರದೂ ಅಂತ ನೋಡೋಣ. ಹಲೋ 420 420 420 ಹಾಟ್ರಿಕ್ ಫೋರ್ ಟ್ವೆಂಟಿ ಬಿಟ್ಟಿ ಸಲಹೆ ಕಾರ್ಯಕ್ರಮಕ್ಕೆ ಸ್ವಾಗತ. ಯಾರ್ ಮಾತಾಡ್ತಾ ಇರೋದು?

ಮೋನಿಕಾ: ಅದೆಲ್ಲಾ ನಿಮಗ್ಯಾಕೆ ಬೇಗ ನಮ್ ಗುರೂಜಿಗೆ ಫೋನ್ ಕೊಡಿ.

ನೀರಾ: ಯಾವುದೋ ಅರ್ಜಂಟ್ ಗಿರಾಕಿ, ಮಿಟಕಲಾಡಿ. ನೀವೇ ಬೇಕಂತೆ ಮಾತಾಡಿ.

ಗುರೂಜಿ: ಓಂ ಶ್ರೀ ದೇವಿಯೇ ನಮಃ, ಓಂ ಶ್ರೀ ಕಾವಿಯೇ ನಮಃ, ಓಂ ಶ್ರೀ ಟೀವಿಯೇ ನಮಃ ನಿಮ್ಮ ಶುಭನಾಮವನ್ನು ತಿಳಿಸಿ.

ಮೋನಿಕಾ: ಥ್ಯಾಂಕ್ಯೂ ಗುರೂಜಿ. ನನ್ ಹೆಸರು ಮೋನಿಕಾ. ನಾನು ನಿಮ್ಮ ದೊಡ್ಡ ಫ್ಯಾನ್

ನೀರಾ: ಗುರೂಜಿ ಫ್ಯಾನ್ ಉಪಯೋಗಿಸೋಲ್ಲ. ಅವರಿಗೆ ಎಸಿಯೇ ಬೇಕು.

ಗುರೂಜಿ: ಪರವಾಗಿಲ್ಲ. ಮೋನಿಕಾ, ತುಂಬಾ ಮುದ್ದಾದ ಹೆಸರು. ಮೋಹಕ ನಾಮಧೇಯ. ನಿಮ್ಮ ಸಮಸ್ಯೆ ಏನೂಂತ ಹೇಳಿ.

ಮೋನಿಕಾ: ಗುರೂಜಿ, ಟಿವಿಯಲ್ಲಿ ನಿಮ್ಮನ್ನು ನೋಡ್ತಿದ್ದ ಹಾಗೆ, ನಿಮ್ಮ ಮಧುರವಾದ ಸ್ವರವನ್ನು ಕೇಳ್ತಿದ್ದ ಹಾಗೆ ನನ್ನ ಸಮಸ್ಯೆ 50 ಪರ್ಸೆಂಟ್ ಕಡಿಮೆಯಾಯ್ತು.

ಗುರೂಜಿ: ಓಹೋ, ಬಹಳ ಸಂತೋಷ. ಪರಮಾನಂದ, ನಿತ್ಯಾನಂದ

ನೀರಾ: ಗುರೂಜಿ, ಸಮಯ ಆಗ್ತಾ ಇದೆ. ಅಮ್ಮಾ ತಾಯಿ, ನೇರವಾಗಿ ವಿಷಯಕ್ಕೆ ಬನ್ನಿ. ನಿಮ್ಮ ಸಮಸ್ಯೆ ಏನೂಂತ ಬೇಗ ಹೇಳಿ.

ಮೋನಿಕಾ: ಸ್ವಲ್ಪ ಇರೆ. ನೋಡಿ ಗುರೂಜಿ. ನಿಮ್ಮ ಅಸಿಸ್ಟೆಂಟು ನನಗೆ ತಾಯಿ ಅಂತಾಳೆ. ನನಗೆ ಅಷ್ಟೆಲ್ಲಾ ವಯಸ್ಸಾಗಿಲ್ಲ. ನಾನು ಇನ್ನೂ ಕಾಲೇಜ್ ಹುಡುಗಿ ತರಹ ಕಾಣ್ತೀನಿ ಗೊತ್ತಾ?

ನೀರಾ: ಸಂತೂರ್ ಸೋಪ್ ಜಾಹೀರಾತಿಗೆ ಇವಳೇ ಮಾಡೆಲ್

ಮೋನಿಕಾ: ಏನಂದೆ?

ಗುರೂಜಿ: ನಮ್ಮ ನೀರಾಳ ಮಾತನ್ನ ಗಂಭೀರವಾಗಿ ತಗೊಂಡು ಕೋಪ ಮಾಡ್ಕೋಬೇಡಿ ಮೇನಕಾ

ನೀರಾ: ಮೇನಕಾ ಅಲ್ಲ ಮೋನಿಕಾ

ಮೋನಿಕಾ: ಪರವಾಗಿಲ್ಲ ಗುರೂಜಿ. ನೀವು ನನ್ನ ಮೇನಕಾ ಅಂತಲೇ ಕರೀರಿ.

ನೀರಾ: ಆಮೇಲೆ ಮೇನಕಾ ನಿಮ್ಮನ್ನ ಬಾಯ್ಫ್ರೆಂಡ್ ಮಾಡ್ಕೊಂಡು ವಿಶ್ವಾ-ಮಿತ್ರ ಅಂತಾಳೆ.

ಗುರೂಜಿ: ವಿಶ್ವಾಮಿತ್ರ ಮೇನಕೆ, ಶಕುಂತಲೆ ನೆನಪಿನ ಕಾಣಿಕೆ!

ಮೋನಿಕಾ: ವ್ಹಾ ವ್ಹಾ ಎಂಥಾ ಶಾಯರಿ. ಅರ್ಥಗರ್ಭಿತ! ಗುರೂಜಿ, ನಿಮ್ಮ ಚುಟುಕ ಕೇಳೋಕೆ ಚೆಂದ. ನಿಮ್ಮ ರೂಪ ನೋಡೋಕೆ ಚೆಂದ.

ಗುರೂಜಿ: ಮೋನಿಕಾ, ನಿಮ್ಮ ಸ್ವರವೂ ತುಂಬಾ ಇಂಪಾಗಿದೆ. ಶಾರೀರ ಇಷ್ಟು ಚೆನ್ನಾಗಿದೆ ಅಂದಮೇಲೆ ಹ್ಹಿ ಹ್ಹಿ ಶರೀರವೂ ಚೆನ್ನಾಗಿರಲೇಬೇಕು.

ಮೋನಿಕಾ: ಥ್ಯಾಂಕ್ಯೂ ಗುರೂಜಿ. ಆದರೆ ನಾನು ಇಷ್ಟು ಚೆನ್ನಾಗಿದ್ರೂ ನನ್ನ ಗಂಡನಿಗೆ ನನ್ನ ಮೇಲೆ ಸ್ವಲ್ಪವೂ ಆಸಕ್ತಿ ಇಲ್ಲ.

ಗುರೂಜಿ: ಛೇ ಛೇ. ಅಂದ್ರೆ ನೀವು ದಾಂಪತ್ಯ ಸುಖದಿಂದ ವಂಚಿತರಾಗಿದ್ದೀರಿ ಅಂತಾಯ್ತು. ತುಂಬಾ ಅನ್ಯಾಯ.

ಮೋನಿಕಾ: ಹೌದು ಗುರೂಜಿ. ನನ್ನ ಪಾಲಿಗೆ ರಾತ್ರಿ ತುಂಬಾ ಬೋರಿಂಗ್

ಯಾಕಂದ್ರೆ ಗಂಡ ಮಲಗಿದ ಕೂಡ್ಲೆ ಸ್ನೋರಿಂಗ್

ನೀರಾ: ಗುರೂಜಿ, ನಿಮ್ಮ ಪ್ರಭಾವದಿಂದ ಇವಳೂ ಚುಟುಕ ಹೇಳ್ತಿದಾಳೆ.

ಗುರೂಜಿ: ಮೋನಿಕಾ ಇಲ್ಲಿ ಕೇಳಿ. ನಿಮ್ಮ ಚುಟುಕ ಚೆನ್ನಾಗಿದೆ. ಆದರೆ ನಿಮ್ಮ ದಾಂಪತ್ಯ ಚುಟುಕಾಗಬಾರದು. ಅದು ಶೃಂಗಾರ ರಸಭರಿತ ಮಹಾಕಾವ್ಯ ಆಗಬೇಕು. ಯಾಕೆ ಆಗ್ತಿಲ್ಲ ಅಂತ ನೋಡೋಣ. ಹೆಸರು ಮೋನಿಕಾ. ಮೋ ಮಾ ಮಿ ಮೀ ಮೃಗಶಿರ. ಅಷ್ಟಮದಲ್ಲಿ ನೆಪ್ಟೂನ್. ಪಂಚಮದಲ್ಲಿ ಪ್ಲೂಟೊ. ಊಹುಂ. ನಿಮ್ಮ ಗಂಡ ನಿಮ್ಮ ಕಡೆಗೆ ಆಕರ್ಷಿತನಾಗ್ತಾ ಇಲ್ಲ. ಅದು ನಿಮ್ಮ ಸಮಸ್ಯೆ.

ಮೋನಿಕಾ: ಹೌದು ಗುರೂಜಿ. ಇದಕ್ಕೆ ಏನು ಕಾರಣ?

ಗುರೂಜಿ: ಇದಕ್ಕೆ ಕಾರಣ.. ಹಾಂ ಕೆಲವೊಮ್ಮೆ ಸ್ತ್ರೀಯರ ದೇಹದಲ್ಲಿ ಕಪ್ಪು ಮಚ್ಚೆ ಇದ್ರೆ ಇಂಥಾ ಸಮಸ್ಯೆ ಉಂಟಾಗುತ್ತೆ.

ಮೋನಿಕಾ: ಆದರೆ ನನ್ನ ದೇಹದಲ್ಲಿ ಯಾವ ಮಚ್ಚೇನೂ ಇಲ್ವಲ್ಲಾ

ಗುರೂಜಿ: ತಾಳಿ ಇನ್ನೊಮ್ಮೆ ನೋಡ್ತೀನಿ. ಪಂಚಮದಲ್ಲಿ ಪ್ಲೂಟೋ. ಶನಿ ವಕ್ರ. ಜನ್ಮ ನಕ್ಷತ್ರ ಮೃಗಶಿರಾ, ರೆಬೆಲ್ ಸ್ಟಾರ್

ನೀರಾ: ಅಂಬರೀಷಾ?

ಗುರೂಜಿ: ಅಲ್ರೀ, ರೆಬೆಲ್ ಸ್ಟಾರ್ ಅಂದ್ರೆ ಸ್ಟಾರ್ ರೆಬೆಲ್ ಆಗಿದೆ, ನಕ್ಷತ್ರ ತಿರುಗಿ ಬಿದ್ದಿದೆ ಅಂತ ಆರ್ಥ. ಹೀಗಾದಾಗ ಮಚ್ಚೆ ಸಮಸ್ಯೆ ಉಂಟಾಗುತ್ತೆ.

ಮೋನಿಕಾ: ನೋ ನೋ ನನ್ ಮೈಯಲ್ಲಿ ಕಪ್ಪು ಮಚ್ಚೆ ಇಲ್ಲವೇ ಇಲ್ಲ.

ಗುರೂಜಿ: ನನ್ನ ಮಾತನ್ನು ಸರಿಯಾಗಿ ಆಲಿಸಿ. ನಿಮ್ಮ ಶರೀರದಲ್ಲಿ ಮಚ್ಚೆ ಇದೆ, ಆದರೆ ಮುಚ್ಚಿದೆ. ಅದು ನಮ್ಮಂಥ ಸಾಧಕರ ದಿವ್ಯ ದೃಷ್ಟಿಗೆ ಮಾತ್ರ ಗೋಚರಿಸುತ್ತದೆ.

ಮೋನಿಕಾ: ಹಾಗಾದ್ರೆ ಈ ಸಮಸ್ಯೆಗೆ ಏನು ಪರಿಹಾರ ಗುರೂಜಿ?

ಗುರೂಜಿ: ಇದಕ್ಕೆ ಆನ್​ಲೈನ್ ಪರಿಹಾರ ಇಲ್ಲ. ನೀವು ಬಯಸಿದರೆ ನಿಮ್ಮ ವಾಸ ಸ್ಥಾನಕ್ಕೆ ನಾವು ಚಿತ್ತೈಸಿ, ದಿವ್ಯ ದೃಷ್ಟಿಯ ಮೂಲಕ ಮಚ್ಚೆಯನ್ನು ಪತ್ತೆಮಾಡಿ ಅಲ್ಲೇ ಪರಿಹಾರ ಪೂಜೆ ಮಾಡಬಹುದು.

ಮೋನಿಕಾ: ಓಹ್ ವೆರಿ ನೈಸ್. ನೀವು ನಮ್ಮ ಮನೆಗೆ ಬಂದ್ರೆ ಅದು ನನ್ನ ಭಾಗ್ಯ ಅಂತ ಭಾವಿಸ್ತೀನಿ. ದಯವಿಟ್ಟು ಇಂದೇ ಬನ್ನಿ.

ಗುರೂಜಿ: ಆನಂದ, ಪರಮಾನಂದ. ಅಂದ ಹಾಗೆ ಮೋನಿಕಾ ನಿಮ್ಮ ಮನೆ ಎಲ್ಲಿ?

ಮೋನಿಕಾ: ಉತ್ತರಹಳ್ಳಿ. ಬಿಎಂಟಿಸಿ ಬಸ್ ಡಿಪೊ ಸಮೀಪ.

ಗುರೂಜಿ: ಅರೆ! ನಂ ಮನೇನೂ ಆ ಏರಿಯಾದಲ್ಲೆ ಇದೆ.

ಮೋನಿಕಾ: ನಂ ಮನೆ ವಿಳಾಸ : ಡೋರ್ ನಂಬರ್ 420, ಮನೆ ಹೆಸರು- ಪ್ರೇಮವಿಲ್ಲಾ, 14ನೇ ಮೇನ್, 8ನೇ ಕ್ರಾಸ್, ಪೂರ್ಣಪ್ರಜ್ಞ ನಗರ, ಉತ್ತರಹಳ್ಳಿ

ಗುರೂಜಿ: ರೀ ಅದು ನಂ ಮನೆ. ನಿಂ ಮನೆ ಎಲ್ಲಿ ಅಂದ್ರೆ ನಂ ಮನೆ ವಿಳಾಸ ಹೇಳ್ತೀರಲ್ಲರಿ!

ಸುಬ್ಬಲಕ್ಷ್ಮಿ: ಹೌದು. ಅದು ನಂ ಮನೇನೆ. ಮನೆಗೆ ಬಂದು ದೇಹದಲ್ಲಿರುವ ಮಚ್ಚೆ ನೋಡ್ತೀಯಾ? ಪಾಪಿ. ಮನೆಗೆ ಬಾ. ನಾನು ಮಚ್ಚು ತೋರಿಸ್ತೀನಿ.

ಗುರೂಜಿ: ಅಯ್ಯೋ ದೇವ್ರೆ, ಇದು ನನ್ನ ಹೆಂಡ್ತಿ ಸುಬ್ಬಲಕ್ಷ್ಮಿ ಸ್ವರ! ಸುಬ್ಬೀ ಇಷ್ಟು ಹೊತ್ತು ನನ್ ಜತೆ ಮಾತಾಡಿದ್ದು ನೀನಾ?

ಸುಬ್ಬಲಕ್ಷ್ಮಿ: ಅಲ್ಲ ನನ್ನ ಗೆಳತಿಯ ಮಗಳು ಮೋನಿಕಾ. ನಿನ್ನನ್ನು ಪರೀಕ್ಷೆ ಮಾಡಲು ನಾನು ಬಳಸಿದ ಮೇನಕೆ. ನಿನ್ನ ಬಣ್ಣ ಬಯಲಾಯ್ತು. ಮನೆಗೆ ಬಾ, ಗ್ರಹಚಾರ ಬಿಡಸ್ತೀನಿ.

(ಗುರೂಜಿ ಅಯ್ಯೋ ಶಿವ ಶಿವಾ ಅನ್ನುತ್ತಾ ಕುಸಿದು ಬೀಳುವರು)

ನೀರಾ: ಪ್ರಿಯ ವೀಕ್ಷಕರೆ. ನೀವೇ ನೋಡಿದ್ರಲ್ಲ. ಹೆಂಡತಿಯ ಮಾತುಗಳನ್ನು ಕೇಳಿ ಗುರೂಜಿ ಮೂರ್ಛೆ ಹೋದರು. ಪ್ರಜ್ಞೆ ಬಂದ ನಂತರ ಅವರು ಉತ್ತರಹಳ್ಳಿಯ ತಮ್ಮ ಮನೆಗೆ ಹೋಗಿ ಹೆಂಡತಿಯ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಇಲ್ಲದೆ ಹೋದ್ರೆ ಅವರ ಉತ್ತರಕ್ರಿಯೆ ಆಗೋದು ಖಂಡಿತ. ಇಲ್ಲಿಗೆ ನಮ್ಮ ಇಂದಿನ ಬಿಟ್ಟಿ ಸಲಹೆ ಕಾರ್ಯಕ್ರಮ ಮುಕ್ತಾಯವಾಯಿತು. ನಾಳೆ ಬೆಳಗ್ಗೆ 8 ಗಂಟೆಗೆ ಎಂದಿನಂತೆ ನಿಮ್ಮ ನೆಚ್ಚಿನ ಬಿಟ್ಟಿ ಸಲಹೆ ಕಾರ್ಯಕ್ರಮ ಪ್ರಸಾರವಾಗಲಿದೆ.

ಗುರೂಜಿ: (ಎದ್ದು ಕುಳಿತು) ಆದರೆ ನಾಳೆ ನಾನು ಬರೋದು ಅನುಮಾನ.

ನೀರಾ: ಇವರು ಬರದಿದ್ರೆ ಇವರ ಅಪ್ಪನಂಥವರು ಬರ್ತಾರೆ ಬಿಡಿ. ನಿಮ್ಮ ಎಲ್ಲಾ ಕೆಲಸ ಬಿಟ್ಟು ನೋಡ್ತಾ ಇರಿ ಟೈಂಪಾಸ್ ಟಿವಿಯ ಬಿಟ್ಟಿ ಸಲಹೆ. ನಂಸ್ಕಾರ.

ಸಲಹೆ ಸಲಹೆ ಸಲಹೆ

ಕರೆಮಾಡಿದರೆ ಪುಕ್ಕಟೆಯಾಗಿ

ಆಪ್ತ ಸಲಹೆ, ಪರಮಾಪ್ತ ಸಲಹೆ

(ಲೇಖಕರು ಕವಿ ಹಾಗೂ ನಾಟಕಕಾರರು)

Leave a Reply

Your email address will not be published. Required fields are marked *

Back To Top