ದೇಶ ರಕ್ಷಣೆಗೆ ಮೋದಿ ಪ್ರಧಾನಿಯಾಗಲಿ

ಗದಗ:ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪಾರದರ್ಶಕ ಆಡಳಿತ, ಜನಪರ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು. ದೇಶದ ಸುಭದ್ರತೆಗಾಗಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಪಕ್ಷದ ಮುಖಂಡರು, ಕಾರ್ಯಕರ್ತರು ಅವಿರತವಾಗಿ ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ನಗರದ ವಕೀಲ ಚಾಳದಲ್ಲಿ ತಮ್ಮ ಮನೆ ಮಹಡಿಯ ಮೇಲೆ ಭಾನುವಾರ ಬಿಜೆಪಿ ಧ್ವಜ ಹಾರಿಸುವ ಮೂಲಕ ಮನೆ-ಮನೆಗೆ ಮಹಾಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ ಪ್ರತಿಯೊಬ್ಬ ಪ್ರಜೆಯೂ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿಸುವ ಸಂಕಲ್ಪ ಹೊಂದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಷ್ಟ್ರ ಮಟ್ಟದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಸ ಆರಂಭಿಸಿದ್ದಾರೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಇಂದಿನಿಂದಲೇ ಸಂಕಲ್ಪ ಮಾಡಿ, ಗದಗ ಜಿಲ್ಲೆಗೆ ಒಳಪಡುವ ಹಾವೇರಿ ಕ್ಷೇತ್ರಕ್ಕೆ ಶಿವಕುಮಾರ ಉದಾಸಿ ಹಾಗೂ ಬಾಗಲಕೋಟೆ ಕ್ಷೇತ್ರದ ಪಿ.ಸಿ. ಗದ್ದಿಗೌಡರ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು ಎಂದರು.

ಹಾವೇರಿ-ಗದಗ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿ ಅವರು ಕೂಡ ಕ್ಷೇತ್ರದ ಅಭಿವೃದ್ಧಿಗಾಗಿ ಅಮೃತ ಸಿಟಿ ಸೇರಿದಂತೆ ಹಲವಾರು ಯೋಜನೆಗಳ ಮೂಲಕ ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದಾರೆ. ಪ್ರಸ್ತುತ 16ನೇ ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಬಳಿಕ ಅತಿ ಹೆಚ್ಚು ವಿಷಯಗಳ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ 22 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆ ನೀಡಬೇಕು ಎಂದು ಹೇಳಿದರು.

ಮುಖಂಡ ಅನಿಲ ಮೆಣಸಿನಕಾಯಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಪತಿ ಉಡುಪಿ, ರಾಜು ಕುರಡಗಿ, ಶಹರ ಬಿಜೆಪಿ ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ಮಹೇಶ ಕೋಟಿ, ಜಯಶ್ರೀ ಉಗಲಾಟದ, ನಗರಸಭೆ ಸದಸ್ಯರಾದ ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಜಯಶ್ರೀ ಭೈರವಾಡೆ, ಮುಖಂಡರಾದ ಸತೀಶ ಮುದಗಲ್ಲ, ವಿನಾಯಕ ಹಬೀಬ, ಇತರರಿದ್ದರು.

ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಮನೆ-ಮನೆಗೆ ಮಹಾಸಂಪರ್ಕ ಅಭಿಯಾನದ ಅಂಗವಾಗಿ ಬೈಕ್ ರ‍್ಯಾಲಿ ಸೇರಿ ಬಿಜೆಪಿ ಕಾರ್ಯಕರ್ತರ ಮನೆಗಳ ಗೋಡೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರದ ಸ್ಟಿಕ್ಕರ್​ಗಳನ್ನು ಅಂಟಿಸಲಾಯಿತು. ಕೇಂದ್ರ ಸರ್ಕಾರದ ಯೋಜನೆ ಪಡೆದ ಫಲಾನುಭವಿಗಳ ಬಳಿ ಹೋಗಿ ಮನೆ ಎದುರು ಮತ್ತು ಬಡಾವಣೆ ಮುಖ್ಯ ಭಾಗದಲ್ಲಿ ದೀಪ ಬೆಳಗಿಸುವ ಮೂಲಕ ಕಮಲ ಜ್ಯೋತಿ ಕಾರ್ಯಕ್ರಮ ನೆರವೇರಿಸಲಾಯಿತು.

ಮೋದಿ ಅವರಿಗೆ ಸರಿಸಾಟಿಯಾಗಿ ನಿಲ್ಲುವ ವ್ಯಕ್ತಿ ವಿರೋಧ ಪಕ್ಷಗಳಲ್ಲಿಲ್ಲ. ಮೋದಿ ಅವರನ್ನು ಎದುರಿಸುವ ಶಕ್ತಿ ಕಳೆದುಕೊಂಡಿರುವ ಕಾಂಗ್ರೆಸ್ ಸ್ವತಂತ್ರವಾಗಿ ನಿಲ್ಲದೆ, ಇತರೆ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಮಹಾಘಟಬಂಧನ ಮಾಡಿಕೊಂಡಿದೆ. ಆದರೆ, ಪ್ರಧಾನಿ ಅಭ್ಯರ್ಥಿ ವಿಷಯದಲ್ಲಿ ಅಪಸ್ವರ ಎದ್ದಿದೆ. ಪ್ರತಿ ಬೂತ್ ಮಟ್ಟದಲ್ಲಿ ಬಿಜೆಪಿಗೆ ಶೇ. 50ಕ್ಕಿಂತ ಹೆಚ್ಚು ಮತಗಳು ಬರುವಂತೆ ಪಕ್ಷದ ಮುಖಂಡರು ಕಾರ್ಯೋನ್ಮುಖರಾಗಬೇಕು.

| ಎಸ್.ವಿ. ಸಂಕನೂರ, ವಿಪ ಸದಸ್ಯ