ದೇಶ ಕಟ್ಟುವ ಕಾರ್ಯವಾಗಲಿ

ಮುಂಡರಗಿ: ಯುವಕ, ಯುವತಿಯರು ದೇಶದ ದೊಡ್ಡ ಶಕ್ತಿ. ಯುವಪೀಳಿಗೆ ದೇಶ ಕಟ್ಟುವ ಕಾರ್ಯ ಮಾಡಬೇಕು. ಉತ್ತಮ ನಡೆ, ನುಡಿಗಳನ್ನು ಹೊಂದುವ ಜೊತೆಗೆ ಗುರು ಹಿರಿಯರನ್ನು ಗೌರವಿಸಿ ಸುಸಂಸ್ಕೃತರಾಗಿ ಬಾಳಬೇಕು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಪಟ್ಟಣದ ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜ್​ನಲ್ಲಿ ಮಂಗಳವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಸಾಂಸ್ಕೃತಿಕ ಚಟುವಟಿಕೆ ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಕಲೆ, ಸಾಹಿತ್ಯ, ನಾಟಕ, ನೃತ್ಯವು ಸಂಸ್ಕೃತಿಯ ಅವಿಭಾಜ್ಯ ಅಂಗ. ಸಂಸ್ಕೃತಿಯು ಹೃದಯದ ಸೌಂದರ್ಯವಿದ್ದಂತೆ. ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ವೈಚಾರಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ದೇಶ ಕಟ್ಟಲು ಸಾಧ್ಯ’ ಎಂದರು.

ನಿವೃತ್ತ ಪ್ರಾಚಾರ್ಯ ಅಲ್ಲಮಪ್ರಭು ಬೆಟದೂರ ಮಾತನಾಡಿ, ಯುವಕ, ಯುವತಿಯರು ಆಧುನಿಕ ಮತ್ತು ಪ್ರಾಚೀನ ವಿಚಾರಧಾರೆಗಳು ಹೊಂದಬೇಕು. ಭಾರತ ಕಲೆ, ಸಾಹಿತ್ಯ, ಸಂಗೀತದಿಂದ ಶ್ರೀಮಂತಿಕೆ ಹೊಂದಿದೆ. ಗ್ರಾಮೀಣ ಭಾಗದಲ್ಲಿ ಮತದಾನ ಮಾಡಿದಷ್ಟು ಪಟ್ಟಣ ಭಾಗದಲ್ಲಿ ಮತದಾನ ಮಾಡುವುದಿಲ್ಲ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ತಿಳಿಸಿದರು.

ಪ್ರಾಚಾರ್ಯ ಎಸ್.ಆರ್. ಚಿಗರಿ ಅಧ್ಯಕ್ಷತೆ ವಹಿಸಿದ್ದರು. ಚೇತನ ಪಾಟೀಲ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಫಕೀರಪ್ಪ ಬಾದಾಮಿ, ನೇತ್ರಾವತಿ ಪತ್ತಾರ, ಗುಡದಪ್ಪ ತಳಗೇರಿ ಅನಿಸಿಕೆ ಹಂಚಿಕೊಂಡರು. ಈರಮ್ಮ ಬೆಲೂರ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಅನ್ನಪೂರ್ಣ ಬಾರಕೇರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಡಾ.ನಾಗರಾಜ ಹಾವಿನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಎ.ವಿ. ಹಿರೇಮಠ ಸ್ವಾಗತಿಸಿದರು. ಉಪನ್ಯಾಸಕಿ ಕಾವೇರಿ ನಿರೂಪಿಸಿದರು. ಉಪನ್ಯಾಸಕ ಡಾ.ಮಿಟ್ಯಾ ನಾಯ್ಕ ವಂದಿಸಿದರು.

Leave a Reply

Your email address will not be published. Required fields are marked *