ದೇಶಾದ್ಯಂತ ಏಕರೂಪ ಮತದಾರರ ಪಟ್ಟಿ

ವಿಜಯವಾಣಿ ವಿಶೇಷ ಕಾರವಾರ: ಇನ್ನು ಮುಂದೆ ಒಬ್ಬ ವ್ಯಕ್ತಿ ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇಟ್ಟುಕೊಳ್ಳುವಂತಿಲ್ಲ. ಚುನಾವಣಾ ಆಯೋಗ ದೇಶಾದ್ಯಂತ ಏಕರೂಪ ಮತದಾರರ ಪಟ್ಟಿ ನೋಂದಣಿ ವ್ಯವಸ್ಥೆ ಜಾರಿಗೆ ತಂದಿದ್ದು, ರಾಜ್ಯದಲ್ಲಿ ಉತ್ತರ ಕನ್ನಡ ಸೇರಿ ಐದು ಜಿಲ್ಲೆಗಳಲ್ಲಿ ಈ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಅಳವಡಿಸಲಾಗುತ್ತಿದೆ.

ಮತದಾರರ ನೋಂದಣಿ ಅಧಿಕಾರಿ (ಇಆರ್​ಒ -ನೆಟ್ )ಎಂಬ ತಂತ್ರಾಂಶವನ್ನು ಭಾರತ ಚುನಾವಣಾ ಆಯೋಗ ಇಡೀ ದೇಶದಲ್ಲಿ ಜಾರಿಗೆ ತಂದಿದೆ. ಕರ್ನಾಟಕದ ಬಹುತೇಕ ಎಲ್ಲ ರಾಜ್ಯಗಳು ಈಗಾಗಲೇ ಈ ತಂತ್ರಾಂಶ ಅಳವಡಿಸಿಕೊಂಡಿವೆ. ಕರ್ನಾಟಕದಲ್ಲಿ ಈಗ ಪ್ರಾಯೋಗಿಕವಾಗಿ ಉತ್ತರ ಕನ್ನಡ, ಮಂಗಳೂರು, ಮಂಡ್ಯ, ಬಳ್ಳಾರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಜಾರಿಯಾಗುತ್ತಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಎಲ್ಲ ಜಿಲ್ಲೆಗಳಿಗೆ ತೆರಳಿ ಈಗಾಗಲೇ ತರಬೇತಿ ನೀಡಿದ್ದಾರೆ. ಒಂದು ತಿಂಗಳಲ್ಲೇ ಹೊಸ ನೋಂದಣಿ ವ್ಯವಸ್ಥೆ ಪ್ರಾರಂಭವಾಗುವ ಸಾಧ್ಯತೆ ಇದೆ.  ಸದ್ಯ ಕರ್ನಾಟಕದಲ್ಲಿ ಮತದಾರರ ನೋಂದಣಿ ನಿರ್ವಹಣಾ ತಂತ್ರಾಂಶ(ಇಆರ್​ಎಂಎಸ್)ದ ಮೂಲಕ ಮತದಾರರ ದಾಖಲೆಗಳನ್ನು ನಿರ್ವಹಿಸಲಾಗುತ್ತಿದೆ. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ. ಈಗ ಆಯೋಗ ಜಾರಿಗೆ ತರುತ್ತಿರುವ ಇಆರ್​ಒ-ನೆಟ್ ಇನ್ನಷ್ಟು ನವೀಕರಿಸಿದ ತಂತ್ರಾಂಶವಾಗಿದೆ.

ಏನಿದರ ಪ್ರಯೋಜನ..?

ಬೇರೆ ರಾಜ್ಯದ ಹಲವರು ನಮ್ಮ ರಾಜ್ಯಕ್ಕೆ ಬಂದು ನೆಲೆಸಿ ಇಲ್ಲಿ ಮತದಾರರ ಗುರುತಿನ ಚೀಟಿ ಪಡೆಯುತ್ತಿದ್ದರು. ಅಲ್ಲದೆ, ತಮ್ಮ ರಾಜ್ಯದಲ್ಲೂ ಗುರುತಿನ ಚೀಟಿ ಹೊಂದಿರುತ್ತಿದ್ದರು. ರಾಜ್ಯದ ಹಲವರು ಇಲ್ಲಿ ತಮ್ಮ ಮನೆ, ಆಸ್ತಿ ಸಲುವಾಗಿ ಇಲ್ಲಿ ಮತದಾರರ ಗುರುತಿನ ಚೀಟಿ ಹೊಂದಿ ಹೊರ ರಾಜ್ಯದಲ್ಲೂ ಮತ್ತೊಂದು ಗುರುತಿನ ಚೀಟಿ ಹೊಂದಿರುತ್ತಿದ್ದರು. ಇನ್ನು ಮುಂದೆ ಇಂಥ ವ್ಯವಸ್ಥೆಗೆ ತಡೆ ಬೀಳಲಿದೆ. ಒಂದು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಬಂದರೆ ಇನ್ನೊಂದು ಕಡೆ ತನ್ನಿಂದ ತಾನೇ ಹೆಸರು ಅಳಿಸಿಹೋಗಲಿದೆ. ಅಲ್ಲದೆ, ರಾಜ್ಯದಿಂದ ರಾಜ್ಯಕ್ಕೆ ಮತದಾರರ ಹೆಸರಿನ ವರ್ಗಾವಣೆ ಸುಲಭವಾಗಲಿದೆ. ಈ ಮೊದಲು ತಹಸೀಲ್ದಾರರ ಹಂತದಲ್ಲೇ ಮತದಾರರ ಪಟ್ಟಿಗೆ ಅಧಿಕೃತ ಅನುಮೋದನೆ ದೊರೆಯುತ್ತಿತ್ತು. ಈಗ ಉಪವಿಭಾಗಾಧಿಕಾರಿ ಹಂತದಲ್ಲಿ ದೊರೆಯುತ್ತದೆ. ಇದರಿಂದ ಪಟ್ಟಿಗೆ ಹೆಚ್ಚು ಮೌಲ್ಯ ದೊರೆಯಲಿದೆ. ಅಲ್ಲದೆ, ಒಂದು ಮತದಾನ ಅರ್ಜಿಗೆ ಸಂಬಂಧಿಸಿದಂತೆ ಪ್ರತಿ ಅಧಿಕಾರಿ ದಾಖಲಿಸಿದ ಷರಾವನ್ನು ಇಆರ್​ಒ ನೆಟ್​ನಲ್ಲಿ ಗಮನಿಸಬಹುದು. ಇನ್ನು ಆನ್​ಲೈನ್​ನಲ್ಲಿ ಮತದಾರರ ಪಟ್ಟಿಗೆ ಹೆಸರು ನೋಂದಣಿ, ಬದಲಾವಣೆ ಮುಂತಾದ ಅರ್ಜಿ ಸಲ್ಲಿಕೆ ಇನ್ನಷ್ಟು ಸುಲಭವಾಗಲಿದೆ. ಜತೆಗೆ ಬಿಎಲ್​ಒ ನೆಟ್ ಎಂಬ ಇನ್ನೊಂದು ತಂತ್ರಾಂಶವಿದ್ದು (ಇನ್ನೂ ಜಾರಿಯಾಗಿಲ್ಲ)ಅದರಲ್ಲಿ ನೇರವಾಗಿ ಮತದಾರರ ನೋಂದಣಿ ಅಧಿಕಾರಿಯೇ ಆನ್​ಲೈನ್​ನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬಹುದಾಗಿದೆ.

 ಉತ್ತರ ಕನ್ನಡ ಜಿಲ್ಲೆಯ ಉಪವಿಭಾಗಾಧಿಕಾರಿಗಳಿಗೆ ಹಾಗೂ ಮತದಾರರ ನೋಂದಣಿ ಅಧಿಕಾರಿಗಳಿಗೆ ಹೊಸ ತಂತ್ರಾಂಶದ ಕುರಿತು ತರಬೇತಿ ನೀಡಲಾಗಿದೆ. ಇಆರ್​ಎಂಎಸ್​ನಿಂದ ಇಆರ್​ಒ ನೆಟ್​ಗೆ ಮತದಾರರ ಪಟ್ಟಿ ವರ್ಗಾಯಿಸಲು ಚುನಾವಣಾ ಆಯೋಗದಿಂದ ಅಧಿಕೃತ ಸೂಚನೆ ಇನ್ನೂ ಬರಬೇಕಿದೆ. 
ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ, ಉತ್ತರ ಕನ್ನಡ