ದೇಶಪ್ರೇಮವನ್ನು ರೂಢಿಸಿಕೊಳ್ಳಿ

ಅನಿತಾ ನರೇಶ್ ಮಂಚಿ ಅವರ ‘ಮೊನ್ನೆ ನೀವು ನೀಡಿದ ಬಲಿದಾನ ವ್ಯರ್ಥವಲ್ಲ ಸಹೋದರರೇ’ ಎಂಬ ಶೀಷಿಕೆಯ ಲೇಖನ (ವಿಜಯವಾಣಿ ಫೆ. 28) ದೇಶದ್ರೋಹಿಗಳಾಗಿರುವವರು ದೇಶಪ್ರೇಮಿಗಳಾಗಿ ಪರಿವರ್ತನೆಗೊಳ್ಳಲು ಅತ್ಯಗತ್ಯವಾದ ಆತ್ಮವಿಮರ್ಶೆ ಮಾಡಿಕೊಳ್ಳಲು ಪ್ರೇರಕವೂ ಪೂರಕವೂ ಆಗಿದೆ ಹಾಗೂ ನನ್ನ ಮನಸ್ಸಿನ ಅನೇಕ ಅನಿಸಿಕೆಗಳ ಪೈಕಿ ಕೆಲವನ್ನು ವ್ಯಕ್ತಪಡಿಸಲು ಸ್ಪೂರ್ತಿ ನೀಡಿದೆ. ಭಾರತದ ಬಹುಬಗೆಯ ಭೌಗೋಳಿಕ ಸಂಪನ್ಮೂಲಗಳನ್ನು, ಆಯಾ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸೌಲಭ್ಯಗಳನ್ನು ಬಳಸಿಕೊಂಡು ಬದುಕುತ್ತಿರುವವರು ಯಾವುದೇ ಭಾಷೆ, ಜಾತಿ, ಧರ್ಮಗಳವರಾದರೂ ಈ ದೇಶಕ್ಕೆ ಕೃತಜ್ಞರಾಗಿರಬೇಕು. ಯಾರೂ ದೇಶದ್ರೋಹಿಗಳಾಗಿ ರೂಪುಗೊಳ್ಳಬಾರದು. ತನ್ನ ಪಾಡಿಗೆ ತಾನಿರುವ ಭಾರತವನ್ನು ಕೆಣಕುವ ಹಾಗೂ ಇಲ್ಲಿನ ಶಾಂತಿ-ಸುವ್ಯವಸ್ಥೆಗಳಿಗೆ ಧಕ್ಕೆಯುಂಟುಮಾಡುವ ನೆರೆಯ ಶತ್ರುದೇಶದ ವಿಧ್ವಂಸಕರನ್ನು ತೀವ್ರವಾಗಿ ಖಂಡಿಸಬೇಕು. ಭಾರತದ ಮೂರೂ ಸೇನಾವ್ಯವಸ್ಥೆಗಳ ನೈತಿಕ ಸ್ಥೈರ್ಯವನ್ನು ವೃದ್ಧಿಸಲು ಮುಂದಾಗಬೇಕು. ಪ್ರಸ್ತುತ ಒದಗಿರುವ ಅನಪೇಕ್ಷಿತ ಮತ್ತು ಅಪಾಯಕಾರಿ ಪರಿಸ್ಥಿತಿ ಹಾಗೂ ಅದರ ದುಷ್ಪರಿಣಾಮಗಳನ್ನು ನಿವಾರಿಸುವ ಹೊಣೆಹೊತ್ತಿರುವ ಕೇಂದ್ರ ಸರ್ಕಾರಕ್ಕೂ ಅಭಿನಂದಿಸಬೇಕು ಮತ್ತಷ್ಟು ಉತ್ತೇಜಿಸಬೇಕು.

ಆದರೆ, ಕೆಲವರು ಮಾಡಿದ್ದೇನು? ಪುಲ್ವಾಮಾದಲ್ಲಿ ಉಗ್ರರಿಂದ ಕೇಂದ್ರ ಮೀಸಲು ಪೊಲೀಸ್ ಪಡೆಯ 44 ಸಿಬ್ಬಂದಿಯ ದುರಂತ ಅಂತ್ಯವಾದಾಗ, ಪಾಕಿಸ್ತಾನ-ಪ್ರೇರಿತ ವಿಧ್ವಂಸಕರ ಈ ಕುಕೃತ್ಯವನ್ನು ಖಂಡಿಸುವ ಬದಲು, ಉಗ್ರದಾಳಿಗೆ ಪ್ರತಿಯಾಗಿ ಭಾರತಕ ಕೈಗೊಂಡ ಸರ್ಜಕಲ್ ಸ್ಟ್ರೈಕ್​ಗೆ ಪುರಾವೆ ಕೇಳಲು ಮುಂದಾದರು. ಇಂಥವರಲ್ಲಿ ರಾಜಕೀಯ ಎದುರಾಳಿಗಳು ಮತ್ತು ಕೆಲ ಬುದ್ಧಿಜೀವಿಗಳೂ ಇರುವುದು ವಿಷಾದನೀಯ. ಹೀಗೆ ಇಬ್ಬಗೆಯ ನೀತಿ ಅನುಸರಿಸುವವರು, ಹಳದಿ ಕನ್ನಡಕ ಧರಿಸಿ ಪೂರ್ವಗ್ರಹಪೀಡಿತರಾಗಿ ರಾಜಕೀಯ ಪ್ರಯೋಜನಗಳನ್ನು ಪಡೆಯಲು ಹವಣಿಸುವ ‘ದುರಾಲೋಚಕರು’ ದೇಶಪ್ರೇಮವನ್ನು ರೂಢಿಸಿಕೊಳ್ಳುವುದು ಯಾವಾಗ?

| ನಾ.ಕು. ಗಣೇಶ್, ಬೆಂಗಳೂರು

ವೈಯಕ್ತಿಕ ದೂಷಣೆ ಬೇಡ

ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡಿದ್ದು, ಇನ್ನೇನು ಪ್ರಚಾರ ರಂಗೇರಲಿದೆ. ಎಲ್ಲ ಪಕ್ಷಗಳು ಮತದರಾರರ ಮನ ಗೆಲ್ಲಲು ಪೈಪೋಟಿ ನಡೆಸಲಿದ್ದು, ಪ್ರಚಾರದ ಹೊಸ ಹೊಸ ತಂತ್ರಗಳಿಗೆ ಮೊರೆ ಹೋಗಲಿವೆ. ಕೇಂದ್ರ ನಾಯಕರುಗಳ ಪ್ರವಾಸ, ರ್ಯಾಲಿಗಳು ನಡೆಯುವುದು ಸ್ವಾಭಾವಿಕವೇ. ಪ್ರಚಾರಕಾರ್ಯ ಚುನಾವಣೆ ಎಂಬ ಉತ್ಸವದ ಬಹುಮುಖ್ಯ ಭಾಗ ಎಂಬುದೇನೋ ನಿಜ. ಆದರೆ, ಈ ಅವಧಿಯಲ್ಲಿ ನಾಯಕರು, ಜನಪ್ರತಿನಿಧಿಗಳು ಅಭಿವೃದ್ಧಿ ಬಗ್ಗೆ, ರಚನಾತ್ಮಕ ವಿಷಯಗಳ ಬಗ್ಗೆ ಮಾತನಾಡಲಿ. ಅದನ್ನು ಬಿಟ್ಟು ವೈಯಕ್ತಿಕ ದೂಷಣೆ, ಟೀಕೆಗಳು ಅನಗತ್ಯ ದೇಷವನ್ನು ಹುಟ್ಟುಹಾಕುತ್ತವೆ. ಮಾತನಾಡುವಾಗ ಸಂಯಮ ಕಳೆದುಕೊಳ್ಳದೆ, ಮಾತಿನ ಮಂಟಪದದಲ್ಲಿ ಉತ್ತಮ ಸಂಗತಿಗಳನ್ನು ಮುಂದಿಡಲಿ.

| ರವಿ, ಮಂಗಳೂರು