ದೇಶದ ಸಮಸ್ಯೆಗಳಿಗೆ ವಿವೇಕಾನಂದ ಸಂದೇಶಗಳೇ ಪರಿಹಾರ

ರಾಣೆಬೆನ್ನೂರ: ಭಾರತದ ಪ್ರಸ್ತುತ ಹಾಗೂ ಭವಿಷ್ಯದ ಸಮಸ್ಯೆಗಳಿಗೆ ಸ್ವಾಮಿ ವಿವೇಕಾನಂದರ ಜೀವನವೇ ಉತ್ತರ ಹಾಗೂ ಅವರ ಸಂದೇಶಗಳೇ ಪರಿಹಾರ ಎಂದು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಪ್ರಕಾಶಾನಂದಜೀ ಮಹಾರಾಜ್ ಹೇಳಿದರು.

ನಗರದ ಮಾಗೋಡು ರಸ್ತೆಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 157ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.

ಸ್ವಾಮಿ ವಿವೇಕಾನಂದರದು ಬಹುಮುಖ ಪ್ರತಿಭೆಯಿಂದ ಕೂಡಿದ ವ್ಯಕ್ತಿತ್ವವಾಗಿತ್ತು. ಆದ್ದರಿಂದಲೇ ಅವರ ನಂತರ ಬಂದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಅವರು ಪ್ರೇರಣೆಯಾಗುವುದಕ್ಕೆ ಸಾಧ್ಯವಾಯಿತು. ದೇಶ ಭಕ್ತಿಯ ವಿಷಯದಲ್ಲಿ ಮಹಾತ್ಮಾ ಗಾಂಧೀಜಿ, ಸುಭಾಶಚಂದ್ರ ಬೋಸ್ ಆದಿಯಾಗಿ ಅನೇಕ ಮಹನೀಯರು ವಿವೇಕಾನಂದರಿಂದ ಪ್ರೇರಣೆ ಪಡೆದರು ಎಂದರು.

ರವಿಂದ್ರನಾಥ ಠಾಗೋರ್, ಟಾಲ್​ಸ್ಟಾಯ್ ಅವರಂತಹ ಪ್ರಸಿದ್ಧ ಕವಿಗಳು ವಿವೇಕಾನಂದರ ಪ್ರಭಾವಕ್ಕೆ ಒಳಗಾದರು. ಐನ್​ಸ್ಟೀನ್, ನಿಕೋಲಸ್ ಚೆಸ್ಲಾ ಮೊದಲಾದ ಪ್ರಸಿದ್ಧ ವಿಜ್ಞಾನಿಗಳು ವಿವೇಕಾನಂದರಿಂದ ಹೊಸ ಬೆಳಕನ್ನು ಕಂಡುಕೊಂಡರು. ವಿವಿಧ ಕ್ಷೇತ್ರಗಳಲ್ಲಿ ಪ್ರಭಾವ ಬೀರುವಷ್ಟು ವಿವೇಕಾನಂದರು ಪರಿಣತಿ ಹೊಂದಿದ್ದರು ಎಂದರು.

ಜ. 12ರಂದು ವಿಶ್ವದಲ್ಲಿ ವಿವೇಕಾನಂದರ ಜಯಂತಿ ಆಚರಿಸಲಾಗುತ್ತದೆ. ದೇಶದಲ್ಲಿ ಅಂದು ರಾಷ್ಟ್ರೀಯ ಯುವ ದಿನವೆಂದು ಆಚರಿಸಲಾಗುತ್ತದೆ. ಆದರೆ, ಹಿಂದು ಪಂಚಾಂಗದ ಪ್ರಕಾರ ಈ ಭಾನುವಾರ ಸ್ವಾಮೀಜಿ ಅವರ ಜಯಂತ್ಯುತ್ಸವ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಆಶ್ರಮದಲ್ಲಿ ಬೆಳಗ್ಗೆ ಮಂಗಳಾರತಿ, ಉಷಃಕೀರ್ತನೆ, ಹೋಮ, ಸಂಕೀರ್ತನೆ, ಮಂಗಳಾರತಿ, ಪ್ರಸಾದ ವಿನಿಯೋಗ ಮತ್ತಿತರರ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು.

ಶ್ರೀ ಗುರುದೇವ ಶರಣಾನಂದಜೀ ಮಹಾರಾಜ್, ಪ್ರಮುಖರಾದ ಡಾ. ಚಂದ್ರಶೇಖರ ಕೇಲಗಾರ, ಸೋಮಶೇಖರ ಮುಂಡರಗಿ, ಎಸ್.ಟಿ. ತಾವರಗೇರಿ, ಅಶ್ವಿನ್ ಕಬ್ಬೂರ, ಪ್ರಭಾಕರ ಮುದಗಲ್ ಮತ್ತಿತರರಿದ್ದರು.