ದೇಶದ ಸಂಸ್ಕೃತಿಯಲ್ಲಿ ಗೃಹಸ್ಥಾಶ್ರಮ ಶ್ರೇಷ್ಠ

ಹುಬ್ಬಳ್ಳಿ: ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ಬಹಳ ಪಾವಿತ್ರ್ಯ ಸ್ಥಾನವಿದೆ. ನಾಲ್ಕು ಆಶ್ರಮಗಳಲ್ಲಿ ಗೃಹಸ್ಥಾಶ್ರಮ ಶ್ರೇಷ್ಠವಾಗಿದೆ. ಗೃಹಸ್ಥಾಶ್ರಮದಲ್ಲಿ ಪದಾರ್ಪಣೆ ಮಾಡಿದ ದಂಪತಿಗಳ ಬಾಳು ಉಜ್ವಲವಾಗಲಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯರು ಶುಭ ಹಾರೈಸಿದರು.

ತಾಲೂಕಿನ ಪಾಲಿಕೊಪ್ಪ ಗ್ರಾಮದ ಶ್ರೀ ಹಾದಿ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮುಕ್ತಿಮಂದಿರದ ಶ್ರೀ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಮತ್ತು ಬಂಕಾಪುರದ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಸಮಾರಂಭದಲ್ಲಿ ಪಾಲ್ಗೊಂಡು ಉಪದೇಶಾಮೃತ ನೀಡಿದರು.

ಶ್ರೀ ಹಾದಿ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ, ಶ್ರೀ ರಂಭಾಪುರಿ ಜಗದ್ಗುರು ಮತ್ತು ಉಭಯ ಶ್ರೀಗಳಿಗೆ ಗೌರವಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೊಷ ಜರುಗಿತು. ಉಮೇಶ ಕುಸುಗಲ್ಲ ಸ್ವಾಗತಿಸಿದರು. ಬಸವರಾಜ ಹೊಂಬಳ ನಿರೂಪಿಸಿದರು. ಎಸ್.ವಿ. ಸೋಮಣ್ಣನವರ ಹಾಗೂ ಕುಮಾರ ಅಭಿಷೇಕ ಸಂಗೀತ ಸೇವೆ ಸಲ್ಲಿಸಿದರು.

Leave a Reply

Your email address will not be published. Required fields are marked *