
ಹೊನ್ನಾಳಿ: ನಮ್ಮ ಸೈನಿಕರು ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಇವರನ್ನು ಆದರ್ಶವಾಗಿಟ್ಟುಕೊಳ್ಳಬೇಕೇ ಹೊರತು ಸಿನಿಮಾ ನಟರು, ಮಾಡಲ್ಗಳನ್ನಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಿರಂಗಾಯಾತ್ರೆಯಲ್ಲಿ ಮಾತನಾಡಿ, ದೇಶಕ್ಕಾಗಿ ಪ್ರಾಣವನ್ನೂ ಲೆಕ್ಕಿಸದೆ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಯೋಧರನ್ನು ಗೌರವಿಸಿ ಎಂದರು.
ಆಪರೇಷನ್ ಸಿಂಧೂರದಲ್ಲಿ ಉಗ್ರರನ್ನು ಮತ್ತು ಅವರ ಅಡಗು ತಾಣಗಳನ್ನು ಧ್ವಂಸಗೊಳಿಸಿ ಪಾಕಿಗಳಿಗೆ ತಕ್ಕ ಪಾಠ ಕಲಿಸಿದ ಭಾರತದ ಯೋಧರು ನಿಜವಾದ ಹೀರೋಗಳು. ಅವರನ್ನು ಅನುಕರಣೆ ಮಾಡಿ ಎಂದು ಯುವಕರಿಗೆ ತಿಳಿಸಿದರು.
ವಿಪಕ್ಷಗಳು ಕೇಂದ್ರದ ಮೇಲೆ ಟೀಕಾಪ್ರಹಾರ ಮಾಡಿದ್ದರೂ ತಲೆ ಕೆಡಿಸಿಕೊಳ್ಳದ ಪ್ರಧಾನಿ ಮೋದಿ ಅವರು ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಯುದ್ಧದಲ್ಲಿ ವಿಜೇತರಾದರು ಎಂದರು.
ಆರ್ಥಿಕತೆಯಲ್ಲಿ ಹಿಂದುಳಿದಿದ್ದ ಭಾರತ ಕಳೆದ 11 ವರ್ಷಗಳಿಂದ ಎಲ್ಲ ಕ್ಷೇತ್ರದಲ್ಲೂ ದಾಪುಗಾಲು ಇಡುತ್ತಿದೆ. ಕೇಂದ್ರ ಸರ್ಕಾರ ವಿಶೇಷವಾಗಿ ರಕ್ಷಣಾ ಇಲಾಖೆಗೆ ಲಕ್ಷಾಂತರ ಕೋಟಿ ಹಣ ಮೀಸಲಿಟ್ಟಿದೆ, ಇದಕ್ಕೆ ಕಾರಣ ಪ್ರಧಾನಿ ನರೇಂದ್ರಮೋದಿ. ಆರ್ಥಿಕ ಸದೃಢತೆ ಸಾಧಿಸುತ್ತಿರುವ ಭಾರತ ಇದೀಗ ಜಪಾನ್ ಅನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ ಎಂದು ಹೇಳಿದರು.
ಮಾಜಿ ಸೈನಿಕರಾದ ಎಂ. ವಾಸಪ್ಪ, ಸಿದ್ದೇಶ್ ಬೆನಕನಹಳ್ಳಿ, ಹನುಮಂತಪ್ಪ, ಬಿಜೆಪಿ ತಾಲೂಕಾಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ. ಸುರೇಶ್, ಸುರೇಂದ್ರನಾಯ್್ಕ ರಮೇಶ್ಗೌಡ, ತೊಳಕಿ ಹಾಲೇಶ್, ಎಸ್.ಎಸ್. ಬೀರಪ್ಪ, ಸಿದ್ದಪ್ಪ, ಕುಳಗಟ್ಟೆ ರಂಗನಾಥ್, ಪುರಸಭೆ ಮಾಜಿ ಅಧ್ಯಕ್ಷ ರಂಗನಾಥ್, ಮಾರುತಿನಾಯ್್ಕ ಇತರರು ಇದ್ದರು.