More

  ದೇಶದ ಭವಿಷ್ಯಕ್ಕೆ ಯುವಜನರು ಕಡ್ಡಾಯವಾಗಿ ಮತದಾನ ಮಾಡಿ / ಪದ್ಮ ಬಸವಂತಪ್ಪ,

  ವಿಜಯವಾಣಿ ಸುದ್ದಿಜಾಲ ಕೋಲಾರ

  ದೇಶದ ಭವಿಷ್ಯವನ್ನು ಯುವಜನತೆಯಿಂದ ಕಾಣಲು ಸಾಧ್ಯ , ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿದು ಬೆಳೆಯಬೇಕು ಎಂದರೆ ಯುವಜನತೆ ಕಡ್ಡಾಯವಾಗಿ ಮತದಾರರಾಗಿ ಮತದಾನ ಮಾಡಬೇಕು ಎಂದು ಜಿಪಂ ಸಿಇಒ ಪದ್ಮ ಬಸವಂತಪ್ಪ ತಿಳಿಸಿದರು.

  ನಗರದ ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಮತದಾರರ ಜಾಗೃತಿ ಸಮಿತಿ ಹಾಗೂ ಜಿಪಂ ವತಿಯಿಂದ ಮತದಾನ ನೋಂದಣಿ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ೧೮ ವರ್ಷ ತುಂಬಿದವರು ಮತದಾನಕ್ಕೆ ನೋಂದಣಿ ಮಾಡಿಸಿಲ್ಲದೆ ಇರುವವರು ಕೂಡಲೇ ಮಾಡಿಸಿಕೊಳ್ಳಿ ಸಮಾಜದ ಜೊತೆಗೆ ದೇಶದ ಭವಿಷ್ಯಕ್ಕೆ ನಿಮ್ಮ ಮತ ಅವಶ್ಯಕ ಇದ್ದು, ಡಿ.೨, ಮತ್ತು ೩ರಂದು ಪ್ರತಿ ಬೂತ್ ಮಟ್ಟದಲ್ಲಿ ವಿಶೇಷ ಅಭಿಯಾನ ನಡೆಯಲಿದೆ. ಕಾಲೇಜಗಳಲ್ಲಿ ಕೂಡ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

  ಯುವ ಮತದಾರರು ನೋಂದಣಿ ಮಾಡಿಕೊಳ್ಳಲು ಜನನ ಪ್ರಮಾಣಪತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಆಧಾರ್ ಸಂಖ್ಯೆ ಇದ್ದರೆ ಸಾಕು, ಆಧಾರ್ ಜೋಡಣೆ ಇಲ್ಲದವರು ಕೂಡಲೇ ಮಾಡಿಸಿಕೊಳ್ಳಿ ಎಂದರು.

  ವಿಧ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಯಾವ ರೀತಿಯ ವಿದ್ಯಮಾನಗಳು ನಡೆಯುತ್ತವೆ ಎಂಬುದನ್ನು ತಿಳಿಯಲು ನಿತ್ಯ ಪತ್ರಿಕೆ ಓದಬೇಕು. ನಿಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದು ಗೊತ್ತಾಗದಿದ್ದರೆ, ಯುವ ಜನತೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.

  ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ್ ಮಾತನಾಡಿ, ೧೮ ವರ್ಷ ತುಂಬುವವರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೇವೆ. ಇದಕ್ಕೆ ನಿರೀಕ್ಷಿತ ಮತದಾರರ ಪಟ್ಟಿ ಎನ್ನುತ್ತೇವೆ. ನೋಂದಣಿ ಮಾಡಿಕೊಂಡರೆ ಪೋಸ್ಟ್ ಮೂಲಕ ಉಚಿತವಾಗಿ ಎಪಿಕ್ ಕಾರ್ಡ್ ವಿತರಣೆ ಮಾಡುತ್ತಿದ್ದೇವೆ. ಬಿಎಲ್‌ಓ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಮತದಾನವನ್ನು ನಿಷ್ಪಕ್ಷಪಾತವಾಗಿ ಮತದಾನ ಮಾಡುವಲ್ಲಿ ಮತದಾರರು ವಿಫಲರಾಗಿದ್ದಾರೆ. ಇದಕ್ಕೆ ಪ್ರತಿ ಹಂತದಲ್ಲೂ ಜಾಗೃತಿ ಅರಿವು ಮೂಡಿಸುತ್ತಾ ಬಂದಿದ್ದೇವೆ ಎಂದರು.

  ಪ್ರಾಸ್ತಾವಿಕವಾಗಿ ಪ್ರಾಧ್ಯಾಪಕ ಡಾ.ಆರ್ ಶಂಕರಪ್ಪ ಮಾತನಾಡಿ, ಸಂವಿಧಾನ ಜಾರಿಗೆ ಬಂದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಜನಪ್ರತಿನಿಧಿಗಳ ಆಯ್ಕೆ ನಡೆಯುತ್ತಾ ಇದೆ. ೨೦೧೧ ರಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಮಾಡಲಾಗುತ್ತಾ ಇದೆ. ಮತದಾನ ಹೆಚ್ಚಳ ಮಾಡಲು ವಿವಿಧ ಚಟುವಟಿಕೆಗಳನ್ನು ನಡೆಸಿ ಅರಿವು ಜಾಗೃತಿ ಮೂಡಿಸಲಾಗುತ್ತಿದ್ದು, ಇದಕ್ಕೆ ಪ್ರತಿಯೊಬ್ಬರ ಸ್ಪಂದನೆ ಮುಖ್ಯವಾಗಿದೆ ಎಂದು ತಿಳಿಸಿದರು.

  ಕಾಲೇಜಿನ ಪ್ರಾಂಶುಪಾಲ ಕೆ.ಶ್ರೀನಿವಾಸಗೌಡ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ಕಾರವನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮಗಳ ಮೇಲೆ ಇದೆ. ಒಳ್ಳೆಯ ವ್ಯಕ್ತಿಗಳನ್ನು ಆಯ್ಕೆ ಮಾಡಿ ಉತ್ತಮ ಸಮಾಜವನ್ನು ಸ್ಥಾಪಿಸಿಕೊಳ್ಳಬೇಕಾಗಿದೆ. ಇದಕ್ಕೆ ಪೂರಕವಾಗಿ ೧೮ ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನದ ನೋಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದರು.

  ಮತದಾನ ಜಾಗೃತಿ ಕುರಿತಾಗಿ ನಡೆದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಪಂ ಸಹಾಯಕ ಯೋಜನಾಧಿಕಾರಿ ಗೋವಿಂದಗೌಡ, ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಮುರಳೀಧರ್, ಪ್ರಾಧ್ಯಾಪಕರಾದ ಸತೀಶ್, ಚನ್ನನರಸಿಂಹಪ್ಪ, ಅನಂತಮೂರ್ತಿ, ರಾಮಕೃಷ್ಣಯ್ಯ, ಇಂದ್ರಮ್ಮ, ಹೇಮಾಮಾಲಿನಿ, ಮುನಿರಾಜು ಮುಂತಾದವರು ಇದ್ದರು.

  ಚಿತ್ರ ೨೧ ಕೆ.ಎಲ್.ಆರ್. ೦೨ : ನಗರದ ಪ್ರಥಮದರ್ಜೆ ಕಾಲೇಜಿನಲ್ಲಿ ಮತದಾರರ ಜಾಗೃತಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಸಿ.ಇ.ಓ. ಪದ್ಮ ಬಸವಂತಪ್ಪ, ಪ್ರಾಂಶುಪಾಲ ಕೆ.ಶ್ರೀನಿವಾಸಗೌಡ, ಡಾ.ಶಂಕರಪ್ಪ ಇದ್ದರು.

  ದೇಶದ ಭವಿಷ್ಯಕ್ಕೆ ಯುವಜನರು ಕಡ್ಡಾಯವಾಗಿ ಮತದಾನ ಮಾಡಿ / ಪದ್ಮ ಬಸವಂತಪ್ಪ,

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts