ದೇಶದ ಪರಂಪರೆ ಸಾರುವ ಶಿಲ್ಪಕಲೆಗಳ ನಿರ್ಲಕ್ಷ್ಯ ಸಲ್ಲ

ನರಗುಂದ: ಜಗತ್ತಿಗೆ ಸಂಸ್ಕೃತಿಯ ಪರಿಮಳ ಬೀರಿದ ಭಾರತ ದೇಶ ಶಿಲ್ಪಕಲೆಗಳ ತವರೂರಾಗಿದೆ. ಇಲ್ಲಿನ ಪ್ರತಿ ಶಿಲೆಯೂ ಐತಿಹಾಸಿಕ ಪರಂಪರೆ ಸಾರುತ್ತವೆ. ಇಂಥ ಸ್ಥಳಗಳು ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ವಿನಾಶದಂಚಿನಲ್ಲಿರುವುದು ದುರ್ದೈವದ ಸಂಗತಿ ಎಂದು ಪಾರಂಪರಿಕ ವೈದ್ಯ ಎಚ್.ಟಿ. ಮಳಲಿ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಿಂದಗಿ ಪಟ್ಟಾಧ್ಯಕ್ಷರ ಸ್ಮರಣೋತ್ಸವ ಹಾಗೂ ವಿಶ್ವ ಪಾರಂಪರಿಕ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಐತಿಹಾಸಿಕ ತಾಣಗಳ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇವಾಲಯಗಳು ಕೇವಲ ಧಾರ್ವಿುಕತೆಯ ಪ್ರತೀಕವಲ್ಲ. ದೇಶದ ಸಂಸ್ಕೃತಿ, ಆಚಾರ, ವಿಚಾರಗಳ ದ್ಯೋತಕವಾಗಿವೆ. ಮುಜರಾಯಿ ಇಲಾಖೆಯ ವರದಿ ಪ್ರಕಾರ ಕರ್ನಾಟಕದಲ್ಲಿ ಸುಮಾರು 35000 ಪುರಾತನ ದೇವಸ್ಥಾನಗಳಿವೆ. ಅವು ಅಳಿವಿನಂಚಿನಲ್ಲಿರುವುದು ಕಳವಳದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಡಾ.ವಾಗೀಶ ಪಂಡಿತಾರಾದ್ಯ ಶಿವಾಚಾರ್ಯರು ಹಾಗೂ ಡಾಕ್ಟರೇಟ್ ಪದವಿಗೆ ಭಾಜನರಾದ ತಾಲೂಕಿನ ವಾಸನ ಗ್ರಾಮದ ಡಾ. ಎಚ್.ಟಿ. ಮಳಲಿ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ಗದುಗಿನ ಲಯಕಲಾಮನೆಯ ಶಂಕ್ರಗೌಡ ಪಾಟೀಲ ಅವರು ಸಂಗ್ರಹಿಸಿದ ಪಾರಂಪರಿಕ ಸ್ಥಳಗಳ ಛಾಯಾಚಿತ್ರ ಹಾಗೂ ಲೇಖನಗಳ ಪ್ರದರ್ಶನ ನಡೆಯಿತು. ಪ್ರಭಯ್ಯ ಹಿರೇಮಠ, ರಮೇಶ ಐನಾಪೂರ, ಶಿವಬಸಯ್ಯ ಹಿರೇಮಠ, ಇತರರು ಉಪಸ್ಥಿತರಿದ್ದರು.

1857ರಲ್ಲಿ ಬ್ರಿಟಿಷರ ವಿರುದ್ಧ ಸಂಗ್ರಾಮ ಸಾರಿದ ನರಗುಂದದ ವೀರ ಬಾಬಾಸಾಹೇಬರ ಶೌರ್ಯ ಸಾರುವ ಅರಮನೆ ಹಾಗೂ ಇತರ ಪುರಾತನ ಅವಶೇಷಗಳನ್ನು ರಕ್ಷಿಸುವಂತಾಗಬೇಕು. ಅರಮನೆಯನ್ನು ಐತಿಹಾಸಿಕ ಪ್ರವಾಸಿ ತಾಣವನ್ನಾಗಿಸುವುದರ ಜೊತೆಗೆ ನರಗುಂದ ಉತ್ಸವವನ್ನು ಕಡ್ಡಾಯವಾಗಿ ಆಚರಿಸಲು ಸರ್ಕಾರ ಮುಂದಾಗಬೇಕು.
|ಶಾಂತಲಿಂಗ ಶ್ರೀಗಳು ಭೈರನಹಟ್ಟಿ ದೊರೆಸ್ವಾಮಿ ಮಠ

Leave a Reply

Your email address will not be published. Required fields are marked *