More

  ದೇಶದ ಜನರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್

  ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಸ್ವದೇಶಿ ಜಾಗರಣ ಮಂಚ್​ನ ರಾಷ್ಟ್ರೀಯ ಸಂಘಟಕ ಕಶ್ಮೀರಿಲಾಲ ಹೇಳಿದರು.

  ನಗರದ ಕೇಶವ ಕುಂಜದಲ್ಲಿ ಶುಕ್ರವಾರ ‘ಸ್ವದೇಶಿ ಮಹತ್ವ ಮತ್ತು ಪ್ರಚಲಿತ ಬೆಳವಣಿಗೆಗಳು’ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ವಣ, ಜಮ್ಮು-ಕಾಶ್ಮೀರದಲ್ಲಿ 370ನೇ ಕಾಯ್ದೆ ರದ್ದು, ತ್ರಿವಳಿ ತಲಾಕ್ ರದ್ದತಿಯಂತಹ ಕೇಂದ್ರ ಸರ್ಕಾರದ ಮಹತ್ವದ ನಿರ್ಣಯಗಳನ್ನು ದೇಶದ ಅಲ್ಪಸಂಖ್ಯಾತರು ಶಾಂತವಾಗಿಯೇ ಸ್ವೀಕರಿಸಿದ್ದರು ಎಂದರು.

  ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಆಸಕ್ತಿ ತೋರಿತ್ತು. ಅಧಿಕಾರದಲ್ಲಿದ್ದಾಗ ಒಂದು ನೀತಿ, ಅಧಿಕಾರದಿಂದ ದೂರ ಇದ್ದಾಗ ಮತ್ತೊಂದು ನೀತಿ ಅನುಕರಿಸುವುದು ಆ ಪಕ್ಷದ ನೀತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  ಜಿಡಿಪಿ ಆಧಾರದಡಿ ದೇಶದ ಅಭಿವೃದ್ಧಿ ಅಳೆಯುವುದು ಸರಿಯಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನಶೈಲಿ ದೇಶದ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ. ಪ್ರತಿಯೊಬ್ಬರೂ ಸರ್ಕಾರಿ ನೌಕರಿ ಬೇಕೆಂಬುದು ಸರಿಯಲ್ಲ. ಸ್ವಯಂ ಉದ್ಯೋಗ ಮಾಡುವುದು ಒಳಿತು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮುದ್ರಾ ಯೋಜನೆಯ ಸಹಾಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

  ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆ ಬಗ್ಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು. ತಾವು ಖಾಸಗೀಕರಣದ ವಿರೋಧಿಯಲ್ಲ ಎಂದ ಅವರು, ಸ್ವಾತಂತ್ರ್ಯ ಹಾಗೂ ಜನಹಿತಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿರುವ ಖಾಸಗೀಕರಣವನ್ನು ವಿರೋಧಿಸುವುದು ಸರಿಯಲ್ಲ ಎಂದರು. ಗ್ರಾಮಗಳು ಅಭಿವೃದ್ಧಿ ಹೊಂದಬೇಕು. ನಗರ ಪ್ರದೇಶದಲ್ಲಿ ಸಿಗುವ ಸೌಲಭ್ಯಗಳು ಗ್ರಾಮಗಳಲ್ಲಿಯೂ ಸಿಗುವಂತಾಗಬೇಕು. ಗ್ರಾಮಗಳು ವಿಕಾಸವಾದರೆ ಇಡಿ ದೇಶ ಅಭಿವೃದ್ಧಿ ಹೊಂದಿದಂತೆ ಎಂದು ಹೇಳಿದರು.

  ದತ್ತೋಪಂತ್ ಜನ್ಮಶತಮಾನೋತ್ಸವ: ಪ್ರಮುಖ ಹಿಂದುತ್ವವಾದಿ, ಸ್ವದೇಶಿ ಜಾಗರಣ ಮಂಚ್, ಭಾರತೀಯ ಮಜ್ದೂರ ಸಂಘ, ಭಾರತೀಯ ಕಿಸಾನ್ ಸಂಘಗಳ ಸಂಸ್ಥಾಪಕರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ದತ್ತೋಪಂತ್ ಬಾಪೂರಾವ್ ಠೇಂಗಡಿ ಅವರ ಜನ್ಮಶತಮಾನೋತ್ಸವವನ್ನು 2019ರ ನ. 10ರಿಂದ ಆಚರಿಸಲಾಗುತ್ತಿದ್ದು, 2020ರ ನ. 10ರವರೆಗೆ ದೇಶದಾದ್ಯಂತ ಮುಂದುವರಿಯುತ್ತದೆ. ಈ ಕುರಿತು ಮಾಹಿತಿ ನೀಡಿದ ಕಶ್ಮೀರಿಲಾಲ, 1920ರ ನ. 10 ಠೇಂಗಡಿ ಅವರ ಜನ್ಮದಿನ. ಆರ್​ಎಸ್​ಎಸ್​ನ ಸರಸಂಘಚಾಲಕ ಮೋಹನ್ ಭಾಗವತ್ ಅವರು ನಾಗಪುರದಲ್ಲಿ ಜನ್ಮಶತಮಾನೋತ್ಸವಕ್ಕೆ ಚಾಲನೆ ನೀಡಿದ್ದು, ಪ್ರತಿ ಜಿಲ್ಲಾ ಕೇಂದ್ರದಲ್ಲಿ ಠೇಂಗಡಿ ಅವರ ಜನ್ಮಶತಮಾನೋತ್ಸವ ಆಚರಿಸಲಾಗುತ್ತಿದೆ ಎಂದರು. ಯುವಕರು, ಗ್ರಾಮಸ್ಥರಿಗೆ ಠೇಂಗಡಿಯವರ ಜೀವನ ಚರಿತ್ರೆ ಬಗ್ಗೆ ತಿಳಿಸುವುದು, ಜನರಲ್ಲಿ ದೇಶದ ಕಲ್ಪನೆ ಬಗ್ಗೆ ತಿಳಿವಳಿಕೆ ಮೂಡಿಸುವ ಮೂಲಕ ಟುಕಡೆ ಗ್ಯಾಂಗ್​ಗೆ ತಕ್ಕ ಪಾಠ ಕಲಿಸುವುದು, ಗ್ರಾಮ ಆಧಾರಿತ ವಿಕಾಸ ಬಗ್ಗೆ ಜನಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts