More

  ದೇಶದ ಅಶಕ್ತರಿಗೆ ಸಂವಿಧಾನವೇ ಆಶ್ರಯ: ಸಚಿವ ಮಾಧುಸ್ವಾಮಿ

  ತುಮಕೂರು: ಸಂವಿಧಾನ ಜಾರಿಗೆ ಬಂದ ನಂತರ ದೇಶ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸಿರುವ ಸರ್ಕಾರಗಳು ಸಾಕಷ್ಟು ಪ್ರಗತಿ ಸಾಧಿಸಿವೆ. ಅವುಗಳೆಲ್ಲವನ್ನೂ ನಾವು ಸ್ಮರಿಸಬೇಕು, ಗಾಂಧೀಜಿ ಆರಂಭಿಸಿದ್ದ ಸ್ವಚ್ಛತಾ ಆಂದೋಲಕ್ಕೆ ಪ್ರಧಾನಿ ಮೋದಿ ಕಾಯಕಲ್ಪ ನೀಡಿದ್ದು, ನಾಗರಿಕರು ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

  ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಭಾನುವಾರ 71ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು. ರಾಜಕೀಯ, ಸಾಮಾಜಿಕ ವ್ಯವಸ್ಥೆಯನ್ನು ತುಲನಾತ್ಮಕವಾಗಿ ಅವಲೋಕಿಸಿ ಪಕ್ವವಾದ ಸಂವಿಧಾನ ರಚಿಸಿದ್ದಾರೆ, ಬೃಹತ್ ಹಾಗೂ ಶ್ರೇಷ್ಟ ಸಂವಿಧಾನವಾದರೂ ಆಯಾ ಕಾಲಕ್ಕೆ ಅಗತ್ಯವಾದ ತಿದ್ದುಪಡಿಗೆ ಅವಕಾಶ ನೀಡಿರುವುದು ನಮ್ಮ ಸುದೈವ ಎಂದರು.

  ನಾವೆಲ್ಲರೂ ಸ್ವಾತಂತ್ರ್ಯ ಬಯಸಿದಾಗ ಅದು ಬರೀ ರಾಜಕೀಯ ಸ್ವಾತಂತ್ರ್ಯಕ್ಕಷ್ಟೇ ಸೀಮಿತವಾಗಲಿಲ್ಲ, ಭಾರತೀಯನ ಸ್ವಾಭಿಮಾನ, ಬದುಕು ಕಟ್ಟಿಕೊಳ್ಳಲು ಕಾನೂನು ರಚಿಸಲಾಯಿತು. ಎಲ್ಲ ಧರ್ಮ, ಜನಾಂಗಕ್ಕೂ ಸಮಾನತೆ ನೀಡಲಾಗಿದೆ, ಅಶಕ್ತರಿಗೆ ಸಂವಿಧಾನವೇ ಆಶ್ರಯವಾಗಿದೆ ಎಂದರು. ದೇಶದಲ್ಲಿ ಎಲ್ಲರಿಗೂ ಆಹಾರ, ಶಿಕ್ಷಣ ನೀಡಲಾಗುತ್ತಿದೆ. ಸಾಕ್ಷರತೆಯಲ್ಲಿ ಪ್ರಗತಿ ಸಾಧಿಸಿದ್ದೇವೆ. ವಿಶ್ವದ ಮೂರನೇ ಶಕ್ತಿ ನಮ್ಮ ಸೈನ್ಯ. ರಾಜ್ಯದಲ್ಲಿಯೂ ಸಾಕಷ್ಟು ಪ್ರಗತಿಯ ಕೆಲಸವಾಗಿದೆ, ಮಹಿಳೆಯ ರಕ್ಷಣೆಗೆ ಆಧ್ಯತೆ ನೀಡಲಾಗಿದೆ ಎಂದರು.

  ಮನಸೆಳೆದ ಮಕ್ಕಳ ನೃತ್ಯಗಳು: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸಿದ್ಧಗಂಗಾ ಪ್ರೌಢಶಾಲೆಯ 800 ಮಕ್ಕಳು ‘10..2…3, 1..2..3 ನಮ್ಮ ಬಾವುಟದ ಬಣ್ಣ ಮೂರು’ ಹಾಡಿಗೆ ನರ್ತಿಸಿದರು. ಸರ್ವೋದಯ ಪ್ರೌಢಶಾಲೆ, ಸೋಮೇಶ್ವರ ಬಾಲಿಕಾ ಪ್ರೌಢಶಾಲೆ 365 ಮಕ್ಕಳು, ಚೈತನ್ಯ ಟೆಕ್ನೊ ಶಾಲೆ ‘ಭಾರತಾಂಬೆ ನಿನ್ನ ಜನುಮ ದಿನ ಹಾಗೂ ಬೆಳ್ಳಾವಿ ಕಿಡ್ಸ್ ಇಂಟರ್ ನ್ಯಾಷನಲ್ ಶಾಲೆಯ ಮಕ್ಕಳು ‘ಮೇರಾ ಭಾರತ್ ಮಹಾನ್’ ಹಾಡಿಗೆ ಹೆಜ್ಜೆಹಾಕಿದ್ದು ಗಮನ ಸೆಳೆಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ, ಮೇಯರ್ ಲಲಿತಾ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬೆಮೆಲ್ ಕಾಂತರಾಜು, ಕೆ.ಎ.ತಿಪ್ಪೇಸ್ವಾಮಿ, ಜಿಪಂ ಉಪಾಧ್ಯಕ್ಷೆ ಶಾರದಾ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಪಂ ಸಿಇಒ ಶುಭಾಕಲ್ಯಾಣ್, ಪಾಲಿಕೆ ಆಯುಕ್ತ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿ ಕೃಷ್ಣ ಇತರರು ಇದ್ದರು.

  ಮಾಜಿ ಸೈನಿಕರ ಕ್ಷಮೆ ಕೇಳಿದ ಡಿಸಿ: ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮಾಜಿ ಸೈನಿಕರನ್ನು ಜಿಲ್ಲಾಡಳಿತ ಕಡೆಗಣಿಸಿದೆ ಎಂದು ಬೇಸರಿಸಿ ಮಾಜಿ ಸೈನಿಕರು ಸಚಿವ ಜೆ.ಸಿ.ಮಾಧುಸ್ವಾಮಿ ಅವರಲ್ಲಿ ದೂರಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು ಸೈನಿಕರನ್ನು ಗೌರವಿಸುವುದನ್ನು ಹೇಳಿಕೊಡಬೇಕಾ ಎಂದು ಗರಂ ಆದರು. ಸಚಿವರು ತೆರಳಿದ ನಂತರ ಮಾಜಿ ಸೈನಿಕರನ್ನು ಭೇಟಿಯಾದ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಸಮಾರಂಭಕ್ಕೆ ಆಹ್ವಾನ ನೀಡದಿರುವುದು ಹಾಗೂ ಪ್ರತೀ ವರ್ಷದಂತೆ ಪಥಸಂಚಲನಕ್ಕೆ ಅವಕಾಶ ನೀಡದಿರುವುದಕ್ಕೆ ಕ್ಷಮೆ ಕೇಳುತ್ತೇನೆ ಎಂದು ಸಮಾಧಾನಪಡಿಸಿದರು.

  ಬಜೆಟ್‌ನಲ್ಲಿ ನಿರೀಕ್ಷೆಗಳು: ತೆಂಗು ಹಾಗೂ ತೆಂಗಿನ ಉತ್ಪನ್ನಗಳ ಮೌಲ್ಯವರ್ಧನೆ, ಸಂಶೋಧನೆಗೆ ಅನುಕೂಲವಾಗುವಂತೆ ಜಿಲ್ಲೆಗೆ ಕೊಕೊನಟ್ ಟೆಕ್ನೊಪಾರ್ಕ್, ರೈತರ ಪಂಪ್‌ಸೆಟ್‌ಗಳಿಗೆ ಸೋಲಾರ್ ವ್ಯವಸ್ಥೆ ಸೇರಿ ವಿವಿಧ ಯೋಜನೆಗಳನ್ನು ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ಜನರು ನಿರೀಕ್ಷೆ ಮಾಡಬಹುದು ಎಂದು ಮಾಧುಸ್ವಾಮಿ ಹೇಳಿದರು.

  ಪಾಪದ ಕೆಲಸವೆಲ್ಲಾ ಜಯಚಂದ್ರ ಮಾಡಿದ್ದಾಗಿದೆ!: ಶಿರಾ ತಾಲೂಕು ಮದುಲೂರು ಕೆರೆಗೆ ಹೇಮಾವತಿ ನೀರು ಅಲೋಕೇಷನ್ ಇಲ್ಲ, ಇದೆ ಎಂದು ಮಾಜಿ ಸಚಿವ ಜಯಚಂದ್ರ ಅದ್ಯಾವ ದಾಖಲೆ ನೋಡಿ ಹೇಳುತ್ತಿದ್ದಾರೊ ನನಗೆ ಗೊತ್ತಿಲ್ಲ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟನೆ ನೀಡಿದರು. ಶಿರಾ ತಾಲೂಕಿಗೆ ಬಿಡಬೇಕಾದ್ದಕ್ಕಿಂತ ಹೆಚ್ಚು 0.99 ಟಿಎಂಸಿ ನೀರು ನೀಡಿದ್ದೇವೆ. ಅವರ ಬೃಹತ್ ಪಿಕಪ್‌ಗಳನ್ನು ತುಂಬಿಸಿಕೊಂಡು ಕೆರೆಗಳಿಗೆ ನೀರು ಹರಿಯುವುದು ಅಸಾಧ್ಯ. ಚಿಕ್ಕನಾಯಕನಹಳ್ಳಿ, ಶಿರಾ ಜನರ ಮಧ್ಯೆ ದ್ವೇಷ ಬಿತ್ತುವ ಪಾಪದ ಕೆಲಸವನ್ನು ಜಯಚಂದ್ರ ಮಾಡಿದ್ದಾಗಿದೆ ಎಂದರು.

  ನೀರಾವರಿ ಯೋಜನೆಗಳ ಸಂಪೂರ್ಣ ಲಾಭ ಸಿಗುತ್ತೆ: ಜಿಲ್ಲೆಗೆ ಭವಿಷ್ಯದಲ್ಲಿ ಹೇಮಾವತಿ, ಭದ್ರ ಮೇಲ್ದಂಡೆ ಹಾಗೂ ಎತ್ತಿನಹೊಳೆ ನೀರಾವರಿ ಯೋಜನೆಯ ಸಂಪೂರ್ಣ ಸದುಪಯೋಗವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ನೀರಾವರಿ ಯೋಜನೆಗಳ ಸಂಪೂರ್ಣ ಸದುಪಯೋಗವಾಗುವಂತೆ ಯೋಜನೆ ರೂಪಿಸಲಾಗಿದೆ, ಹೇಮಾವತಿ ನಾಲೆ ಆಧುನೀಕರಣಕ್ಕೆ ಕಾವೇರಿ ನೀರಾವರಿ ಮಂಡಳಿ ಅನುಮತಿ ನೀಡಿದ್ದು ಸಿಎಂ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಕೂಡ ಒಪ್ಪಿಗೆ ಸೂಚಿಸಿದೆ ಎಂದರು. ಕೇಂದ್ರ ಸರ್ಕಾರದ ಅಂತರ್ಜಲ ಸಂರಕ್ಷಣೆಗೆ ಅಟಲ್ ಭೂಜಲ ಯೊಜನೆ ತುಮಕೂರು ಸೇರಿ ರಾಜ್ಯದ ಏಳು ಜಿಲ್ಲೆಯಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ತೆಗೆದುಕೊಳ್ಳಲಾಗಿದೆ ಎಂದರು.

  ಪಕ್ಷ ಸೂಚಿಸಿದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ: ಪಕ್ಷ ಸೂಚಿಸಿದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ನಗರದಲ್ಲಿ ಆಯೋಜಿಸಿದ್ದ 71ನೇ ಗಣರಾಜ್ಯೋತ್ಸವದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಒಳಿತಾಗುವುದಾದರೆ ಮಂತ್ರಿ ಸ್ಥಾನವೇನೂ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದರು.
  ಸಂಪುಟ ರಚನೆ ಬಗ್ಗೆ ಪ್ರತಿಕ್ರಿಯಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ, ಇದರ ಸಂಪೂರ್ಣ ಅಧಿಕಾರ ಸಿಎಂ ಯಡಿಯೂರಪ್ಪ ಅವರಿಗಿದ್ದು, ಹೈಕಮಾಂಡ್ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

  ರೈತರ ಪಂಪ್‌ಸೆಟ್‌ಗೆ ಸೋಲಾರ್ ಒದಗಿಸಲು ಚಿಂತನೆ!: ರಾಜ್ಯದಲ್ಲಿ ರೈತರ ಪಂಪ್‌ಸೆಟ್‌ಗಳು ಸಂಪೂರ್ಣ ಸೋಲಾರ್ ಮೂಲಕ ಕಾರ್ಯನಿರ್ವಹಿಸುವಂತೆ ಮಾಡುವ ಉದ್ದೇಶ ಸರ್ಕಾರಕ್ಕಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ಇದಕ್ಕಾಗಿ ಕೇಂದ್ರ ಸರ್ಕಾರ ಶೇ.30, ರಾಜ್ಯ ಕೂಡ ಶೇ.30 ಪ್ರೋತ್ಸಾಹಧನ ನೀಡುತ್ತಿದೆ, ಹಣ ನೀಡುವ ಮೂಲಕ ರೈತರಿಗೆ ನೆರವಾಗುವ ಜತೆಗೆ ವಿದ್ಯುತ್ ಉಳಿಸುವ ಬಗ್ಗೆ ಚರ್ಚೆ ನಡೆದಿದೆ ಎಂದರು. ಉಳಿಯುವ ವಿದ್ಯುತ್ ಅನ್ನು ಕೈಗಾರಿಕಾ ಅಭಿವೃದ್ಧಿಗೆ ಬಳಸಲಾಗುವುದು ಎಂದರು.

  ಮಾ.5ಕ್ಕೆ ಬಜೆಟ್ ಮಂಡನೆ: ಸಿಎಂ ಯಡಿಯೂರಪ್ಪ ಮಾ.5ಕ್ಕೆ ರಾಜ್ಯ ಬಟೆಟ್ ಮಂಡಿಸಲಿದ್ದಾರೆ. ಈ ಬಾರಿ ಇಲಾಖಾವಾರು ಅಲ್ಲದೆ ಜಿಲ್ಲಾವಾರು ಮಾಹಿತಿ ಕೇಳಿದ್ದು, ಬಜೆಟ್‌ನಲ್ಲಿ ತುಮಕೂರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಆದ್ಯತೆ ಸಿಗಲಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts