ದೇಶದ ಅಭಿವೃದ್ಧಿ ಚಿಂತನೆ ಮಾಡದ ಬಿಜೆಪಿ

ಧಾರವಾಡ:ವಿನಯ ನಿಮ್ಮ ಮನೆ ಮಗ. ಈತನನ್ನು ಈ ಬಾರಿ ಗೆಲ್ಲಿಸಿ. ಬಿಜೆಪಿಯವರು ಜಾತಿ ಹೆಸರಿನಲ್ಲಿ ಮತ ಕೇಳುವ ಜನ. ಐದು ವರ್ಷದಲ್ಲಿ ಒಮ್ಮೆಯೂ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನವಲಗುಂದದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಮಹದಾಯಿ ವಿಷಯದಲ್ಲಿ ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸಿದಾಗ ಹಿಂದೇಟು ಹಾಕಲು ಪ್ರಲ್ಹಾದ ಜೋಶಿ ಕಾರಣ. ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿ ಸಭೆ ಕರೆದು ಇತ್ಯರ್ಥಕ್ಕೆ ಮನವಿ ಮಾಡಿದರೆ, ಅನಂತಕುಮಾರ, ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿ ಹಾಗೂ ಯಡಿಯೂರಪ್ಪ ಅವರು ಮೋದಿ ಅವರ ಕಿವಿ ಚುಚ್ಚಿದರು. ಇದರ ಹಿನ್ನಡೆಗೆ ಜೋಶಿಯೇ ನೇರ ಹೊಣೆ ಎಂದು ದೂರಿದರು.

ಅನಂತಕುಮಾರ, ಜಗದೀಶ ಶೆಟ್ಟರ್, ರೇವಣ್ಣ, ಈಶ್ವರಪ್ಪ , ಶೋಭಾ ಕರಂದ್ಲಾಜೆ ಸೇರಿ ಅನೇಕರ ನಿಯೋಗ ಸಾಲ ಮನ್ನಾಕ್ಕೆ ಆಗ್ರಹಿಸಿದರೆ ಕಿವಿಗೊಡಲಿಲ್ಲ. ನಾನು 50 ಸಾವಿರ ರೂ. ಸಾಲ ಮನ್ನಾ ಮಾಡಿದೆ. ಜಿಲ್ಲೆಯ 269 ಕೋಟಿ ರೂ. ಸಾಲ ಮನ್ನಾ ಮಾಡಿದ್ದೇನೆ ಎಂದರು. ಐದು ವರ್ಷದಲ್ಲಿ ಮೋದಿ ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಏನು? ಜೋಶಿ 15 ವರ್ಷ ಸಂಸದರಾಗಿದ್ದರೂ ಏನೂ ಕೊಡುಗೆ ನೀಡಿಲ್ಲ. ನನ್ನ ಅವಧಿಯಲ್ಲಿ ನವಲಗುಂದ ಕ್ಷೇತ್ರಕ್ಕೆ 3500 ಸಾವಿರ ಕೋಟಿ ರೂ. ಅನುದಾನ ನೀಡಿದ್ದೇನೆ. ಮಲಪ್ರಭಾ ನಾಲಾಕ್ಕೆ 1082 ಕೋಟಿ ನೀಡಿದ್ದೇನೆ. ಹೀಗಾಗಿ ಋಣ ತೀರಿಸಲು ಮೈತ್ರಿ ಅಭ್ಯರ್ಥಿಗೆ ಮತ ನೀಡಬೇಕು ಎಂದು ತಾಲೂಕಿನ ಜನರಿಗೆ ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ನೀಡಿದ್ದ ಭರವಸೆ ಈಡೇರಿಸಿಲ್ಲ. ಪ್ರಧಾನಿ ಮೋದಿ ಹೇಳಿದ್ದನ್ನು ಮಾಡಿದ್ದೇನೆ ಎಂದು ಎಲ್ಲೂ ಪ್ರಸ್ತಾಪಿಸುತ್ತಿಲ್ಲ. ಭ್ರಮೆ ಸೃಷ್ಟಿಸಿದ್ದಾರೆ. ಅದರಿಂದ ಈ ಬಾರಿ ಜನ ಹೊರಬರಲಿದ್ದಾರೆ. ವಿನಯ ಕುಲಕರ್ಣಿ ಅವರ ಗೆಲುವು ನಿಶ್ಚಿತ ಎಂದರು. ಅಭ್ಯರ್ಥಿ ವಿನಯ ಕುಲಕರ್ಣಿ ಮಾತನಾಡಿ, ಈ ಬಾರಿ ಬದಲಾವಣೆ ನಿಶ್ಚಿತ. ನನ್ನನ್ನು ಗೆಲ್ಲಿಸಿ ನಿಮ್ಮ ಸೇವೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿದರು. ಮುಖಂಡರಾದ ವಿಜಯ ಕುಲಕರ್ಣಿ, ಕೆ.ಎನ್. ಗಡ್ಡಿ, ಶಿವಾನಂದ ಕರಿಗಾರ, ಬಾಪುಗೌಡ ಪಾಟೀಲ, ವಿನೋದ ಅಸೂಟಿ, ಸಿದ್ದು ತೇಜಿ, ಪ್ರಕಾಶ ಅಂಗಡಿ, ಗಂಗಾಧರ ಪಾಟೀಲ ಕುಲಕರ್ಣಿ, ಸದಾನಂದ ಡಂಗನವರ, ಇತರರು ಇದ್ದರು.

Leave a Reply

Your email address will not be published. Required fields are marked *