ದೇಶದ್ರೋಹಿಗಳ ಸದೆ ಬಡೆಯಿರಿ

ಶಿಡ್ಲಘಟ್ಟ: ಕಾಶ್ಮೀರದ ಪುಲ್ವಾಮಾದಲ್ಲಿ ಸ್ಪೋಟಕಗಳೊಂದಿಗೆ ಸಿಆರ್​ಪಿಎಫ್ ಯೋಧರಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಹಲವು ಯೋಧರ ಹತ್ಯೆಗೆ ಕಾರಣವಾಗಿರುವ ಭಯೋತ್ಪಾದಕ ಕೃತ್ಯವನ್ನು ವಿರೋಧಿಸಿ ನಗರದ ವಿವಿಧ ಮುಸ್ಲಿಂ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಕೊಹಿನೂರ್ ಟಿಪ್ಪು ತಾಲೀಂ ಮೈನಾರಿಟಿ ವೆಲ್​ಫೇರ್ ಟ್ರಸ್ಟ್​ನ ಅಂಜದ್ ಮಾತನಾಡಿ, ಸಿಆರ್​ಪಿಎಫ್ ಯೋಧರಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಹಲವಾರು ಯೋಧರ ಹತ್ಯೆಗೆ ಕಾರಣವಾಗಿರುವ ಪಾಕಿಸ್ತಾನದ ಜೈಷ್ ಉಗ್ರ ಸಂಘಟನೆಯ ಭಯೋತ್ಪಾದಕ ಕೃತ್ಯ ಖಂಡನೀಯ. ಹುತಾತ್ಮ ಯೋಧ ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ, ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಸಿಲ್ ಸಿಲಾ ಫೌಂಡೇಷನ್ ಅಧ್ಯಕ್ಷ ಮಹಮದ್ ಅಸದ್ ಮಾತನಾಡಿ, ದೇಶದೊಳಗೆ ಭಯೋತ್ಪಾದಕರನ್ನು ತಯಾರು ಮಾಡಿ ದೇಶದ ಏಕತೆ, ಸಾರ್ವಭೌಮತೆ ಮತ್ತು ಅಖಂಡತೆಗೆ ಸವಾಲು ಎಸಗಿ ದೇಶವನ್ನು ಒಡೆಯಲು ಯತ್ನಿಸುವ ದೇಶದ್ರೋಹಿಗಳನ್ನು ಸದೆ ಬಡೆಯಬೇಕು. ಸರ್ಕಾರದಿಂದ ಯೋಧರ ಕುಟುಂಬಗಳಿಗೆ ತಲಾ 5 ಕೋಟಿ ರೂ.ಯಂತೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ನಗರದ ದಿಬ್ಬೂರಹಳ್ಳಿ ರಸ್ತೆಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಸ್ ನಿಲ್ದಾಣ ಬಳಿ ಮಾನವ ಸರಪಳಿ ನಿರ್ವಿುಸಿ ಭಯೋತ್ಪಾದಕರ ವಿರುದ್ಧ ಘೊಷಣೆ ಕೂಗಿದರು. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ಮೇಣದಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು. ತಹಸೀಲ್ದಾರ್ ಎಸ್.ಅಜಿತ್​ಕುಮಾರ್ ರೈಗೆ ಮನವಿ ಸಲ್ಲಿಸಲಾಯಿತು. ಮದೀನಾ ಮಸೀದಿ ಅಧ್ಯಕ್ಷ ಎಚ್.ಎಸ್.ಫಯಾಜ್​ಸಾಬ್, ಜಾಮೀಯಾ ಮಸೀದಿ ಕಾರ್ಯದರ್ಶಿ ಹೈದರಲಿ, ಮುಖಂಡರಾದ ಅನ್ಸರ್​ಖಾನ್, ಅಕ್ರಂ ಮತ್ತಿತರರಿದ್ದರು.