ದೇಶದಲ್ಲಿ ಭಯೋತ್ಪಾದನೆ ಪ್ರಮಾಣ ಇಳಿಕೆ

ಯಲ್ಲಾಪುರ ಮೋದಿ ಹೆಸರಲ್ಲಿ ಮತ ಕೇಳಲು ಅವರ ಸಾಧನೆಯೇ ಶ್ರೀರಕ್ಷೆಯಾಗಿದೆ. ಮೋದಿಗಾಗಿ ಮತ್ತೊಮ್ಮೆ ಮತ ಕೇಳಲು ಕಾರ್ಯಕರ್ತರಿಗೆ ಹೆಮ್ಮೆ ಎನಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್. ಸಂತೋಷ ಹೇಳಿದರು.

ಪಟ್ಟಣದ ವೈಟಿಎಸ್​ಎಸ್ ಮೈದಾನದಲ್ಲಿ ಬಿಜೆಪಿಯ ಘಟ್ಟದ ಮೇಲಿನ ಕಿತ್ತೂರು, ಖಾನಾಪುರ, ಶಿರಸಿ, ಯಲ್ಲಾಪುರ, ಹಳಿಯಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಈ ಐದು ವರ್ಷದಲ್ಲಿ ಕಾಶ್ಮೀರ ಕಣಿವೆಯ ಹೊರತಾಗಿ ಬೇರೆಲ್ಲೂ ಬಾಂಬ್ ಸ್ಫೋಟ ಆಗಿಲ್ಲ. ಭಯೋತ್ಪಾದನೆ ಗಣನೀಯವಾಗಿ ಇಳಿಮುಖವಾಗಿದೆ. ದೇಶ ಸುರಕ್ಷಿತವಾಗಿದೆ. ರಕ್ಷಣಾ ವ್ಯವಸ್ಥೆ ಹಾಗೂ ಆರ್ಥಿಕ ವ್ಯವಸ್ಥೆ ಸುಧಾರಣೆ ಕಂಡಿದೆ. ಭ್ರಷ್ಟಾಚಾರ ರಹಿತ ಆಡಳಿತ, ಸಾಮಾನ್ಯ ಜನರ ಬದುಕು ಹಸನಾಗಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದ್ದು, ಅವರೇ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿಗೆ ಸರಿಯಾದ ಎದುರಾಳಿ ಇಲ್ಲ. ಬಿಜೆಪಿ ಅಭ್ಯರ್ಥಿ 3 ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ಖಚಿತ ಎಂದರು.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಶಾಸಕ ಮಾಂತೇಶ ದೊಡ್ಡನಗೌಡರ್ ಮಾತನಾಡಿದರು. ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ, ಚುನಾವಣಾ ಉಸ್ತುವಾರಿ ಲಿಂಗರಾಜ ಪಾಟೀಲ, ವಿನೋದ ಪ್ರಭು, ಭಾನುಪ್ರಕಾಶ, ರೂಪಾಲಿ ನಾಯ್ಕ, ಸುನೀಲ ಹೆಗಡೆ, ವಿ.ಎಸ್. ಪಾಟೀಲ, ಪ್ರಮೋದ ಹೆಗಡೆ, ಗಂಗಾಧರ ಭಟ್ಟ, ಗಣೇಶ ರಾವ್, ಎಲ್.ಟಿ. ಪಾಟೀಲ, ನಟರಾಜ, ನಾಗರಾಜ ನಾಯ್ಕ ತೊರ್ಕೆ, ಎನ್.ಎಸ್. ಹೆಗಡೆ, ಆರ್.ಡಿ. ಹೆಗಡೆ, ಕೃಷ್ಣ ಎಸಳೆ, ಶ್ರುತಿ ಹೆಗಡೆ, ಶ್ರೀನಿವಾಸ ಭಟ್ಟ ಇತರರಿದ್ದರು.

ತಾ.ಪಂ. ಸದಸ್ಯೆ ಚಂದ್ರಕಲಾ ಭಟ್ಟ, ಬಿಜೆಪಿ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ನಿರ್ವಹಿಸಿದರು.

ಮೋದಿ ಗಾಗಿ ಮತಹಾಕಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡುವಾಗ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬುದು ಎಲ್ಲರ ಅಪೇಕ್ಷೆ ಎಂದು ಪದೇಪದೆ ಹೇಳುತ್ತ ಮೋದಿಗಾಗಿ ಮತ ಯಾಚಿಸಿದರು. ಎಲ್ಲಿಯೂ ತನಗೆ ಮತ ಹಾಕಿ ಎಂದು ಕೇಳಲೇ ಇಲ್ಲ.

ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಲಾಗದೇ ಕಾಂಗ್ರೆಸ್ ಮುಕ್ತ ಭಾರತಕ್ಕೆ ಮುನ್ನುಡಿ ಬರೆದಾಗಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಬಿಜೆಪಿ ಶ್ರಮಿಸುವ ಅಗತ್ಯವಿಲ್ಲ, ದೇವೇಗೌಡರು ಮೈತ್ರಿಯ ಮೂಲಕ ಆ ಕೆಲಸವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಹಣ, ಹೆಂಡ ಹಂಚಿ ಚುನಾವಣೆ ಎದುರಿಸುತ್ತಿದೆ. ಆದರೆ, ಬಿಜೆಪಿ ಕಾರ್ಯಕರ್ತರನ್ನು ಆಧರಿಸಿ ಚುನಾವಣೆ ಎದುರಿಸುತ್ತಿದೆ. ರಾಜ್ಯ ಸರ್ಕಾರ ಕೇವಲ ಹಾಸನ, ಮಂಡ್ಯಕ್ಕೆ ಸೀಮಿತವಾಗಿದೆ. ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ಸರ್ಕಾರ ಪತನವಾಗಲಿದೆ. | ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕ

ಸಾಲಮನ್ನಾ ಏನಾಯಿತು?: ರಾಜ್ಯ ಸರ್ಕಾರದ ಸಾಲಮನ್ನಾ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಮಾರ್ಚ್ ಕೊನೆಯಲ್ಲಿ ಸಾಲ ಮರುಪಾವತಿ ಮಾಡುವಂತೆ ರೈತರಿಗೆ ಬ್ಯಾಂಕ್​ಗಳಿಂದ ನೋಟಿಸ್ ನೀಡಲಾಗುತ್ತಿದೆ. ಮತ ಯಾಚಿಸಲು ಬಂದ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರಲ್ಲಿ ‘ಸಾಲಮನ್ನಾ ಏನಾಯಿತು?’ ಎಂದು ಪ್ರಶ್ನಿಸಬೇಕಾಗಿದೆ ಎಂದು ಬಿ.ಎಲ್. ಸಂತೋಷ ಹೇಳಿದರು.

Leave a Reply

Your email address will not be published. Required fields are marked *