ದೇಶದಲ್ಲಿಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಲೋಚನೆ ಬಿತ್ತುವ ಕೆಲಸ ಆಗಬೇಕಿದೆ ಎಂದು ನಟ ಪ್ರಕಾಶ್ ರಾಜ್ ಅಭಿಪ್ರಾಯಪಟ್ಟರು.

ನಗರದ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ವೇದಿಕೆ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರನ್ನು ದೇಶದ ಬಹು ಜನರು ದಲಿತರು, ದಮನಿತರು, ಅಸ್ಪಶ್ಯರ ನಾಯಕ ಎಂದು ಬಿಂಬಿಸಿದ್ದಾರೆ. ಆದರೆ, ಅಂಬೇಡ್ಕರ್ ಒಂದು ವರ್ಗದ ನಾಯಕರಲ್ಲ. ಅವರು ಎಲ್ಲರಿಗೂ ಸೇರಿದವರು. ದೇಶದ ಇಂತಹ ಪರಿಸ್ಥಿತಿಯಲ್ಲಿ ಅವರ ಆಲೋಚನೆಗಳು ಬೇಕಾಗಿದೆ ಎಂದರು.
ಅಂಬೇಡ್ಕರ್ ನಿರಂತರ ಪ್ರತಿರೋಧ. ಅವರಿಂದ ನಾವು ಪ್ರತಿರೋಧದ ಗುಣ ಕಲಿಯಬೇಕಾಗಿದೆ. ಒಬ್ಬ ಯುವಕ ಅಂಬೇಡ್ಕರರಂತೆ ವೇಷ ಧರಿಸಿ ಮೆರವಣಿಗೆಯಲ್ಲಿ ಸಾಗಿ ಬಂದ. ಈ ಬಗ್ಗೆ ಆತನನ್ನು ನಾನು ಪ್ರಶ್ನಿಸಿದಾಗ ಅಂಬೇಡ್ಕರ್ ಅವರಂತೆಯೇ ಕಾಣಿಸಲೆಂದು ಈ ವೇಷ ಧರಿಸಿದ್ದೇನೆ ಎಂದು ಉತ್ತರಿಸಿದ. ಆದರೆ, ಅಂಬೇಡ್ಕರ್ ಕೋಟ್ ಧರಿಸಿದ್ದು ಒಂದು ಪ್ರತಿರೋಧ. ತುರ್ತಿನ ಕಾಲದಲ್ಲಿ ನಮ್ಮ ಒಂದೇ ಒಂದು ನಂಬಿಕೆಯ ಆಶಾಕಿರಣ ಸಂವಿಧಾನ. ಸರ್ವೋಚ್ಚ ನ್ಯಾಯಾಲಯ ಸಹ ಅಂಬೇಡ್ಕರ್ ಕೊಟ್ಟ ಸಂವಿಧಾನದ ಮೇಲೆ ತೀರ್ಪು ಕೊಡುತ್ತಿದೆ ಎಂದು ಹೇಳಿದರು.
ಮನುಸ್ಮತಿಯನ್ನು ಸುಡಬೇಕು: ಪ್ರಜಾಪ್ರಭುತ್ವ ಸದೃಢತೆಯಲ್ಲಿ ಮಹಿಳಾ ಸಮುದಾಯದ ಜವಾಬ್ದಾರಿ ಕುರಿತು ವಿಷಯ ಮಂಡಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ, ಮಹಿಳೆಯರು, ದಲಿತರು, ದುಡಿಯುವ ವರ್ಗವನ್ನು ತುಚ್ಚವಾಗಿಸಿರುವ ಮನುಸ್ಮತಿಯನ್ನು ಸುಡುವ ಕೆಲಸವಾಗಬೇಕು. ಕವಿರಾಜ ಮಾರ್ಗ, ರಾಮಾಯಣ, ಮಹಾಭಾರತದಲ್ಲಿ ಪುರುಷರನ್ನು ವೀರರು-ಸೂರರು ಎಂದು ವೈಭವೀಕರಿಸಲಾಗಿದೆ. ಆದರೆ, ಈ ವೀರರು-ಸೂರರು ದೇಶದ ಮೇಲೆ ಮೊಘಲರು, ಬ್ರಿಟಿಷರು ದಂಡೆತ್ತಿ ಬಂದಾಗ ಎಲ್ಲಿ ಹೋಗಿದ್ದರು. ಆಗ ಇವರೆಲ್ಲರೂ ಶತ್ರು ಸಂಹಾರ ಯಾಗ ಮಾಡುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಸಂವಿಧಾನ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಆದರೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಜಯಮಾಲ ಹೋಗಿದ್ದಕ್ಕೆ ಗೋಮೂತ್ರ ಸಿಂಪಡಿಸಿ ತೊಳೆದರು. ಏಕೆಂದರೆ ಅಯ್ಯಪ್ಪ ಸ್ವಾಮಿ ಗಂಡು-ಹೆಣ್ಣಿನಿಂದ ಹುಟ್ಟಿಲ್ಲ, ಶಿವ ಮತ್ತು ವಿಷ್ಣುವಿನಿಂದ ಹುಟ್ಟಿರುವುದು ಎಂದು ಹೇಳಲಾಗುತ್ತದೆ. ಹೀಗೆ ಹುಟ್ಟಲು ಸಾಧ್ಯವೇ? ಇದನ್ನು ನಾವು ನಂಬಿದ್ದೇವೆ ಎಂದು ಲೇವಡಿ ಮಾಡಿದರು.
ಕಾರ್ಯಕ್ರಮದಲ್ಲಿ ಅಜೀಂ ಪ್ರೇಮ್‌ಜೀ ವಿವಿಯ ಪ್ರಾಧ್ಯಾಪಕ ಎ.ನಾರಾಯಣ ಮಾತನಾಡಿ, ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿತ್ತು. ಸಮಾನತೆಗಾಗಿ ಸಮನಾಂತರ ಸಂಗ್ರಾಮ ಅಂಬೇಡ್ಕರ್ ಮುಂದಾಳತ್ವದಲ್ಲಿ ಆರಂಭಗೊಂಡಿತ್ತು. ಅದು ದೇಶದೊಳಗಿನ ವೈರಿಗಳ ವಿರುದ್ಧವಾಗಿತ್ತು. ಬ್ರಿಟಿಷರು ಹೋದ ದಿನ ನಮಗೆ ಸ್ವಾತಂತ್ರ ಸಿಗಲಿಲ್ಲ. 1950ರ ಜನವರಿ 26ರಂದು ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಪ್ರಾಧ್ಯಾಪಕಿ ವಿಜಯಕುಮಾರಿ ಎಸ್.ಕರಿಕಲ್, ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು, ಜೈನಶಾಸ್ತ್ರ ವಿಭಾಗದ ಅಧ್ಯಕ್ಷೆ ಪ್ರೊ.ಎಸ್.ಡಿ.ಶಶಿಕಲಾ ಇದ್ದರು.