More

  ದೇಶಕ್ಕೆ ಮೋದಿಯೇ ಅಕ್ಷಯ ಪಾತ್ರೆ

  ಚಿತ್ರದುರ್ಗ: ಅನ್ನದಾತರಿಗೆ 6 ಸಾವಿರ ರೂ., ಬಡವರಿಗೆ 5 ಕೆ.ಜಿ. ಅಕ್ಕಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರೇ ಅಕ್ಷಯ ಪಾತ್ರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

  ಲೋಕಸಭಾ ಚುನಾವಣೆ ಅಂಗವಾಗಿ ತಾಲೂಕಿನ ಭರಮಸಾಗರದಲ್ಲಿ ಭಾನುವಾರ ಬಿಜೆಪಿ-ಜೆಡಿಎಸ್‌ನಿಂದ ನಡೆದ ಸಭೆ ಉದ್ಘಾಟಿಸಿ ಮಾತನಾಡಿದರು.

  ಕೇಂದ್ರ ಸರ್ಕಾರ ರಾಜ್ಯಕ್ಕೆ ಚೊಂಬು ನೀಡಿದೆ ಎಂಬ ಕಾಂಗ್ರೆಸ್ಸಿಗರದು ಅಪಪ್ರಚಾರಕ್ಕೆ ಈ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ದೇಶಕ್ಕೆ ಕೈ ಗ್ಯಾರಂಟಿ ಚುನಾವಣೆಗೆ ಸೀಮಿತ. ಬಡವರು, ಶೋಷಿತರು, ಹಿಂದುಳಿದವರ ಜೀವನ ಗಮನಾರ್ಹ ಸುಧಾರಣೆಗೆ ಮೋದಿಯೇ ಗ್ಯಾರಂಟಿ ಎಂದು ಕೈ ನಾಯಕರ ಆರೋಪಕ್ಕೆ ಟಾಂಗ್‌ ನೀಡಿದರು.

  ಇಡೀ ಭಾರತದಲ್ಲಿ ಮೋದಿ ಮತ್ತೊಮ್ಮೆ ಎಂಬ ಜಯಘೋಷ ಮೊಳಗುತ್ತಿದೆ. ಚುನಾವಣೆ ಫಲಿತಾಂಶಕ್ಕೂ ಮುನ್ನ ಜನಾಶೀರ್ವಾದ ಎನ್‌ಡಿಎ ಪರ ಎಂಬುದು ಹೋದ ಕಡೆಯಲ್ಲೆಲ್ಲ ಸ್ಪಷ್ಟವಾಗಿ ಕಾಣುತ್ತಿದೆ. ಇದು ದೇಶದ ಪ್ರತಿ ಪಕ್ಷಗಳಿಗೂ ಅರ್ಥವಾಗಿದೆ. ಆದರೂ ವಿರೋಧಿಸುತ್ತಿದ್ದಾರೆ ಎಂದರು.

  ದೇಶದಲ್ಲಿ ೩.೫ ಕೋಟಿ ಹೆಚ್ಚುವರಿ ಮನೆಗಳ ನಿರ್ಮಾಣ, 5 ವರ್ಷ ಬಡವರಿಗೆ ಉಚಿತ ಪಡಿತರ ವಿತರಣೆ ಮುಂದುವರಿಕೆ, ೭೦ ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ಚಿಕಿತ್ಸೆ, 3 ಕೋಟಿ ಮಹಿಳೆಯರಿಗೆ ಲಕ್ ಪತಿ ದೀದಿಗಳನ್ನಾಗಿ ಮಾಡುವುದು ಮೋದಿ ಅವರ ಗ್ಯಾರಂಟಿ. ಇವುಗಳ ಅನುಷ್ಠಾನ ಖಂಡಿತ ಎಂದು ಭರವಸೆ ನೀಡಿದರು.

  ೨೫ ಕೋಟಿ ಮಂದಿಯನ್ನು ಬಡತನ ರೇಖೆಯಿಂದ ಮೇಲೆತ್ತುವ ಕೆಲಸವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿರುವಂತೆ ೫,೩೦೦ ಕೋಟಿ ರೂ. ಕೇಂದ್ರ ಸರ್ಕಾರದಿಂದ ಹಂತ-ಹಂತವಾಗಿ ಕೊಡಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.

  ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರು ಕೈಜೋಡಿಸಿರುವ ಕಾರಣ ದೊಡ್ಡ ಅಂತರದಲ್ಲಿ ೨೮ ಕ್ಷೇತ್ರಗಳಲ್ಲೂ ವಿಜಯ ಪತಾಕೆ ಭಾರಿಸುತ್ತೇವೆ. ಕಾರ್ಯಕರ್ತರು ಮನೆ-ಮನೆಗೆ ತೆರಳಿ ನಮ್ಮ ಅವಧಿಯಲ್ಲಾದ ಕೊಡುಗೆಗಳನ್ನು ಜನರಿಗೆ ತಿಳಿಸಿ, ಜಾಗೃತಿ ಮೂಡಿಸಿ ಎಂದು ಮನವಿ ಮಾಡಿದರು.

  ಉಸಿರಿರುವವರೆಗೂ ಬಿಎಸ್‌ವೈ ಪರ: ಕೊಟ್ಟ ಮಾತು ಎಂದಿಗೂ ತಪ್ಪುವುದಿಲ್ಲ. ನನ್ನ ಮಗನಿಗೆ ಟಿಕೆಟ್‌ ಕೈ ತಪ್ಪಿದೆ ಎಂಬುದು ಮನಸ್ಸಿನಲ್ಲಿಲ್ಲ. ಯಡಿಯೂರಪ್ಪ ಅವರು ಈ ಹಿಂದೆ ಸಿಎಂ ಆಗಿದ್ದ ವೇಳೆ ಈ ಭಾಗಕ್ಕೆ ೬೦೦ ಕೋಟಿ ರೂ. ಅನುದಾನ ಕೊಟ್ಟು ಕೆರೆ ತುಂಬಿಸುವ ಕೆಲಸ ಮಾಡಿದ್ದಾರೆ. ಉಸಿರು ಇರುವವರೆಗೂ ನಾನೂ, ನನ್ನ ಮಗ ಅವರ ಜೊತೆಗೆ ಇರುತ್ತೇವೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

  ಅಭ್ಯರ್ಥಿ ಗೋವಿಂದ ಎಂ ಕಾರಜೋಳ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಎಂಎಲ್ಸಿ ಎನ್.ರವಿಕುಮಾರ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡರಾದ ಲಕ್ಷ್ಮಿನಾರಾಯಣ, ಎಂ.ಸಿ.ರಘುಚಂದನ್, ಎಸ್.ಲಿಂಗಮೂರ್ತಿ, ಮಲ್ಲಿಕಾರ್ಜುನ್, ಜಿ.ಬಿ.ಶೇಖರ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts