ದೇವೇಗೌಡರ ಬಗೆಗ ಹಗುರ ಮಾತು ಸಲ್ಲದು

*ಯಡಿಯೂರಪ್ಪ ಕಮಿಷನ್ ಜನಕ*ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕೆ*ಏತ ನೀರಾವರಿ ಕಾಮಗಾರಿಗೆ ಶಂಕುಸ್ಥಾಪನೆ

ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರೆತ್ತಿ ಲಘುವಾಗಿ ಮಾತನಾಡಿದರೆ ಅವರನ್ನು ಪ್ರಧಾನಿ ಪಟ್ಟದವರೆಗೆ ತಲುಪಿಸಿದ ಜನರು ಹಾಗೂ ಅವರ ಜನ್ಮತಾಳಿದ ಹರದನಹಳ್ಳಿಯ ದೇವಾಲಯದ ಈಶ್ವರ ತೀರ್ಮಾನ ನೀಡುತ್ತಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದರು.

ಚನ್ನರಾಯಪಟ್ಟಣ ತಾಲೂಕು ಉದಯಪುರದಲ್ಲಿ ಗುರುವಾರ ಕಾಚೇನಹಳ್ಳಿ ಏತ ನೀರಾವರಿ ಯೋಜನೆ 3ನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ದೇವೇಗೌಡರ ಕುಟುಂಬದವರು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಹಗುರವಾಗಿ ಮಾತನಾಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿರುವುದು ರಾಜ್ಯದ ಖಜಾನೆ ಲೂಟಿ ಮಾಡುವುದಕ್ಕಲ್ಲ. ಖಜಾನೆಯನ್ನು ಸುಭದ್ರವಾಗಿರಿಸಿ, ಒಂದೊಂದು ಪೈಸೆಯನ್ನೂ ಖರ್ಚು ಮಾಡುವಾಗ ಅದರ ಲಾಭ ಜನರಿಗೆ ದೊರಕುವಂತೆ ಮಾಡುವುದಕ್ಕಾಗಿ. ರಾಜ್ಯದ ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆಯಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಸರ್ಕಾರದಲ್ಲಿ ಶೇ.8 ಕಮಿಷನ್ ದಂಧೆಯ ಜನಕ ಯಡಿಯೂರಪ್ಪ ಅವರೇ ಎನ್ನುವುದನ್ನು ಮರೆತಿದ್ದಾರೆ ಎಂದು ಟೀಕಿಸಿದರು.

ನಮ್ಮ ಕುಟುಂಬದವರು ವರ್ಗಾವಣೆಯಲ್ಲಿ ಹಣ ಮಾಡಬೇಕಾಗಿಲ್ಲ. ಅಂತಹ ಪಾಪದ ಕೆಲಸ ನಾವು ಮಾಡುವುದಿಲ್ಲ. ನಮ್ಮದು ಗ್ರಾಪಂ ಸದಸ್ಯ ಸ್ಥಾನದಿಂದ ಪ್ರಧಾನಿ ಪಟ್ಟದವರೆಗೂ ನೋಡಿ ಬಂದಿರುವ ಕುಟುಂಬ, ನಮ್ಮ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದರು.

ಕಾಂಗ್ರೆಸ್-ಜೆಡಿಎಸ್​ನ ಅನೇಕ ಶಾಸಕರು ಬಿಜೆಪಿಗೆ ಬರುತ್ತಾರೆ. ಅವರನ್ನು ಬಾಂಬೆಗೆ ಕರೆದುಕೊಂಡು ಹೋಗುತ್ತೇವೆ. ಮಿಲಿಟರಿ ರಕ್ಷಣೆಯಲ್ಲಿ ಆ ಶಾಸಕರನ್ನು ರಾಜಭವನಕ್ಕೆ ಕರೆತರುತ್ತೇವೆ ಎಂದೆಲ್ಲ ಬಿಜೆಪಿ ನಾಯಕರು ಸುದ್ದಿ ಹಬ್ಬಿಸುತ್ತಿದ್ದಾರೆ. ಅವರು ಅಷ್ಟೆಲ್ಲ ಮಾಡುವವರೆಗೆ ನಾವು ಕಡ್ಲೆಪುರಿ ತಿನ್ನುತ್ತಿರುವುದಿಲ್ಲ. ಹಿಂದೆ ಸರ್ಕಾರದ ಅಸ್ಥಿರತೆ ವಿಷಯ ಎದುರಾದಾಗ ಜೆ.ಎಚ್.ಪಟೇಲರು ಒಂದು ಹೋರಿ ಕತೆ ಹೇಳಿದ್ದರು. ಅದನ್ನು ನಾನಿಲ್ಲಿ ಹೇಳಲು ಆಗುವುದಿಲ್ಲ ಎಂದು ಗುಡುಗಿದರು.

ಜನಪರವಾಗಿ ಕೆಲಸ ಮಾಡುತ್ತಿರುವ ಸರ್ಕಾರ ಯಾಕೆ ಉರá-ಳಬೇಕು ಎನ್ನುವ ಪ್ರಶ್ನೆಗೆ ಯಡಿಯೂರಪ್ಪ ಹಾಗೂ ಬಿಜೆಪಿ ಮುಖಂಡರು ಉತ್ತರಿಸಬೇಕು. ನಾನು ಸಿಎಂ ಆಗಿರುವವರೆಗೂ ನನಗೆ ಸರ್ಕಾರ ಹಾಗೂ ಅಧಿಕಾರದ ಬಗ್ಗೆ ಕಾಳಜಿಯಿಲ್ಲ. ನನ್ನ ಗಮನವೇನಿದ್ದರೂ ಈ ನಾಡಿನ ಅಂಗವಿಕಲರು, ವಿಧವೆಯರು, ವೃದ್ಧರು, ಯುವಕರ ಬದುಕಿಗೆ ಶಾಶ್ವತ ದಾರಿ ಮಾಡಿಕೊಡುವ ಕಾರ್ಯಕ್ರಮಗಳ ಜಾರಿಯ ಕಡೆಗೇ ಇರುತ್ತದೆ. ಇಷ್ಟೆಲ್ಲ ಮಾತನಾಡುವ ಯಡಿಯೂರಪ್ಪ ಅವರು ಒಂದು ದಿನವಾದರೂ ಜನತಾದರ್ಶನ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಆರಂಭದಲ್ಲಿ ಕೈಯಲ್ಲಿ ಪೊರಕೆ ಹಿಡಿದು ನಟನೆ ಮಾಡಿದ್ದರು. ಈಗ ಹೊಸ ಪೊರಕೆ ಬಂದಿದೆ. ಅದನ್ನು ಹಿಡಿದು ನಟನೆ ಮಾಡುತ್ತಿದ್ದಾರೆ. ಆದರೆ ನಾನು ಯಾವುದೇ ನಾಟಕ ಮಾಡುತ್ತಿಲ್ಲ. ಮಧ್ಯಾಹ್ನ 12 ರಿಂದ ರಾತ್ರಿ 12.30ರವರೆಗೆ ಒಂದು ಲೋಟ ನೀರನ್ನೂ ಕುಡಿಯದೆ ಜನರ ಸಂಕಷ್ಟ ಆಲಿಸುತ್ತಿದ್ದೇನೆ. ಜನರು ಮೂತ್ರ ವಿಸರ್ಜನೆ ಮಾಡಿದ ವಾಸನೆ ನಡುವೆಯೇ ನಿಂತು ಕಷ್ಟ ಕೇಳುತ್ತೇನೆ. ಇದಕ್ಕಾಗಿ ನಾನಿರಬೇಕೋ? ಬೇಡವೋ? ಎನ್ನುವುದನ್ನು ಜನರೇ ನಿರ್ಧರಿಸಲಿ. ಇದರಿಂದ ನನಗೇನೂ ನಷ್ಟವಿಲ್ಲ. ಜನರು ಜಾತಿ ವ್ಯಾಮೋಹ ಬಿಟ್ಟು ಸರ್ಕಾರವನ್ನು ಬೆಂಬಲಿಸಬೇಕು ಎಂದರು.

ನಾನು ರಾಷ್ಟ್ರೀಕೃತ ಬ್ಯಾಂಕ್​ಗಳ ಸಾಲಮನ್ನಾ ಮಾಡುವ ಸಂಬಂಧ ಬ್ಯಾಂಕ್ ಮುಖ್ಯಸ್ಥರ ಸಭೆ ನಡೆಸಿದಾಗ ಅವರು ಸುಸ್ಥಿಯಾಗಿರುವ ಸಾಲಗಳ ಶೇ.50 ರಿಯಾಯಿತಿ ನೀಡಲು ಒಪ್ಪಿದ್ದರು. ಆದರೆ ದೆಹಲಿಗೆ ಹೋದ ಯಡಿಯೂರಪ್ಪ, ಸಾಲ ಮನ್ನಾ ಮಾಡಿದರೆ ಕುಮಾರಸ್ವಾಮಿಗೆ ಹೆಸರು ಬರುತ್ತದೆ. ಆದ್ದರಿಂದ ಪೂರ್ತಿ ಸಾಲ ಪಾವತಿಸಲು ತಿಳಿಸಿ ಎಂದು ಬೆಂಕಿ ಹಾಕಿ ಬಂದರು. ಇಂದು ಆ ಸವಾಲು ಸ್ವೀಕರಿಸಿ ರಾಷ್ಟ್ರೀಕೃತ ಬ್ಯಾಂಕ್​ಗಳ 30 ಸಾವಿರ ಕೋಟಿ ರೂ. ಸಾಲಮನ್ನಾ ನಿರ್ಧಾರ ಮಾಡಿದ್ದೇನೆ ಎಂದರು.

ಮಲಗಿದ್ದಲ್ಲೆ ಢಮಾರ್ ಅನ್ನಬೇಕಿತ್ತು: ನಾನು ಹೃದಯಕ್ಕೆ 2 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಹೃದಯದ ವಾಲ್ವ್ ಬದಲಿಸಲಾಗಿದೆ. ಮಾಧ್ಯಮಗಳಲ್ಲಿ ನಿತ್ಯವೂ ಸರ್ಕಾರ ಈಗ ಬಿತ್ತು ನಾಳೆ ಬೀಳುವುದು ಖಚಿತ ಎಂದು ತೋರಿಸುವುದನ್ನು ನೋಡಿ ದುರ್ಬಲ ಮನಸ್ಸಿನವನಾಗಿ ಆ ಬಗ್ಗೆ ಚಿಂತೆ ಮಾಡಿದ್ದರೆ ಮಲಗಿದ್ದಲ್ಲೆ ಢಮಾರ್ ಆಗಬೇಕಿತ್ತು. ಆದರೆ ನಾನು ಗಟ್ಟಿಮನಸ್ಸಿನವನಾಗಿದ್ದೇನೆ. ನಾಡಿನ ಕೋಟ್ಯಂತರ ಜನರ ಆಶೀರ್ವಾದವಿರುವುದರಿಂದ 15-20 ಗಂಟೆಗಳ ಕಾಲ ಊಟವನ್ನೂ ಮಾಡದೆ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ನೋಡಿದಾಗ ನಿಮ್ಮ ಆರೋಗ್ಯ ಹೇಗಿದೆ ಎಂದು ಕೇಳಿ ಮರುಗುವ ಜನರ ಹಾರೈಕೆಯಿಂದ ಇನ್ನೂ ಗಟ್ಟಿಯಾಗಿ ಬದುಕಿದ್ದೇನೆ. ನನ್ನ ಚಿಂತನೆಗಳನ್ನು ಕಾರ್ಯ ಗತಗೊಳಿಸುವವರೆಗೂ ದೂರ ಹೋಗದೆ ಜನರೊಂದಿಗಿರುತ್ತೇನೆ. ಸರ್ಕಾರದ ಮೇಲೆ ನಂಬಿಕೆಯಿಡಿ ಎಂದರು.

ಮಾಧ್ಯಮಗಳು ಸರ್ಕಾರ ಬಿದ್ದು ಹೋಗುತ್ತದೆ ಎನ್ನುವ ಕಳ್ಳಸುದ್ದಿ ಮಾಡುವುದನ್ನು ಬಿಡಬೇಕು. ಇಲ್ಲವಾದರೆ ಸರ್ಕಾರ ಬೀಳುತ್ತದೆ ಎನ್ನುವ ಮನೋಭಾವದಲ್ಲಿರುವ ಅಧಿಕಾರಿಗಳು ಗಾಲ್ಪ್ ಕ್ಲಬ್, ಕ್ರಿಕೆಟ್ ಸ್ಟೇಡಿಯಂ ಸೇರಿಕೊಳ್ಳುತ್ತಾರೆ. ಹೀಗಾದರೆ ಅವರಿಂದ ಕೆಲಸ ಮಾಡಿಸುವುದು ಸಾಧ್ಯವಾಗುವುದಿಲ್ಲ ಎಂದರು.

ರೇವಣ್ಣ ಹುಟ್ಟುಗುಣ ಪಾಲಿಶ್ ಮಾಡಿಕೊಳ್ಳಲಿ: ಸಹೋದರ ಎಚ್.ಡಿ.ರೇವಣ್ಣ ಅವರ ಕಾರ್ಯವೈಖರಿಯನ್ನು ಪ್ರಶಂಸಿಸಿದ ಸಿಎಂ ಕುಮಾರಸ್ವಾಮಿ, ರೇವಣ್ಣ ತಮ್ಮ ಹುಟ್ಟುಗುಣವಾದ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಸಲಹೆಯನ್ನೂ ನೀಡಿದರು.

ರೇವಣ್ಣ ಅವರಿಗೆ 10 ವರ್ಷಗಳಲ್ಲಿ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ರಾತ್ರೋರಾತ್ರಿ ಸರಿಪಡಿಸಬೇಕು ಎನ್ನುವ ಹುಚ್ಚು, ಇದಕ್ಕಾಗಿ ದಿನದ 24 ಗಂಟೆಯೂ ಕೆಲಸ ಮಾಡುತ್ತಾರೆ. ಆದರೆ ಅವರ ಕೋಪ ಹೋಗಬೇಕು. ಇಷ್ಟೆಲ್ಲ ಮಾಡುವವರು ಯಾರಾದರೂ ಬಂದಾಗ ಅವರ ಮೇಲೆ ಎಗರಿ ಬೀಳುತ್ತಾರೆ. ಅಲ್ಲಿಗೆ ಮಾಡಿದ್ದೆಲ್ಲ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ. ಅವರ ಹೃದಯ ಶುದ್ಧವಾಗಿದ್ದರೂ ಕೋಪ ಅವರ ಹುಟ್ಟುಗುಣ. ಅದನ್ನು ಸ್ವಲ್ಪ ಪಾಲಿಶ್ ಮಾಡಿಕೊಂಡರೆ ಜನರು ಅವರನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅವರು ಸದಾ ಹಾಸನ ಜಿಲ್ಲೆಗೆ ಸಂಬಂಧಿಸಿದ ಫೈಲ್​ಗಳನ್ನೇ ಹಿಡಿದುಕೊಂಡು ಬಂದರೆ ನನಗಾಗುವ ಕಷ್ಟವನ್ನೂ ಅರ್ಥ ಮಾಡಿಕೊಳ್ಳಬೇಕು. ವಿರೋಧ ಪಕ್ಷದವರು ನಮ್ಮದು ಹಾಸನದ ಜಿಲ್ಲೆಯ ಸರ್ಕಾರ ಎಂದು ವ್ಯಂಗ್ಯ ಮಾಡುತ್ತಾರೆ ಎಂದರು.

ಬಜೆಟ್​ನಲ್ಲಿ ಹಾಸನದ ರಿಂಗ್ ರಸ್ತೆಗೆ 30 ಕೋಟಿ ರೂ. ಅನುದಾನ ಮೀಸಲಿರಿಸಿದಾಗ ಬಿಜೆಪಿಯ ಶಾಸಕರು ವ್ಯಂಗ್ಯವಾಗಿ ಮೇಜು ಕುಟ್ಟಿದ್ದರು. ಮೃದು ಸ್ವಭಾವದ ಎಚ್.ಎಸ್.ಪ್ರಕಾಶ್ ಅವರ ಬದಲಾಗಿ ಹಾಸನದ ಕ್ಷೇತ್ರದ ಜನರು ಅಂತಹ ಪಕ್ಷದವರನ್ನು ಶಾಸಕರಾಗಿ ಆಯ್ಕೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಯಾವ ಭೂ ಕಬಳಿಕೆಯೂ ನಡೆದಿಲ್ಲ: ಸಚಿವ ಎಚ್.ಡಿ.ರೇವಣ್ಣ ಸರ್ಕಾರದ ಬೀಳು ಭೂಮಿ ಖರೀದಿ ಮಾಡಿದ್ದಾರೆ ಎನ್ನುವ ಆರೋಪ ಬಂದ ತಕ್ಷಣವೇ ನಾನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕರೆ ಮಾಡಿ ಪ್ರಕರಣದ ಸತ್ಯಾಸತ್ಯತೆ ಕುರಿತು ಮಾಹಿತಿ ನೀಡುವಂತೆ ಆದೇಶಿಸಿದ್ದೆ. ಈಗ ಅವರು ಆರೋಪದಲ್ಲಿ ಯಾವ ಸತ್ಯವೂ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. ದಾಖಲೆಗಳನ್ನು ಕಂದಾಯ ಇಲಾಖೆ ಆಯುಕ್ತರಿಗೂ ಕಳುಹಿಸಿಕೊಟ್ಟಿದ್ದಾರೆ. ಈ ಬಗ್ಗೆ ರೇವಣ್ಣ ಸ್ಪಷ್ಟನೆ ನೀಡಬೇಕಾದ ಅಗತ್ಯವಿಲ್ಲ. ಒಂದು ವೇಳೆ ನಮ್ಮ ಕುಟುಂಬದವರೇ ತಪ್ಪು ಮಾಡಿದರೂ ಅವರ ಮೇಲೆ ಕ್ರಮಕೈಗೊಳ್ಳುವಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದರು.