ದೇವೇಗೌಡರಿಗೆ ಹಾಸನವೇ ಕರ್ನಾಟಕ

ಶಿರಾ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ವಯಂ ಘೊಷಿತ ಮಣ್ಣಿನ ಮಗ. ಆ ಮಣ್ಣಿನ ಮಗನ ಪುತ್ರ ಕುಮಾರಸ್ವಾಮಿ ಎಂದಾದರೂ ನೇಗಿಲು ಹಿಡಿದು ಉಳುಮೆ ಮಾಡಿದ್ದಾರೆಯೇ? ಆದರೂ ಅವರು ಮಣ್ಣಿನ ಮಕ್ಕಳು. ಅವರೆಲ್ಲ ಮಣ್ಣಿನ ಮಕ್ಕಳಾದರೆ ಹೊಲದಲ್ಲಿ ದುಡಿಯುವ ನೀವ್ಯಾರು? ನಾವ್ಯಾರು? ಎಂದು ಜೆಡಿಎಸ್ ಮುಖಂಡರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಛೇಡಿಸಿದರು.

ಶಿರಾದಲ್ಲಿ ನಡೆದ ಸರ್ಕಾರದ ಸಾಧನ ಸಮಾವೇಶದಲ್ಲಿ ಮಾತನಾಡಿ, ದೇವೇಗೌಡರಿಗೆ ಹಾಸನ ಜಿಲ್ಲೆಯೇ ಒಂದು ರಾಜ್ಯ. ಆ ಜಿಲ್ಲೆಯನ್ನು ಬಿಟ್ಟು ಬೇರೆಲ್ಲೂ ಅವರ ರಾಜಕೀಯ ನಡೆಯುವುದಿಲ್ಲ. ಒಂದೆರಡು ಜಿಲ್ಲೆಯಲ್ಲಿ ಅವರು ಪ್ರಭಾವ ಉಳಿಸಿಕೊಂಡಿದ್ದು, ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತದೆ ಎಂದು ಹಗಲುಗನಸು ಕಾಣುತ್ತಿದ್ದಾರೆ ಎಂದರು.

ಮಗನನ್ನು ಸಿಎಂ ಮಾಡುವುದೇ ಗೌಡರಿಗೆ ಜೀವನದ ಕೊನೆಯಾಸೆಯಂತೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತ ಹಾಗೂ ಮುಸ್ಲಿಂ ಸಮುದಾಯದವರನ್ನು ಡಿಸಿಎಂ ಮಾಡಿಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನಿಜವಾಗಿಯೂ ಆ ಸಮುದಾಯದ ಬಗ್ಗೆ ಪ್ರೀತಿ ಇದ್ದರೆ ಸಿಎಂ ಸ್ಥಾನ ನೀಡುವುದಾಗಿ ಘೊಷಿಸಲಿ ಎಂದು ಸವಾಲೆಸೆದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆಯೇ ಹೊರತು ಬೇರೆ ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ. ನನಗೆ ಟಿಕೆಟ್ ನೀಡುವುದು ರಾಹುಲ್ ಗಾಂಧಿ, ವದಂತಿ ಹಬ್ಬಿಸುವವರಲ್ಲ.

| ಸಿದ್ದರಾಮಯ್ಯ ಸಿಎಂ

ಚುನಾವಣೆ ಬಳಿಕ ಮಾತುಕತೆ

ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ನಾನೇ ಗೋವಾಗೆ ಬಂದು ಮಾತನಾಡುತ್ತೇನೆ ಎಂದು ಮನೋಹರ್ ಪರಿಕ್ಕರ್​ಗೆ ಪತ್ರ ಬರೆದಿದ್ದೆ. ಆದರೆ, ಚುನಾವಣೆ ನಂತರ ಬನ್ನಿ ಎಂದು

ಅವರು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಪರಿಕ್ಕರ್ ಮತ್ತು ಬಿ.ಎಸ್.ಯಡಿಯೂರಪ್ಪ ರಾಜಕೀಯ ನಾಟಕವಾಡುತ್ತಿದ್ದಾರೆ ಎಂದು ಗೋವಾ ನೀರಾವರಿ ಸಚಿವರೇ ಹೇಳಿದ್ದಾರೆ. ಬಿಜೆಪಿ ಮುಖಂಡರಿಂದ ಮೋಸ ಹೋಗಿರುವ ರೈತರು ಚಳವಳಿಯ ಹಾದಿ ಹಿಡಿದಿದ್ದಾರೆ ಎಂದರು. ಮಹದಾಯಿ ವಿವಾದ ಮಾತುಕತೆ ಮೂಲಕವೇ ಬಗೆಹರಿಯಬೇಕು. ಮಾತುಕತೆಗೆ ರಾಜ್ಯ ಸರ್ಕಾರ ಸಿದ್ಧವಿದೆ. ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸಲಿ ಎಂದರು. ನನ್ನ 40 ವರ್ಷದ ರಾಜಕೀಯ ಅನುಭವದಲ್ಲಿ ಒಂದು ಪಕ್ಷ ಇನ್ನೊಂದು ಪಕ್ಷದ ಕಚೇರಿ ಎದುರು ಪ್ರತಿಭಟನೆ ನಡೆಸಿರುವುದು ಇದೇ ಮೊದಲು ಎಂದು ಕೆಪಿಸಿಸಿ ಕಚೇರಿ ಎದುರು ಬಿಜೆಪಿ ನಡೆಸಿದ ಪ್ರತಿಭಟನೆ ಖಂಡಿಸಿದರು.

Leave a Reply

Your email address will not be published. Required fields are marked *