ಕೊಟ್ಟಲಗಿ: ದೇವಸ್ಥಾನಗಳು ಕೇವಲ ಪೂಜೆ ಸ್ಥಳಗಳಲ್ಲ, ಅವು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ ಎಂದು ಕಾಂಗ್ರೆಸ್ ಯುವ ಮುಖಂಡ ಚಿದಾನಂದ ಸವದಿ ಕರೆ ನೀಡಿದರು.
ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಾದ್ವಾರ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ, ದ್ವಾರ ಬಾಗಿಲು ನಿರ್ಮಾಣದಂತಹ ಅನೇಕ ಕಾರ್ಯಗಳು ಆಧ್ಯಾತ್ಮಿಕ ಉನ್ನತಿ ಮತ್ತು ಸಕಾರಾತ್ಮಕ ಶಕ್ತಿ ಪಡೆಯಲು ಸಹಕಾರಿಯಾಗಿವೆ. ನಮ್ಮ ತಂದೆ ಶಾಸಕ ಲಕ್ಷ್ಮಣ ಸವದಿ ಅವರು ಇಂದು ನೀರಾವರಿ ಕಾಮಗಾರಿಗಳ ಮೂಲಕ ಅಥಣಿ ಕ್ಷೇತ್ರವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ ಎಂದರು.
ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀಗಳು ಮಾತನಾಡಿ, ಆಚರಣೆಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಆಚರಣೆಗಳು ಕೇವಲ ಆಡಂಬರವಾಗಬಾರದು. ಅವು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಪೂರ್ವಜರ ಜ್ಞಾನವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಸಾಧನ ಎಂದರು.
ಯಕ್ಕಂಚಿಯ ಗುರುಪಾದ ಶ್ರೀಗಳು ಮಾತನಾಡಿ, ಜೀವನದಲ್ಲಿ ಪ್ರಾಮಾಣಿಕತೆ, ದಯೆ, ಸಹಾನುಭೂತಿ ಮತ್ತು ತ್ಯಾಗದಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಅನಗತ್ಯ ಖರ್ಚು ಕಡಿಮೆಗೊಳಿಸಿ, ಅಗತ್ಯವಿರುವವರಿಗೆ ಸಹಾಯ ಮಾಡುವಂತಹ ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸಿರಿ ಎಂದರು.
ಸಿದರಾಯ ಯಲ್ಲಡಗಿ ಹಾಗೂ ಗ್ರಾಮದ ಹಿರಿಯ ಮುಖಂಡರು ಇತರರಿದ್ದರು.