ದೇವಳಕ್ಕೆ ಮಹಿಳೆಯರ ಪ್ರವೇಶ ವಿರೋಧವೇಕೆ?

<<ಬಿಜೆಪಿ, ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಜನಾರ್ದನ ಪೂಜಾರಿ ಕಿಡಿ>>

– ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಾತೃದೇವೋಭವ ಎನ್ನುವ ನಾವು ದೇವಳಕ್ಕೆ ಮಹಿಳೆಯರ ಪ್ರವೇಶ ವಿರೋಧಿಸುವುದೇಕೆ? ಮಹಿಳೆಯರು ದೇವರ ಮಕ್ಕಳಲ್ಲವೇ? ಶಬರಿಮಲೆಗೆ ಮಹಿಳೆಯರು ಬರಬಾರದು ಎಂದು ಅಯ್ಯಪ್ಪ ದೇವರು ಹೇಳಿದ್ದಾರೆಯೇ?
ಇದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಪ್ರಶ್ನೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸುವವರ ವಿರುದ್ಧ ಕೇರಳ ಸಿಎಂ ಕಠಿಣ ಕ್ರಮ ಕೈಗೊಳ್ಳಲಿ. ಮಹಿಳೆಯರು ಪ್ರವೇಶ ಮಾಡಬಾರದು ಎನ್ನುವುದು ರಾಜಕೀಯ. ಬಿಜೆಪಿ ಮತ್ತು ಕಾಂಗ್ರೆಸ್‌ನವರು ಶಬರಿಮಲೆ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಅಯ್ಯಪ್ಪ ಧರ್ಮಸೇನಾ ಅಧ್ಯಕ್ಷ ರಾಹುಲ್ ಈಶ್ವರ್ ಆದಾಯಕ್ಕೆ ಪೆಟ್ಟಾಗಿದೆ. ಹೀಗಾಗಿ ಶಬರಿಮಲೆ ವಿಚಾರದಲ್ಲಿ ವಿರೋಧಿಸುತ್ತಿದ್ದಾರೆ. ಎಲ್ಲ ಮಹಿಳೆಯರು ದೇವಸ್ಥಾನ ಪ್ರವೇಶ ಮಾಡುವಂತಾಗಲು ಕೇರಳ ಸಿಎಂ ಧೈರ್ಯ ತೋರಲಿ. ಇದನ್ನು ಖಂಡಿತಾ ದೇವರು ಮೆಚ್ಚುತ್ತಾರೆ ಎಂದರು.

ಲೋಕಸಭೆ ಸ್ಪರ್ಧೆಗೆ ಸಿದ್ಧ:  ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧನಿದ್ದೇನೆ. ನನಗೇನು ವಯಸ್ಸಾಗಿಲ್ಲ, ಟಿಕೆಟ್‌ಗಾಗಿ ಹೈಕಮಾಂಡ್ ಜತೆ ಮಾತನಾಡುತ್ತೇನೆ. ನನಗೆ ಟಿಕೆಟ್ ಕೊಡುವವರು ಸ್ಥಳೀಯ ಮುಖಂಡರಲ್ಲ, ಹೈಕಮಾಂಡ್ ಎಂದು ಪೂಜಾರಿ ಹೇಳಿದರು.

ರಾಮನ ಅವಮಾನ ಸಲ್ಲ:  ಶ್ರೀರಾಮಚಂದ್ರನ ಬಗ್ಗೆ ಪ್ರೊ.ಭಗವಾನ್ ಅವಹೇಳನ ಮಾಡಿರುವುದು ದೊಡ್ಡ ದುರಂತ, ಮುಸ್ಲಿಮರಿಗೆ ಪೈಗಂಬರ್, ಕ್ರೈಸ್ತರಿಗೆ ಏಸು, ಹಿಂದುಗಳಿಗೆ ಶ್ರೀರಾಮ ಆರಾಧ್ಯ ದೇವರು. ನಾಲಗೆ ಇದೆ ಎಂದು ಇನ್ನೊಂದು ಧರ್ಮದ ನಂಬಿಕೆಗೆ ನೋವಾಗುವಂತೆ ಮಾತಾಡುವುದು ಸರಿಯಲ್ಲ. ದೇವರನ್ನು ನಂಬದಿದ್ದರೂ ಪರವಾಗಿಲ್ಲ, ಅವಹೇಳ ಮಾಡಬಾರದು. ಭಗವಾನ್ ಈ ರೀತಿ ಮಾತನಾಡುವುದರ ಹಿಂದೆ ಗಲಾಟೆ ಎಬ್ಬಿಸುವ ಹುನ್ನಾರವಿದೆ ಎಂದು ಪೂಜಾರಿ ಹೇಳಿದರು.