ದೇವರ ಹಸುಗಳಿಗೆ ಮೇವು ವಿತರಣೆ

ಪಾವಗಡ: ಮೇವು ಅರಸಿ ನೆರೆಯ ಆಂಧ್ರದ ಮಡಕಶಿರಾ ತಾಲೂಕಿನ ಗಂದಕಲ್ಲಹಟ್ಟಿಯಿಂದ ಪಾವಗಡ ತಾಲೂಕಿನ ಹುದ್ದಗಟ್ಟೆಗೆ ಬಂದ ಯತ್ತಪ್ಪ ದೇವರ ಹಸುಗಳಿಗೆ ಶ್ರೀ ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಂಗಳವಾರ ಒಂದು ಟ್ರಾ್ಯಕ್ಟರ್ ಮೇವು ನೀಡಿ ಮಾನವೀಯತೆ ಮೆರೆದರು.

ಮೇವು ಮತ್ತು ನೀರಿನ ಸಮಸ್ಯೆಯಿಂದ ಮಡಕಶಿರಾ ತಾಲೂಕಿನ ಗಂಧಕಲ್ಲಹಟ್ಟಿಯಿಂದ 150 ಹಸುಗಳು, 50 ಕರುಗಳು ಹುದ್ದಗಟ್ಟೆಗೆ ಬಂದಿದ್ದು, ಮಾನವೀಯತೆಯಿಂದ ಮೇವು ನೀಡಲಾಗಿದೆ. ಮೇವಿಲ್ಲದೆ ಗೋವುಗಳು ಸಾಯಬಾರದು. ರಾಜ್ಯದಲ್ಲಿ ಮಳೆ ಬಂದು ಮೇವು ಸಿಗುವವರೆಗೂ ಇನ್ಪೋಸಿಸ್ ಸಹಯೋಗದಲ್ಲಿ ಮೇವು ನೀಡಲಾಗುವುದು ಎಂದು ಸ್ವಾಮಿ ಜಪಾನಂದಜೀ ತಿಳಿಸಿದರು.

ಕೆ.ಟಿ.ಹಳ್ಳಿ ಗ್ರಾಪಂನಿಂದ ಈ ಗೋವುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮದ ಪುನೀತ್ ಒತ್ತಾಯಿಸಿದರು.

ಮೇವು, ನೀರಿಲ್ಲದೆ ವಲಸೆ ಬಂದ 200ಕ್ಕೂ ಹೆಚ್ಚು ಹಸುಗಳ ಮೂಳೆಗಳು ಕಾಣುವಂತಾಗಿದೆ. 5 ಹಸುಗಳು ಇತ್ತೀಚೆಗಷ್ಟೇ ಮೃತಪಟ್ಟಿವೆ. ಹಸುಗಳ ದಯನೀಯ ಸ್ಥಿತಿ ಕುರಿತು ಸ್ಥಳಿಯರಿಂದ ಮಾಹಿತಿ ಪಡೆದ ಸ್ವಾಮಿ ಜಪಾನಂದಜೀ ಮಂಗಳವಾರ ಆಶ್ರಮದ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ 1 ಟ್ರಾ್ಯಕ್ಟರ್ ಮೇವು ವಿತರಿಸಿದ್ದಾರೆ ಎಂದು ಗೋಪಾಲಕ ನರಸಿಂಹ ತಿಳಿಸಿದರು.