ದೇವರ ಸ್ಮರಣೆಯಿಂದ ಒತ್ತಡ ಮುಕ್ತ  

ಭಟ್ಕಳ: ವೇಗವಾಗಿ ಬೆಳೆಯುತ್ತಿರುವ ಪ್ರಪಂಚದಲ್ಲಿ ಮಾನವನಿಗೆ ಒತ್ತಡಯುಕ್ತ ಜೀವನದಿಂದ ಹೊರಬರಲು ದೇವ ಸ್ಮರಣೆಯೊಂದೆ ದಾರಿ ಎಂದು ಚಿತ್ರಾಪುರ ಮಠಾಧೀಶ ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಹೇಳಿದರು.ಚಾತುರ್ವಸ್ಯ ವ್ರಚಾತರಣೆ ನಿಮಿತ್ತ ಶಿರಾಲಿಯ ಚಿತ್ರಾಪುರ ಮಠದಲ್ಲಿ ಪೂಜಾ ವಿಧಿ-ವಿಧಾನ ಪೂರೈಸಿ ಆಶಿರ್ವಚನ ನೀಡಿದರು.

‘ದೇವರನ್ನು ಒಲಿಸಿಕೊಳ್ಳುವ ಮೊದಲು ತನ್ಮಯತೆ, ಏಕಾಗ್ರತೆ ಅವಶ್ಯ. ಸರಿಯಾದ ಕ್ರಮದಿಂದ ಪ್ರಾಣಾಯಾಮ ಮಾಡಿ ಜಪ, ತಪದಲ್ಲಿ ಮಗ್ನರಾದರೆ ದೇವ-ಮಾನವರ ಸಂಬಂಧ ಹತ್ತಿರವಾಗುತ್ತದೆ. ಪ್ರಾರ್ಥಿಸುವಾಗ ಅನುಸಂದಾನ, ವ್ಯವಹರಿಸುವಾಗ ಅನುಸ್ಮರಣೆ ಮಾಡಬೇಕು. ಇಂದಿನ ಆಧುನಿಕ ಜಗತ್ತಿನಲ್ಲಿ ಅಂತರ್ಜಾಲ, ಸಾಮಾಜಿಕ ಜಾಲತಾಣಗಳಲ್ಲಿ ದೇವರ ಪೂಜೆ, ಅನುಷ್ಠಾನಗಳನ್ನು ವೀಕ್ಷಿಸುವ ಪರಿಪಾಠ ಹೆಚ್ಚುತ್ತಿದೆ. ಮಠದ ಕಾರ್ಯಕ್ರಮಗಳನ್ನು ದೂರದ ಊರಿನಲ್ಲಿ ವೀಕ್ಷಣೆ ಮಾಡಲಾಗುತ್ತದೆ. ಆದರೆ, ಇದರಿಂದ ಭಕ್ತಿ ಜಾಗೃತಗೊಳ್ಳುವುದಿಲ್ಲ. ಏಕಾಗ್ರತೆ, ಭಾವಪರವಶತೆ ಅನುಭವವಾಗುವುದಿಲ್ಲ. ಸಾಧ್ಯವಾದಷ್ಟು ಅನುವು ಮಾಡಿಕೊಂಡು ದೈವಿ ಸಾನ್ನಿಧ್ಯಕ್ಕೆ ಭೇಟಿ ನೀಡಿ ಜಾಗೃತ ಶಕ್ತಿಯ ಅನುಭವ ಪಡೆಯಬೇಕು’ಎಂದರು.

ಚಾತುರ್ವಸ್ಯ ಸಮಿತಿ ಪದಾಧಿಕಾರಿ ವಿವೇಕ ನಾಡಕರ್ಣಿ ಮಾತನಾಡಿದರು. ಪದಾಧಿಕಾರಿ ಪ್ರವೀಣ ಕಡ್ಲೆ, ವ್ಯವಸ್ಥಾಪಕ ನಾರಾಯಣ ಮಲ್ಲಾಪುರ, ಸ್ಥಳೀಯ ಸಭಾ ಸಮಿತಿ ಅಧ್ಯಕ್ಷ ಕೇಶವ ಸೊರಬ, ಮಠದ ಪದಾಧಿಕಾರಿಗಳು, ದೇಶ-ವಿದೇಶಗಳಿಂದ ಆಗಮಿಸಿದ ಭಕ್ತರು ಇದ್ದರು.