ದೇವತಾರಾಧನೆಯಿಂದ ಅಜ್ಞಾನ ದೂರ

ಯಲ್ಲಾಪುರ: ದೇವತಾರಾಧನೆಯ ಜತೆಗೆ ಕಲಾರಾಧನೆಯಿಂದ ಅಜ್ಞಾನ, ಅಂಧಕಾರಗಳು ದೂರಾಗಿ ಜ್ಞಾನ ಪ್ರಾಪ್ತವಾಗುತ್ತದೆ ಎಂದು ಶ್ರೀ ಸ್ವರ್ಣವಲ್ಲೀ ಸಂಸ್ಕೃತ ಮಹಾಪಾಠಶಾಲೆಯ ಅಧ್ಯಾಪಕ ಡಾ. ಶಂಕರ ಭಟ್ಟ ಬಾಲಿಗದ್ದೆ ಹೇಳಿದರು.

ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತಿ ನೃತ್ಯ ಕೇಂದ್ರದ ಆಶ್ರಯದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ಹಮ್ಮಿಕೊಂಡಿದ್ದ ನೃತ್ಯನಮನ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಟಿಎಂಎಸ್ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಭರತನಾಟ್ಯ, ಯಕ್ಷಗಾನದಂಥ ಮೇರು ಕಲೆಗಳು ಕಣ್ಣಿಗೆ ಆನಂದ ಮತ್ತು ಮನಸ್ಸಿಗೆ ಮುದ ನೀಡುತ್ತವೆ ಎಂದರು.

ಅನಂತ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಗುಮ್ಮಾನಿ, ಟಿಎಂಎಸ್ ನಿರ್ದೇಶಕ ನರಸಿಂಹ ಕೋಣೆಮನೆ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಜಿ.ಎನ್. ಭಟ್ ತಟ್ಟಿಗದ್ದೆ, ಪತ್ರಕರ್ತ ಶ್ರೀಧರ ಅಣಲಗಾರ ಮಾತನಾಡಿದರು.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ರಾಮಕೃಷ್ಣ ಭಟ್ಟ ಬಿದ್ರೇಪಾಲ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಯಕ್ಷಗಾನ ಭಾಗವತ ಎನ್.ಎಸ್. ಹೆಗಡೆ ಕುಂಟೇಮನೆ ಅವರನ್ನು ಸನ್ಮಾನಿಸಲಾಯಿತು. ಭಗವದ್ಗೀತೆ ಅಭಿಯಾನದ ಅಂಗವಾಗಿ ಭಗವದ್ಗೀತೆಯ 8ನೇ ಅಧ್ಯಾಯವನ್ನು ಕೃಪಾ ಹೆಗಡೆ ಹಾಗೂ ಸುಜಾತಾ ಹೆಗಡೆ ಪ್ರಸ್ತುತಪಡಿಸಿದರು. ಭಾರತಿ ನೃತ್ಯ ಕಲಾಕೇಂದ್ರ ಅಧ್ಯಕ್ಷ ವಿ.ಟಿ. ಹೆಗಡೆ ತೊಂಡೆಕೆರೆ, ಸುಮಾ ಹೆಗಡೆ ಉಪಸ್ಥಿತರಿದ್ದರು.

ಪರಮಾನಂದ ದುಂಡಿ, ರವೀಂದ್ರ ಭಟ್ಟ ವೈದಿಕರಮನೆ ನಿರ್ವಹಿಸಿದರು. ನಂತರ ಭಾರತಿ ನೃತ್ಯ ಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯನಮನ ಹಾಗೂ ಸ್ಥಳೀಯ ಕಲಾವಿದರಿಂದ ರಾಮಾಂಜನೇಯ ತಾಳಮದ್ದಲೆ ನಡೆಯಿತು.