ಚಿಕ್ಕಮಗಳೂರು: ತಾಲೂಕಿನ ಮುಗುಳುವಳ್ಳಿಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ವೀರಭದ್ರೇಶ್ವರ ಸ್ವಾಮಿಯ ಶಿಲಾಮಯ ದೇಗುಲದ ಲೋಕಾರ್ಪಣೆಯ ಧಾರ್ಮಿಕ ವಿಧಿ ವಿಧಾನಗಳು ಗುರುವಾರ ದೇವಾಲಯ ಪ್ರವೇಶ ಮತ್ತು ಧ್ವಜಾರೋಹಣದೊಂದಿಗೆ ಆರಂಭಗೊAಡವು.

ನಸುಕು ಹರಿಯುತ್ತಿದ್ದಂತೆ ಶಂಕರ ದೇವರ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮತ್ತು ಫಲಾಹಾರ ಸ್ವಾಮಿ ಮಠದ ಶ್ರೀಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಮುಂದಾಳತ್ವದಲ್ಲಿ ಊರ ಮುಂಭಾಗಕ್ಕೆ ತೆರಳಿದ ನೂರಾರು ಮಹಿಳೆಯರು, ಗ್ರಾಮಸ್ಥರು, ಗಂಗಾ ಪೂಜೆ ನೆರವೇರಿಸಿ ಗಂಗೆಯನ್ನು ಕಳಸಗಳಲ್ಲಿ ಹೊತ್ತು ವೀರಗಾಸೆ ಮತ್ತು ಗ್ರಾಮೀಣ ವಾದ್ಯಗಳು ಗ್ರಾಮ ದೇವತೆಗಳ ಉತ್ಸವಮೂರ್ತಿಗಳು ಶಿಖರ ಕಳಶದೊಂದಿಗೆ ಮೆರವಣಿಗೆಯಲ್ಲಿ ನೂತನ ದೇವಾಲಯಕ್ಕೆ ಆಗಮಿಸಿದರು.
ಮಹಿಳೆಯರು ಹೊತ್ತು ತಂದ ಕಳಶಗಳ ನೀರಿನಿಂದ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಅಭಿಷೇಕ ಮಾಡಲಾಯಿತು. ನಂತರ ಫಲಾಹಾರ ಸ್ವಾಮಿ ಮಠದ ಶ್ರೀಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ ಕಳಸದೊಂದಿಗೆ ದೇವಾಲಯದ ಗೋಪುರಕ್ಕೆ ತೆರಳಿ ಕಳಸಾರೋಹಣ, ಕುಂಬಾಭಿಷೇಕ ನೆರವೇರಿಸಿದರು.
ಕಳಸಾರೋಹಣದ ನಂತರ ಗೋಪುರದಿಂದಲೇ ಗ್ರಾಮಸ್ಥರಿಗೆ ಸಿಹಿ ವಿತರಿಸಲಾಯಿತು. ಶ್ರೀವೀರಭದ್ರೇಶ್ವರ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ, ಮಹಾರುದ್ರಾಭಿಷೇಕ, ಮಹಾ ಮಂಗಳಾರತಿ, ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿದವು.
ಈ ವೇಳೆ ಆಶೀರ್ವಚನ ನೀಡಿದ ಫಲಾಹಾರ ಸ್ವಾಮಿ ಮಠದ ಶ್ರೀಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ, ದೇವಾಲಯಗಳ ಜೀರ್ಣೋದ್ಧಾರದ ಜೊತೆಗೆ ಮನುಷ್ಯರ ಮನಸ್ಸುಗಳ ಜೀರ್ಣೋದ್ಧಾರವೂ ಆಗಬೇಕು. ಹಾಗಾದಾಗ ಮಾತ್ರ ಆರೋಗ್ಯವಂತ ಸಮಾಜದ ನಿರ್ಮಾಣವಾಗುತ್ತದೆ ಎಂದರು.
ದೇವಾಲಯಗಳನ್ನು ನಿರ್ಮಿಸುವುದು ದೇವರಿಗಾಗಿ ಅಲ್ಲ. ದೇವಾಲಯಗಳನ್ನು ನಿರ್ಮಿಸುವುದು ಭಕ್ತರಿಗಾಗಿ ಎಂದ ಸ್ವಾಮೀಜಿ ದೇವಾಲಯಗಳಿಗೆ ತೆರಲಿ ಪೂಜೆ, ಪ್ರಾರ್ಥನೆ ಸಲ್ಲಿಸುವುದರಿಂದ ಮಾನಸಿಕ ಶಾಂತಿ ನೆಮ್ಮದಿ ಲಭಿಸುತ್ತದೆ ಎಂದು ತಿಳಿಸಿದರು.
ಶಂಕರ ದೇವರ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮುಗುಳುವಳ್ಳಿಯ ಗ್ರಾಮಸ್ಥರ ಕಾರ್ಯವನ್ನು ಮಾದರಿಯಾಗಿ ತೆಗೆದುಕೊಂಡು ಎಲ್ಲ ಗ್ರಾಮಗಳಲ್ಲೂ ಗ್ರಾಮಸ್ಥರು ದೇವಾಲಯಗಳ ಜೀರ್ಣೋದ್ಧಾರ ಮಾಡಬೇಕು ಎಂದು ಕಿವಿಮಾತು ಹೇಳಿದರು.
ದೇವಾಲಯ ಲೋಕಾರ್ಪಣೆ ನಿಮಿತ್ತ ಇಡೀ ಗ್ರಾಮ ತಳಿರು ತೋರಣಗಳಿಂದ ಅಲಂಕೃತಗೊAಡಿದ್ದು, ಊರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ಬಿ.ಮಲ್ಲಪ್ಪ, ಕಾರ್ಯದರ್ಶಿ ಎಂ.ಸಿ.ರುದ್ರೇಶ್, ಮುಖಂಡರಾದ ಎಂ.ಆರ್.ನವೀನ್, ಎಂ.ಎಸ್.ನಿರAಜನ್, ಎನ್.ವಿಜಯಕುಮಾರ್, ಎಂ.ಜೆ.ನವೀನ್, ದಿನೇಶ್ ಕುಮಾರ್, ಪರಮೇಶ್ವರಪ್ಪ, ಶೃತಿ ಉಮೇಶ್, ಗಂಗಾಧರ ಸ್ವಾಮಿ, ರಘುನಂದನ್, ಮಲ್ಲಿಕಾರ್ಜುನ ಸ್ವಾಮಿ, ಎಂ.ಎA.ಶಿವಣ್ಣ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ರಂಭಾಪುರಿ ಮಠಾಧೀಶ ಶ್ರೀಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರು ದೇವಾಲಯ ಲೋಕಾರ್ಪಣೆ ಕಾರ್ಯಕ್ಕೆ ಶುಕ್ರವಾರ ಬೆಳಗ್ಗೆ ಗ್ರಾಮಕ್ಕೆ ಆಗಮಿಸಲಿದ್ದು, ಜಗದ್ಗುರುಗಳಿಂದ ಇಷ್ಟಲಿಂಗ ಮಹಾಪೂಜೆ ಮಧ್ಯಾಹ್ನ ಧರ್ಮಸಭೆ ನಡೆಯಲಿದೆ.