ಚಿತ್ರದುರ್ಗ: ಸಂಕ್ರಾಂತಿ ಹಬ್ಬದ ಅಂಗವಾಗಿ ಜ. 14ರಂದು ಕೋಟೆನಗರಿಯ ನವದುರ್ಗಿಯರಾದ ಏಕನಾಥೇಶ್ವರಿ, ಬರಗೇರಮ್ಮ, ಉಚ್ಚಂಗಿಯಲ್ಲಮ್ಮ, ಕಣಿವೆಮಾರಮ್ಮ, ತ್ರಿಪುರಸುಂದರಿ ತಿಪ್ಪನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಚೌಡೇಶ್ವರಿ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ ದೇಗುಲಗಳಲ್ಲಿ ವಿಶೇಷಾಲಂಕಾರ, ಪೂಜೆಗಳು ಜರುಗಲಿವೆ.
ಇನ್ನೂ ದುರ್ಗಾಂಬಿಕಾ, ಮಲೆನಾಡು ಚೌಡೇಶ್ವರಿ, ಕೊಲ್ಲಾಪುರದ ಮಹಾಲಕ್ಷ್ಮೀ, ಅಂತರಘಟ್ಟಮ್ಮ, ಮಾಸ್ತಮ್ಮ, ಮೈಲಮ್ಮ, ಬುಡ್ಡಮ್ಮ, ಕಾಳಿಕಮಠೇಶ್ವರಿ, ಬೆಟ್ಟದ ಗಣಪತಿ, ಮೇಲುದುರ್ಗದ ಹಿಡಂಭೇಶ್ವರ, ಸಂಪಿಗೆ ಸಿದ್ದೇಶ್ವರ ಸೇರಿ ಹಲವು ದೇಗುಲಗಳಲ್ಲಿ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲು ಭರದ ಸಿದ್ಧತೆ ಕೈಗೊಳ್ಳಲಾಗಿದೆ.
ಪುಷ್ಪಗಳ ದರ ಏರಿಕೆ: ಪ್ರತಿ ಹಬ್ಬದಲ್ಲಿಯೂ ಸಾಮಾನ್ಯವಾಗಿ ಪುಷ್ಪಗಳ ದರ ಏರಿಕೆ ಆಗುತ್ತದೆ. ಅಲ್ಲದೆ, ಸಂಕ್ರಾಂತಿ ಹಬ್ಬದಲ್ಲಿ ಹಲವು ದೇಗುಲಗಳಲ್ಲಿ ವಿಶೇಷ ಅಲಂಕಾರ ಸೇವೆ ನೆರವೇರಿಸುವ ಕಾರಣ ಹೂವಿಗೆ ಬೇಡಿಕೆ ಜತೆ ದರ ಏರಿಕೆ ಕೂಡ ಕಂಡುಬಂದಿತು. ಎಪಿಎಂಸಿ ಸಗಟು ಹೂವಿನ ಮಾರುಕಟ್ಟೆಯಲ್ಲಿ ಎಲ್ಲ ವರ್ಣದ ಗುಣಮಟ್ಟದ ಸೇವಂತಿ 8-10 ಮಾರಿಗೆ ತಲಾ 1ಸಾವಿರ ರೂ., ಇದೇ ದರಕ್ಕೆ ಕನಕಾಂಬರ 10 ಮಾರು, ಬಟನ್ಸ್ ಕೆ.ಜಿ.ಗೆ 300-350 ರೂ., ಖಾಸಗಿ ಬಸ್ ನಿಲ್ದಾಣ ಸಮೀಪದ ಮಾರುಕಟ್ಟೆಯಲ್ಲಿ ದೊಡ್ಡ ಹಾರಗಳನ್ನು 1 ಸಾವಿರದಿಂದ 10 ಸಾವಿರ ರೂ.ವರೆಗೂ ಅಳತೆ ಮತ್ತು ಗಾತ್ರಕ್ಕೆ ತಕ್ಕಂತೆ ತಯಾರಿಸಲಾಗಿತ್ತು.