ಕೊಡಗು: ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಸಮಾಜಕ್ಕೆ ದೊಡ್ಡ ಪಿಡುಗಾಗಿ ಪರಿಣಮಿಸಿದ್ದು, ಇಂದಿನ ಯುವ ಜನಾಂಗ ದಾರಿ ತಪ್ಪುತ್ತಿದೆ ಎಂದು ಜಿಲ್ಲಾ ತಂಬಾಕು ಸರ್ವೇಕ್ಷಣಾ ಅಧಿಕಾರಿ ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.
ಸೋಮವಾರಪೇಟೆ ತಾಲೂಕಿನ ಐಗೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಮಕ್ಕಳ ಪಾಲಕರ ಸಭೆ ಮತ್ತು ತಂಬಾಕು ಹಾಗೂ ಮಾದಕ ವಸ್ತುಗಳ ಸೇವನೆ ಮತ್ತು ದುಷ್ಪರಿಣಾಮದ ಕುರಿತು ಪಾಲಕರಿಗೆ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದಕ ವಸ್ತುಗಳ ಬಳಕೆ ನಿಲ್ಲಿಸಿದರೆ ಮಾರಾಟಗಾರರು ಅದನ್ನು ಮಾರಲು ಮುಂದಾಗುವುದಿಲ್ಲ. ಕ್ರಮೇಣ ಅದರ ತಯಾರಿಕೆಯೂ ನಿಲ್ಲುತ್ತದೆ. ಪಾಲಕರು ಸಹ ಮಕ್ಕಳ ಎದುರಿನಲ್ಲಿ ಮದ್ಯ ಸೇವನೆ ಹಾಗೂ ಧೂಮಪಾನ ಮಾಡಬಾರದು. ಮಕ್ಕಳು ಇದನ್ನೇ ಅನುಸರಿಸಿದರೆ ಇಡೀ ಸಮಾಜ ಹಾಳಾಗುತ್ತದೆ ಎಂದರು.
ಮಾದಕ ವಸ್ತುಗಳ ಸೇವನೆಯ ಚಟವನ್ನು ಬಿಡಿಸಲು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಪುನಶ್ಚೇತನ ಶಿಬಿರವನ್ನು ನಡೆಸಲಾಗುತ್ತಿದ್ದು, ಅಗತ್ಯವಿರುವವರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಮತಾ, ಶಾಲಾ ಮುಖ್ಯ ಶಿಕ್ಷಕ ಯಶ್ವಂತ್ ಕುಮಾರ್ ಇದ್ದರು.