ದುರ್ವಾಸನೆ ಬೀರುತ್ತಿರುವ ತ್ಯಾಜ್ಯ ನೀರು

ಮುಂಡಗೋಡ: ಪಟ್ಟಣದ ಹುಬ್ಬಳ್ಳಿ ರಸ್ತೆಯ ಪಕ್ಕದಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದ್ದು ಸಾರ್ವಜನಿಕರು, ವಾಹನ ಸವಾರರು ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ನಿರ್ವಣವಾಗಿದೆ.

ಪಟ್ಟಣದ ಗಾಂಧಿ ನಗರ, ನೆಹರು ನಗರ, ಆನಂದ ನಗರ, ಇಂದಿರಾ ನಗರದಿಂದ ಕೊಳಚೆ ನೀರು ಇಲ್ಲಿಗೆ ಹರಿದು ಬರುತ್ತದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಿದ್ದರು. ನಂತರ ಪಿಡಬ್ಲ್ಯುಡಿ ಇಲಾಖೆ ಕೆಲ ದಿನಗಳ ಹಿಂದೆ ಮುಖ್ಯ ರಸ್ತೆ ಸಿಡಿ ನಿರ್ಮಾಣ ಮಾಡಿತ್ತು. ಆದರೆ, ಸಿಡಿ ನಿರ್ವಣದ ನಂತರ ಈ ಕೊಳಚೆ ನೀರು ಮುಂದೆ ಹರಿದು ಹೋಗದೆ ರಸ್ತೆ ಪಕ್ಕದಲ್ಲೇ ನಿಂತು ದೊಡ್ಡ ಗುಂಡಿಯೇ ನಿರ್ವಣವಾಗಿದೆ. ಈ ಗುಂಡಿಯಲ್ಲಿ ತ್ಯಾಜ್ಯ, ಪ್ಲಾಸ್ಟಿಕ್ ಚೀಲ ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ದೈವಜ್ಞ ಸಭಾಭವನ, ಹೆಸ್ಕಾಂ, ಮಿನಿ ವಿಧಾನಸೌಧ, ಎಪಿಎಂಸಿಗೆ ತೆರಳುವ ರಸ್ತೆ ಇದಾಗಿದ್ದು, ಎದುರಿನಲ್ಲಿಯೇ ಇರುವ ವಾಣಿಜ್ಯ ಮಳಿಗೆಗೂ ಇದರ ದುರ್ವಾಸನೆ ವ್ಯಾಪಿಸಿದೆ. ಹೀಗಾಗಿ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಈ ಕುರಿತು ಶಾಶ್ವತ ಪರಿಹಾರ ಒದಗಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಮೂರ್ನಾಲ್ಕು ತಿಂಗಳಿಂದ ಈ ರಸ್ತೆಯಲ್ಲಿ ದುರ್ನಾತ ಬೀರುತ್ತಿದ್ದು ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ನಿಂತ ಕೊಳಚೆ ನೀರಿನಿಂದ ಸೊಳ್ಳೆಗಳು ಮತ್ತು ಕ್ರಿಮಿ ಕೀಟಗಳು ಉತ್ಪತ್ತಿಯಾಗುತ್ತಿವೆ. ಬೇಸಿಗೆಯಲ್ಲೇ ಈ ರೀತಿ ತೊಂದರೆಯಾದರೆ, ಮಳೆಗಾಲದಲ್ಲಿ ಇನ್ನೂ ಹೆಚ್ಚು ತೊಂದರೆ ಅನುಭವಿಸಬೇಕಾಗಿದೆ. ಹೀಗಾಗಿ ಅಧಿಕಾರಿಗಳು ಶಾಶ್ವತ ಪರಿಹಾರ ಒದಗಿಸಲಿ.

| ಗಣೇಶ ಶಿರಾಲಿ, ವಾಣಿಜ್ಯ ಮಳಿಗೆ ವ್ಯಾಪಾರಸ್ಥ.

ಕೊಳಚೆ ನೀರು ಮುಂದೆ ಹರಿದು ಹೋಗುವಂತೆ ಪಿಡಬ್ಲು್ಯಡಿ ಇಲಾಖೆ ಕಾಮಗಾರಿ ಮಾಡಬೇಕಿತ್ತು. ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ವಣಕ್ಕಾಗಿ ಜೆಸಿಬಿ ಅವರಿಗೆ ತಿಳಿಸಿದ್ದೇನೆ. ಅವರು ಜೂನ್ 3ರಂದು ಕಾಮಗಾರಿ ಆರಂಭಿಸಲಿದ್ದಾರೆ. ಆ ಸ್ಥಳದಿಂದ ಮುಂದೆ ಅಗೆಯಿಸಿ ಕೊಳಚೆ ನೀರು ಮುಂದೆ ಹರಿಯಲು ಕ್ರಮ ಕೈಗೊಳ್ಳಲಾಗುವುದು.

| ಮಹಾದೇವ ಭೃಂಗಿಮಠ, ಮುಖ್ಯಾಧಿಕಾರಿ ಪಪಂ.

Leave a Reply

Your email address will not be published. Required fields are marked *