ದುರ್ಬಳಕೆ ಸಲ್ಲದು

ಉಪಯೋಗಕ್ಕೆ ಬಾರದ ಹಾಗೂ ಕ್ಷುಲ್ಲಕ ಕಾರಣಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವ ವ್ಯಕ್ತಿಗಳಿಗೆ ದಂಡ ವಿಧಿಸುವಂತೆ ಸುಪ್ರೀಂಕೋರ್ಟ್ ಎಲ್ಲ ನ್ಯಾಯಾಲಯಗಳಿಗೆ ಮಂಗಳವಾರ ಸೂಚನೆ ಕೊಟ್ಟಿದ್ದು, ಆರ್​ಟಿಐ ಕಾರ್ಯಕರ್ತರು ಹಾಗೂ ಹಲವು ಸಂಘಟನೆಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ನಿರುಪಯುಕ್ತ ಅರ್ಜಿಗಳಿಂದ ನ್ಯಾಯಾಂಗದ ಕಾರ್ಯಕ್ಕೆ ಅಡ್ಡಿ ಉಂಟಾಗುತ್ತಿದ್ದು, ಮಹತ್ವದ ಪ್ರಕರಣಗಳ ವಿಚಾರಣೆ ನನೆಗುದಿಗೆ ಬೀಳುತ್ತಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಈ ಆದೇಶಕ್ಕೆ ಕಾರಣವಾದ ಪ್ರಕರಣವೂ ಸ್ವಾರಸ್ಯಕರವಾಗಿದೆ. ಭೂಮಿಯನ್ನು ಗೇಣಿ ಪಡೆದ ವ್ಯಕ್ತಿಯೊಬ್ಬ ಮಾಲೀಕರಿಗೆ ಅದನ್ನು ವಾಪಸು ಮಾಡದೇ ಹಲವು ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದ. ಭೂಮಿ ತೆರವು ಮಾಡುವುದನ್ನು ಮುಂದೂಡುವುದು ಈತನ ಉದ್ದೇಶವಾಗಿತ್ತು. ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಆ ವ್ಯಕ್ತಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಜತೆಗೆ ಒಪ್ಪಂದ ಪ್ರಕಾರ ಭೂಮಿಯನ್ನು ಮಾಲೀಕನಿಗೆ ಬಿಟ್ಟುಕೊಡುವಂತೆ ಸೂಚಿಸಿದೆ.

ನ್ಯಾಯಾಂಗ ವ್ಯವಸ್ಥೆ ಜನಸಾಮಾನ್ಯರ ಕೈಗೆಟುಕುವಂತಿರುವ ಕಾರಣ ಸಣ್ಣಪುಟ್ಟ ವಿಷಯಗಳ ಕುರಿತೂ ಪಿಐಎಲ್​ಗಳು ಸಲ್ಲಿಕೆಯಾಗುತ್ತಿವೆ. ಇದರಿಂದ ಶಿಸ್ತು ಹದಗೆಟ್ಟು, ಅವ್ಯವಸ್ಥೆ ಹೆಚ್ಚಾಗುತ್ತದೆ. ಕ್ಷುಲ್ಲಕ ಪ್ರಕರಣಗಳ ದಾಖಲಾತಿ ಹೆಚ್ಚಾದಂತೆ ನ್ಯಾಯಾಲಯದ ಪಾವಿತ್ರ್ಯೂ ಕಡಿಮೆಯಾಗುತ್ತದೆ. ಇಂಥ ಪ್ರವೃತ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೆಹರ್, ನ್ಯಾ. ಡಿ.ವೈ. ಚಂದ್ರಚೂಡ ಹಾಗೂ ನ್ಯಾ. ಎಸ್.ಕೆ. ಕೌಲ್ ಅವರಿದ್ದ ಪೀಠ ಹೇಳಿದ್ದು, ಅನಗತ್ಯ ಪಿಐಎಲ್​ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೂಕ್ತ ನಡೆಯಾಗಿದೆ ಎನ್ನಬಹುದು. ನ್ಯಾಯಾಲಯಗಳ ಮೇಲೆ ಪ್ರಕರಣಗಳ ಭಾರ ವಿಪರೀತ ಎನ್ನುವಷ್ಟಿದ್ದು, ನ್ಯಾಯಾಧೀಶರ ಕೊರತೆ ಪ್ರಕರಣಗಳ ಶೀಘ್ರ ವಿಲೇವಾರಿಗೂ ಅಡ್ಡಿಯಾಗಿದೆ ಎಂಬುದನ್ನು ಗಮನಿಸಬೇಕು. ಹೀಗಾಗಿ, ತೀರಾ ಸಣ್ಣಪುಟ್ಟ ಅಥವಾ ಕ್ಷುಲ್ಲಕ ವಿಷಯಗಳಿಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿ ನ್ಯಾಯಾಲಯದ ಸಮಯ ಹಾಳು ಮಾಡುವುದು ಸರಿಯಲ್ಲ. ಇದೇ ಪರಿಸ್ಥಿತಿ ಮುಂದುವರಿದಲ್ಲಿ, ಅನಗತ್ಯ ಪ್ರಕರಣಗಳ ವಿಚಾರಣೆಗೇ ನ್ಯಾಯಾಲಯಗಳ ಹೆಚ್ಚಿನ ಸಮಯ ಹಾಳಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಈಗಾಗಲೇ, ಬಹಳಷ್ಟು ಜನರು ನ್ಯಾಯಾಂಗದ ವಿಳಂಬಗತಿಯಿಂದಾಗಿ ರೋಸಿಹೋಗಿದ್ದು, ಕೆಲವರು ಪಿಐಎಲ್ ಅರ್ಜಿ ನೆಪದಲ್ಲಿ ಸಮಯ-ಸಂದರ್ಭವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇಂಥವರಿಗೆ ನ್ಯಾಯಾಲಯ ಸೂಕ್ತ ಚಾಟಿಯೇಟನ್ನೇ ನೀಡಿದೆ ಎನ್ನಬಹುದು.

ಪೂರ್ವಗ್ರಹ ಪೀಡಿತ ಪಿಐಎಲ್​ಗಳು ದಾಖಲಾಗಬಾರದು ಎಂಬುದೇನೋ ನಿಜವೇ. ಆದರೆ, ಈ ಸಂಬಂಧ ಇನ್ನೊಂದು ಮಗ್ಗುಲನ್ನು ಗಮನಿಸಬೇಕಿದೆ. ಹಲವು ವ್ಯಕ್ತಿಗಳು, ಸಾಮಾಜಿಕ ಸಂಸ್ಥೆಗಳು ಕಳಕಳಿಯಿಂದ ದಾಖಲಿಸಿದ ಪಿಐಎಲ್​ಗಳಿಂದಾಗಿ ಹಲವು ಹಗರಣಗಳು ಬೆಳಕಿಗೆ ಬಂದು, ಭ್ರಷ್ಟಾಚಾರ ವಿರುದ್ಧ ಸಮರ ಸಾರಲು ಅನುವಾಗಿದೆಯಲ್ಲದೆ ಆಡಳಿತಶಾಹಿ, ಅಧಿಕಾರಶಾಹಿಯ ಬೇಜವಾಬ್ದಾರಿತನದ ವಿರುದ್ಧವೂ ದನಿ ಎತ್ತರಿಸಲು ಸಾಧ್ಯವಾಗಿದೆ. ಸಾರ್ವಜನಿಕ ಹಿತದ ಅರ್ಜಿಗಳೂ ಸಾಕಷ್ಟು ಸಂಖ್ಯೆಯಲ್ಲಿ ದಾಖಲಾಗಿದ್ದು, ನ್ಯಾಯಾಲಯಗಳು ಅವುಗಳನ್ನು ವಿಚಾರಣೆಗೆ ಸ್ವೀಕರಿಸಿವೆ ಎಂಬುದು ಗೊತ್ತಿರುವಂಥದ್ದೇ.

ಈ ಮುಂದೆಯೂ, ಪಿಐಎಲ್ ಅರ್ಜಿಗಳಲ್ಲಿ ಸಾರ್ವಜನಿಕ ಹಿತವನ್ನೂ ಕಾಪಾಡಿಕೊಳ್ಳಬೇಕಿದೆ. ಅಲ್ಲದೆ, ನ್ಯಾಯಾಲಯದ ಸಮಯ ಹಾಳು ಮಾಡುತ್ತಿರುವವರಿಗೆ ಈಗ ನೇರವಾದ ಸಂದೇಶ ಸಿಕ್ಕಿದ್ದು, ಮುಂದೆ ಅವರೂ ಇಂಥ ದುಸ್ಸಾಹಸಕ್ಕೆ ಮುಂದಾಗಲಾರರು ಎಂದು ನಿರೀಕ್ಷಿಸಬಹುದು.

Leave a Reply

Your email address will not be published. Required fields are marked *