ದುರ್ಬಲ ಮನಃಸ್ಥಿತಿಯ ಪ್ರತೀಕ ಕುಡಿತ

| ಶಾಂತಾ ನಾಗರಾಜ್​

ನಾನು 26 ವರ್ಷದ ಹುಡುಗಿ. 17ನೇ ವಯಸ್ಸಿನಲ್ಲಿ ಒಬ್ಬ ಹುಡುಗನನ್ನು ಪ್ರೀತಿಸಿದೆ. 5-6 ವರ್ಷಗಳ ಕಾಲ ನಮ್ಮ ಪ್ರೀತಿ ನಡೆಯಿತು. ನನ್ನ ಹುಡುಗನೇನೋ ‘ಮದುವೆಯಾಗೋಣ’ ಎಂದು ದುಂಬಾಲು ಬೀಳುತ್ತಿದ್ದ. ಆದರೆ ನಾನೇ ‘ಇನ್ನೂ ಓದಬೇಕು, ಕೆಲಸಕ್ಕೆ ಸೇರಬೇಕು’ ಎಂದೆಲ್ಲ ಮದುವೆಯ ಬಗ್ಗೆ ಉದಾಸೀನ ಮಾಡಿದೆ. ನಂತರ ನನ್ನಲ್ಲಿ ‘ಅಹಂ’ ಬೆಳೆದು, ಇವನಿಗಿಂತ ತಿಳಿವಳಿಕೆಯುಳ್ಳ, ಉನ್ನತ ಜೀವನಮಟ್ಟವನ್ನು ಹೊಂದಿರುವ, ಒಳ್ಳೆಯ ಶಿಕ್ಷಣವಿರುವ ಹುಡುಗನನ್ನು ಮದುವೆಯಾದರೆ ಬದುಕು ಚೆನ್ನಾಗಿರುತ್ತದೆ, ಇವನಿಗೆ ವಿದ್ಯೆಯಿಲ್ಲ, ಜಾಣತನವೂ ಅಷ್ಟಕ್ಕಷ್ಟೆ, ಇವನೊಂದಿಗೆ ಜೀವನ ಕಷ್ಟವೆನಿಸಿತು. ಅದರಿಂದ ಅವನಿಂದ ದೂರವಾಗುತ್ತ ಬಂದೆ. 3-4 ವರ್ಷ ದೂರವೇ ಉಳಿದೆ. ಇದೇ ಕಾರಣಕ್ಕೆ ಅವನು ಕುಡಿಯಲು ಪ್ರಾರಂಭಿಸಿದ. ಆರೋಗ್ಯ ಹದಗೆಟ್ಟಿತು. ನಾನು ಎಚ್ಚೆತ್ತುಕೊಂಡು ಅವನನ್ನು ಉಳಿಸಿಕೊಳ್ಳಲು ಆಸ್ಪತ್ರೆ, ದೇವರು ಎಂದೆಲ್ಲ ಓಡಾಡಿದೆ. ಕೊನೆಗೆ ಒಂದೂವರೆ ವರ್ಷದ ಹಿಂದೆ ಅವನನ್ನು ಕಳೆದುಕೊಂಡೆ. ಈಗ ನನ್ನ ಬದುಕು ಬರಡಾಗಿದೆ. ಪಾಪಪ್ರಜ್ಞೆ ಕಾಡುತ್ತಿದೆ. ನನ್ನ ಅಹಂಕಾರದಿಂದಲೇ ಅವನನ್ನು ದೂರ ಮಾಡಿದೆ.

ನಿಮ್ಮ ಮನಃಸ್ಥಿತಿಗೆ ನನ್ನ ಅನುಕಂಪವಿದೆ. ಆದರೆ ನಿಮ್ಮದೇ ಬುದ್ಧಿಯಲ್ಲಿರುವ ಮತ್ತೊಂದು ಶಕ್ತಿಯ ಬಗ್ಗೆ ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ನಮ್ಮೊಳಗೆ ‘ಎಮೋಷನಲ್ ಇಂಟಲಿಜೆನ್ಸ್’ ಎನ್ನುವ ಶಕ್ತಿಯೊಂದು ಮಿದುಳಿನಲ್ಲಿರುತ್ತದೆ. ಬಹಳಷ್ಟು ಜನ ನಿಮ್ಮ ಹಾಗೆ ಭಾವತೀವ್ರತೆಯನ್ನು ಅನುಭವಿಸುತ್ತಾರೆಯೇ ವಿನಃ ಅದೇ ಭಾವಕೋಶದಲ್ಲಿರುವ ಬುದ್ಧಿಯನ್ನು ಬಳಸುವುದಿಲ್ಲ. ಯಾವತ್ತಾದರೂ ನಿಮ್ಮ ಬದುಕಿನ ಘಟನೆಗಳನ್ನೆಲ್ಲ ಸ್ಮರಿಸುತ್ತ ವೈಜ್ಞಾನಿಕವಾಗಿ ‘ಇದರಲ್ಲಿ ನನ್ನದೆಷ್ಟು ತಪ್ಪಿದೆ, ಉಳಿದವರದೆಷ್ಟು ತಪ್ಪಿದೆ’ ಎಂದು ಎಂದಾದರೂ ಯೋಚಿಸಿದ್ದೀರಾ? ಇಲ್ಲವಲ್ಲ! ಈಗ ಒಂದೊಂದಾಗಿ ನೀವೇ ಬರೆದಿರುವ ಘಟನೆಗಳ ಆಧಾರದ ಮೇಲೆ ‘ಎಮೋಷನಲ್ ಇಂಟಲಿಜೆನ್ಸ್’ ಬಳಸುತ್ತ ಪಟ್ಟಿ ಮಾಡುತ್ತ ಹೋಗೋಣ. (1) ನಿಮ್ಮ 17ನೇ ವಯಸ್ಸಿನಲ್ಲಿ ನೀವು ಪ್ರೀತಿ ಎನ್ನುವ ಬಲೆಗೆ ಬಿದ್ದಿರಿ. 17 ಎನ್ನುವುದು ಪ್ರೀತಿಸುವ ಪ್ರೌಢವಯಸ್ಸು ಅಲ್ಲವೇ ಅಲ್ಲ. ನಾವು ಇಂಥದನ್ನು ‘ಇನ್​ಫ್ಯಾಚುಯೇಷನ್’ ಎಂದು ಕರೆಯುತ್ತೇವೆ. ಅಂದರೆ ಪ್ರಮತ್ತತೆ. ಆ ಕ್ಷಣಕ್ಕೆ ಖುಷಿ ಸಿಗುವಂಥದ್ದು. ಭವಿಷ್ಯದ ಬಗ್ಗೆ ಏನೇನೂ ಅರಿವಿಲ್ಲದಿರುವುದು. ಮತ್ತು ಈ ನಂಟು ‘ಮದುವೆ’ ಎನ್ನುವ ಸಂಬಂಧಕ್ಕೆ ಯೋಗ್ಯವೇ ಅಲ್ಲವೇ ಎಂದೂ ತಿಳಿವಳಿಕೆ ಇಲ್ಲದಿರುವುದು. ಇದು ಎಲ್ಲ ರೀತಿಯಲ್ಲೂ ಬಾಲಿಶವಾದ ನಡವಳಿಕೆ. (2) ನೀವು ವಿದ್ಯಾವಂತರಾದ ಮೇಲೆ ‘ಇವನು ನನಗೆ ಯೋಗ್ಯನಲ್ಲ’ ಎಂದು ಯೋಚಿಸಿರಲ್ಲ? ಅದು ಅಹಂ ಅಲ್ಲ. ಅದೇ ನಿಜವಾದ ಪ್ರೌಢ ಅರಿವು. ನೀವು ಸುಮ್ಮನೆ ಆತನಿಂದ ದೂರಾಗುವ ಬದಲು ನಿಮ್ಮ ಅನಿಸಿಕೆಗಳನ್ನೆಲ್ಲ ಪಟ್ಟಿ ಮಾಡಿ ಅವನ ಮುಂದೆ ಕುಳಿತು, ‘ನೋಡು, ಈಗ ನನ್ನ ಮನಸ್ಸು ಹೀಗೆ ಚಿಂತಿಸುತ್ತಿದೆ. ಇಂಥ ಮನಃಸ್ಥಿತಿಯಲ್ಲಿ ನಾವು ಮದುವೆಯಾದರೂ ಇಬ್ಬರೂ ಸುಖವಾಗಿರಲು ಸಾಧ್ಯವಿಲ್ಲ. ನಾನು ಉತ್ತಮ ಜೀವನವನ್ನು ಬಯಸುತ್ತೇನೆ. ಅದಕ್ಕಾಗಿ ನೀನು ಜೀವನವಿಡೀ ಹೆಣಗಬೇಕಾಗುತ್ತದೆ. ಆಗ ಇಬ್ಬರಲ್ಲೂ ಪರಸ್ಪರ ವೈಮನಸ್ಸು ಹುಟ್ಟಿಕೊಳ್ಳುತ್ತದೆ. ನನ್ನ ಜೀವನ ಧ್ಯೇಯವೇ ಬೇರೆ, ನಿನ್ನದೇ ಬೇರೆಯಾದಾಗ ಬದುಕು ನರಕವಾಗುತ್ತದೆ’ ಎಂದು ಅವನನ್ನು ಒಪ್ಪಿಸಬಹುದಿತ್ತು. (3) ನೀವು ದೂರಾದ ತಕ್ಷಣ ಕುಡಿತವನ್ನು ಪ್ರಾರಂಭಿಸಿದ ಆ ಹುಡುಗ ಅವನೆಂಥ ಮಹಾಗಟ್ಟಿಗ? ಅವನ ಪ್ರೀತಿ ನಿಜವಾದುದೇ ಆಗಿದ್ದರೆ, ನಿಮ್ಮ ಬದಲಾದ ‘ಮನಃಸ್ಥಿತಿ’ಯನ್ನು ಗಮನಿಸಿ ಗೌರವಿಸುತ್ತಿದ್ದ. ‘ಹೌದು ವಿದ್ಯೆಯಲ್ಲಿ ನೀನು ಬಯಸುವ ಮಟ್ಟಕ್ಕೆ ನಾನು ಏರಲಾರೆ’ ಎಂದು ವಾಸ್ತವವನ್ನು ಒಪ್ಪಿಕೊಳ್ಳುತ್ತಿದ್ದ. ಆದದ್ದಾದರೂ ಏನು ಮಹಾ? 5-6 ವರ್ಷ ಒಟ್ಟಿಗೇ ಓಡಾಡಿದಿರಿ, ಅಷ್ಟೇ ತಾನೆ? ಶರೀರಸಂಪರ್ಕವನ್ನೇನೂ ಮಾಡಿಕೊಂಡಿರಲಿಲ್ಲವಲ್ಲ? ಒಂದು ಮರೆಯಬಹುದಾದ ಹಳೆಯ ‘ಗೆಳೆತನ’ ಎಂದು ಭಾವಿಸಬಹುದಾಗಿತ್ತಲ್ಲವೇ? ಜಗತ್ತಿನಲ್ಲಿ ಅವನಿಗೆ ಸಿಗುವವರು ನೀವೊಬ್ಬರೇ ಹೆಣ್ಣೆ? ಇಷ್ಟಕ್ಕೆ ಸಿನಿಮಾ ನಾಯಕನಂತೆ ‘ದೇವದಾಸ್’ ಆಗಿ ಕುಡಿತಕ್ಕೆ ಶರಣಾದುದು ಅವನ ದುರ್ಬಲ ಮನಸ್ಸಿನಿಂದಲ್ಲವೇ? ಇಂಥವನನ್ನು ಮದುವೆಯಾದರೂ, ಮತ್ತ್ಯಾವುದೋ ಕಾರಣಕ್ಕೂ ಕುಡಿತಕ್ಕೆ ಅಂಟಿಕೊಳ್ಳುವ ಸಾಧ್ಯತೆಯೂ ಇತ್ತು ತಾನೇ? (4) ಇನ್ನು ಕೊನೆಯದು ‘ಅವನ ಸಾವಿಗೆ ನಾನೇ ಕಾರಣ’ ಎಂದುಕೊಳ್ಳುವುದು ಶುದ್ಧ ಮೂರ್ಖತನ. ಅಲ್ಪಸ್ವಲ್ಪ ಕುಡಿದವರೆಲ್ಲ ಯಾರೂ ಸಾಯುವುದಿಲ್ಲ. ಅದನ್ನು ಮಿತಿಯಲ್ಲಿರಿಸಿಕೊಳ್ಳದೆ ತನ್ನ ಜೀವಕ್ಕೇ ಕುತ್ತು ತಂದುಕೊಂಡವರು ಯಾರು? ಪ್ರೇಮದಿಂದ ವಂಚಿತರಾದವರೆಲ್ಲರೂ ಹೀಗೆ ಕುಡಿದೇ ಸಾಯುತ್ತಾರೆಯೇ? ಇಷ್ಟೂ ಆತ್ಮಬಲ ಇಲ್ಲದ ವ್ಯಕ್ತಿಯನ್ನು ನೀವು ಮದುವೆಯಾಗಿದ್ದಿದ್ದರೂ ಸುಖವೆನ್ನುವುದು ಮರೀಚಿಕೆಯೇ ಆಗುತ್ತಿತ್ತು ಬಿಡಿ.

ಇನ್ನಾದರೂ ನಿಮ್ಮ ಭಾವಕೋಶದ ಜಾಣತನವನ್ನು ಬಳಸಿ ಯೋಚಿಸುವುದನ್ನು ಕಲಿತುಕೊಳ್ಳಿ. ಬರೀ ಪ್ರೇಮ, ಮದುವೆ ಎರಡೇ ಜೀವನವಲ್ಲ. ಅದು ಸಿನಿಮಾದಲ್ಲಿ ಮಾತ್ರ. ಅದು ನಿಜ ಜೀವನದ ಒಂದು ಭಾಗ ಮಾತ್ರ. ಅದಕ್ಕಿಂತ ಜೀವನ ತುಂಬ ವಿಸ್ತಾರವಾದದ್ದು. ನೀವು ಅವನು ಕೊಟ್ಟಂಥಹ ಪ್ರೀತಿಯನ್ನೇ (ನನ್ನ ದೃಷ್ಟಿಯಲ್ಲಿ ಅವನದೂ ಅರಿವಿಲ್ಲದ ಪ್ರೀತಿ) ಹುಡುಕಿಕೊಂಡು ಹೋಗುವ ಬದಲು ನಿಮ್ಮನ್ನು ಗೌರವಿಸುವಂಥ ವ್ಯಕ್ತಿಯನ್ನು ಹುಡುಕಿ.

Leave a Reply

Your email address will not be published. Required fields are marked *