ದುರ್ಗಾವಿನಾಯಕ ದೇವರ ಪುನಃ ಪ್ರತಿಷ್ಠಾ ಮಹೋತ್ಸವ 18ರಿಂದ

ಸಿದ್ದಾಪುರ: ತಾಲೂಕಿನ ವಾಜಗದ್ದೆಯ ನೂತನ ದೇವಾಲಯದಲ್ಲಿ ದುರ್ಗಾವಿನಾಯಕ ದೇವರ ಪುನಃ ಪ್ರತಿಷ್ಠಾ ಮಹೋತ್ಸವ, ಗುರುಪಾದುಕಾ ಪೂಜೆ, ಶ್ರೀ ಗುರು ಭಿಕ್ಷಾ ಸೇವೆ ಏ. 18ರಿಂದ 20ರವರೆಗೆ ಜರುಗಲಿದೆ ಎಂದು ದೇವಾಲಯದ ಮೊಕ್ತೇಸರ ಪಿ.ವಿ. ಹೆಗಡೆ ಹೊಸಗದ್ದೆ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪಗೋಡ, ಭಂಡಾರಿಕೇರಿ ಗ್ರಾಮದ ವ್ಯಾಪ್ತಿಯ ದೇವಾಲಯವನ್ನು ದುರ್ಗಾವಿನಾಯಕ ಕೃಷಿಕ ಯುವಕ ಸಂಘದ ಸದಸ್ಯರು, ಗ್ರಾಮಸ್ಥರ ಶ್ರಮದಾನದಿಂದ 50 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಲಾಗಿದೆ. ವಾಚ ನಾಲಯ, ಎರಡು ಸಭಾಭವನ, ಯುವಕ ಸಂಘದ ಕಟ್ಟಡವನ್ನು ಯುವಕ ಸಂಘದವರು ಶ್ರಮದಾನದಿಂದ ಕಟ್ಟಿದ್ದಾರೆ ಎಂದರು.

ಸಲಹಾ ಸಮಿತಿ ಸದಸ್ಯ ಗೋಪಾಲ ಹೆಗಡೆ ವಾಜಗದ್ದೆ ಮಾತನಾಡಿ, 200ಕ್ಕೂ ಹೆಚ್ಚು ವರ್ಷ ಇತಿಹಾಸ ಹೊಂದಿರುವ ದುರ್ಗಾವಿನಾಯಕ ದೇವಾಲಯವನ್ನು 11ತಿಂಗಳೊಳಗೆ ನಿರ್ವಿುಸಲಾಗಿದೆ ಎಂದರು.

ದೇವಾಲಯದ ಅರ್ಚಕ ಶಿವರಾಮ ಜೋಶಿ ಪೌರೋಹಿತ್ಯ, ಆಗಮರತ್ನ ವೇ.ಮೂ. ಸಾಂಬ ಗಣಪತಿ ಹಿರೇಗಂಗೆ ಷಡಕ್ಷರಿ ಗೋಕರ್ಣ ನೇತೃತ್ವದಲ್ಲಿ ಧಾರ್ವಿುಕ ಕಾರ್ಯಕ್ರಮ ನಡೆ ಯಲಿದೆ. ಏ. 18ರಂದು ಬೆಳಗ್ಗೆ ದೇವರ ಪ್ರಾರ್ಥನೆ, ಗಣಪತಿ ಪೂಜೆ ಮತ್ತಿತರ ಕಾರ್ಯಗಳು, ಸಂಜೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಆಗಮನ, ಧೂಳಿಪೂಜೆ, ಯಾಗಶಾಲಾ ಪ್ರವೇಶ. ರಾತ್ರಿ 9ರಿಂದ ಗಣೇಶ ಭಟ್ಟ ಕೊಪ್ಪಲತೋಟ ಅವರಿಂದ ಅಷ್ಟಾವಧಾನ ನಡೆಯಲಿದೆ ಎಂದರು.

ಏ. 19ರಂದು ಬೆಳಗ್ಗೆ 10ಕ್ಕೆ ಶ್ರೀ ಕರಾರ್ಷಿತ ದೇವತಾ ಪೂಜೆ, ಮಧ್ಯಾಹ್ನ 12ಕ್ಕೆ ರಾಘವೇಶ್ವರ ಶ್ರೀಗಳಿಂದ ಶ್ರೀ ದೇವರ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಸಪ್ತಶತೀ ಪಾರಾಯಣ, ದುರ್ಗಾ ಸೂಕ್ತ ಪಾರಾಯಣ, ಮಧ್ಯಾಹ್ನ 1ಕ್ಕೆ ಶ್ರೀಗಳಿಂದ ಆಶೀರ್ವಚನ, ಸಂಜೆ 7ಕ್ಕೆ ಮಹಿಳೆಯರಿಂದ ಕುಂಕುಮಾರ್ಚನೆ, ರಾತ್ರಿ 9ರಿಂದ ಯಕ್ಷಗಾನ ಹಿಮ್ಮೇಳ ವೈಭವ ನಡೆಯಲಿದೆ. ಏ. 20ರಂದು ಬೆಳಗ್ಗೆ ವಿವಿಧ ಧಾರ್ವಿುಕ ಕಾರ್ಯಕ್ರ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ಸಂಜೆ 5ರಿಂದ ಸಂಗೀತ, ರಾತ್ರಿ 9ರಿಂದ ದುರ್ಗಾವಿನಾಯಕ ಯಕ್ಷಮಿತ್ರ ಬಳಗ ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು. ಸಮಿತಿಯ ಗಜಾನನ ಹೆಗಡೆ ಸುಳಗಾರ ಸುದ್ದಿಗೋಷ್ಠಿಯಲ್ಲಿದ್ದರು.