ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ

ಮೈಸೂರು: ನಗರದ ಪಾರಂಪರಿಕ ಕಟ್ಟಡಗಳಾದ ಲ್ಯಾನ್ಸ್‌ಡೌನ್ ಮತ್ತು ದೇವರಾಜ ಮಾರುಕಟ್ಟೆ ವಿಚಾರದಲ್ಲಿ ದುಡುಕಿನ ನಿರ್ಧಾರ ಕೈಗೊಳ್ಳುವುದಿ ಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಈ ಎರಡು ಕಟ್ಟಡಗಳು ದುಸ್ಥಿತಿಗೆ ತಲುಪಿರುವ ಹಿನ್ನೆಲೆಯಲ್ಲಿ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವುದು ಸೂಕ್ತ ಎಂದು ಪಾಲಿಕೆ ನಿರ್ಣಯ ಕೈಗೊಂಡಿದೆ. ಪಾಲಿಕೆಯ ನಿರ್ಧಾರಕ್ಕೆ ನಗರದ ನಿವಾಸಿಗಳು, ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಂಗಳವಾರ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಇಲ್ಲಿನ ಪಾರಂಪರಿಕ ಕಟ್ಟಡಗಳೊಂದಿಗೆ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಮಾರುಕಟ್ಟೆಯನ್ನು ನಂಬಿ ಸಾಕಷ್ಟು ಜನರು ಜೀವನ ನಡೆಸುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಕಟ್ಟಡದ ವಿಚಾರವಾಗಿ ಶೀಘ್ರದಲ್ಲಿಯೇ ನಗರದಲ್ಲಿ ಸಭೆ ನಡೆಸಲಾಗುವುದು. ಸಭೆಯಲ್ಲಿ ನಗರದ ನಾಗರಿಕರು, ಮಾಧ್ಯಮ ಪ್ರತಿನಿಧಿಗಳು ಹಾಗೂ ತಜ್ಞರ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಕಟ್ಟಡವನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಿಸುವ ಅಥವಾ ಕಟ್ಟಡವನ್ನು ಯಥಾಸ್ಥಿತಿಯಲ್ಲಿ ಅಭಿವೃದ್ಧಿಪಡಿಸುವ ವಿಚಾರದ ಕುರಿತು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಕಟ್ಟಡವನ್ನು ಒಡೆಯುವ ವಿಚಾರ ನಮ್ಮ ಮುಂದೆ ಇಲ್ಲ. ಎಲ್ಲರ ಅಭಿಪ್ರಾಯ ಪಡೆದ ನಂತರಷ್ಟೇ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಶಫಿ ಅಹ್ಮದ್, ಆಯುಕ್ತೆ ಶಿಲ್ಪಾ ನಾಗ್ ಇತರರು ಇದ್ದರು.

ಕಟ್ಟಡ ಕೆಡವಬೇಡ: ದೇವರಾಜ ಮಾರುಕಟ್ಟೆಯನ್ನೇ ನಂಬಿ ಬದುಕು ನಡೆಸುತ್ತಿದ್ದೇವೆ. ದಯವಿಟ್ಟು ಕಟ್ಟಡವನ್ನು ಉಳಿಸಿಕೊಡಿ ಎಂದು ವರ್ತಕರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದರು. ಕಟ್ಟಡ ಸುಸ್ಥಿತಿಯಲ್ಲಿದ್ದು, ಅಭಿವೃದ್ಧಿಪಡಿಸಲು ಸಾಧ್ಯವಿದೆ. ಸರ್ಕಾರ ಕಟ್ಟಡದ ಸಂರಕ್ಷಣಾ ಕಾರ್ಯವನ್ನು ಮುಂದುವರಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭ ಪಾರಂಪರಿಕ ಕಟ್ಟಡಗಳ ತಜ್ಞರಾದ ರಂಗರಾಜು, ಪ್ರೊ.ನಂಜರಾಜ ಅರಸ್, ಈಚನೂರು ಕುಮಾರ್ ಇತರರು ಕಟ್ಟಡ ಉಳಿಸುವಂತೆ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

ಒಂದು ಗಂಟೆ ಕಾಲ ಸ್ತಬ್ಧ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಒಂದು ಗಂಟೆ ಕಾಲ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಸ್ತಬ್ಧಗೊಂಡಿತ್ತು.
ಮುಖ್ಯಮಂತ್ರಿ ಬೆಳಗ್ಗೆ 9.15ಕ್ಕೆ ಭೇಟಿ ನೀಡಬೇಕಾಗಿತ್ತು. ಆದರೆ, ಅವರು ಅವರು ಭೇಟಿ ನೀಡಿದಾಗ 10 ಗಂಟೆಯಾಗಿತ್ತು. ಬೆಳಗ್ಗೆ 9 ರಿಂದಲೇ ಮುಖ್ಯಮಂತ್ರಿ ಪರಿಶೀಲಿಸುವ ಭಾಗಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತು. ಅದೇ ರೀತಿ ಮಾರುಕಟ್ಟೆಯ ಮುಂಭಾಗದಲ್ಲಿ ಫುಟ್‌ಪಾತ್ ವ್ಯಾಪಾರಿಗಳಿಗೆ ವ್ಯಾಪಾರ ವಹಿವಾಟಿಗೆ ಪೊಲೀಸರು ಅವಕಾಶ ನೀಡಲಿಲ್ಲ.

ಲ್ಯಾನ್ಸ್‌ಡೌನ್‌ಗೆ ಭೇಟಿ ನೀಡದ ಸಿಎಂ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದೇವರಾಜ ಮಾರುಕಟ್ಟೆ ವೀಕ್ಷಿಸಿದ ನಂತರ ಲ್ಯಾನ್ಸ್‌ಡೌನ್ ಕಟ್ಟಡಕ್ಕೆ ಭೇಟಿ ನೀಡಬೇಕಾಗಿತ್ತು. ಆದರೆ, ಕುಂಭಮೇಳಕ್ಕೆ ತೆರಳುವ ತರಾತುರಿಯಲ್ಲಿದ್ದ ಅವರು ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿದ ನಂತರ ನೇರವಾಗಿ ತಿ.ನರಸೀಪುರಕ್ಕೆ ಹೊರಟರು.

ಮಾಹಿತಿ ನೀಡದಿರುವುದಕ್ಕೆ ಶಾಸಕ ಆಕ್ರೋಶ: ದೇವರಾಜ ಮಾರುಕಟ್ಟೆ ಪರಿಶೀಲನೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗಮಿಸುತ್ತಿರುವ ವಿಚಾರದ ಕುರಿತು ಮಾಹಿತಿ ನೀಡದೆ ಇರುವುದಕ್ಕೆ ಸ್ಥಳೀಯ ಶಾಸಕ ಎಲ್.ನಾಗೇಂದ್ರ ಮುಖ್ಯಮಂತ್ರಿ ಸಮ್ಮುಖದಲ್ಲಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇವರಾಜ ಮಾರುಕಟ್ಟೆ ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತದೆ. ಕ್ಷೇತ್ರದ ಪ್ರತಿನಿಧಿಯಾದ ನನಗೆ ತಿಳಿಸುವ ಕನಿಷ್ಠ ಸೌಜನ್ಯವನ್ನು ಜಿಲ್ಲಾಡಳಿತ ಮಾಡಿಲ್ಲ. ಈ ವಿಚಾರ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಮಂಗಳವಾರ ಸುದ್ದಿಗಾರರೊಂ ದಿಗೆ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ದೇವರಾಜ ಮಾರುಕಟ್ಟೆ ಅಭಿವೃದ್ಧಿಗೆ ಬಜೆಟ್‌ನಲ್ಲಿ ನಯಾ ಪೈಸೆ ಕಾಯ್ದಿರಿಸಿಲ್ಲ. ಕಟ್ಟಡಗಳ ಅಭಿವೃದ್ಧಿ ವಿಚಾರವಾಗಿ ಸರ್ಕಾರದ ಗಮನ ಸೆಳೆದಿದ್ದೆ. ಆದರೆ, ಸರ್ಕಾರ ಈ ಬಗ್ಗೆ ನಿರ್ಲಕ್ಷೃ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.