ದೀಪ ಹಚ್ಚಲೂ ಹಣವಿಲ್ಲ ಸಂಕಷ್ಟದಲ್ಲಿ ವೇದೇಶ್ವರ ದೇಗುಲ

| ಸುವರ್ಣ ಸುದೀಶ್

ಕಳಸ: ದಶಕಗಳ ಹಿಂದೆ ಸಾವಿರಾರು ಭಕ್ತರಿಂದ ಶಿವರಾತ್ರಿ ಮಹೋತ್ಸವ ಹಾಗೂ ಇನ್ನಿತರೆ ವಿಶೇಷ ದಿನಗಳಲ್ಲಿ ಪೂಜಿಸಲ್ಪಡುತ್ತಿದ್ದ ಕುದುರೆಮುಖದ ವೇದೇಶ್ವರ ಸ್ವಾಮಿ ದೇವಾಲಯ ಈಗ ಭಕ್ತರಿಲ್ಲದೆ ಸಂಕಷ್ಟದ ರೀತಿಯಲ್ಲಿ ಪೂಜೆ ಇನ್ನಿತರೆ ಕಾರ್ಯಕ್ರಮಗಳನ್ನು ಮಾಡುವ ಅನಿವಾರ್ಯತೆ ಎದುರಾಗಿದೆ.

ವೇದೇಶ್ವರ ಸ್ವಾಮಿಯ ಗಾತ್ರ ಅತಿ ದೊಡ್ಡದಿರುವ ಕಾರಣ ಇಲ್ಲಿಗೆ ಈ ಹಿಂದೆ ಮಲ್ಲೇಶ್ವರ ಎಂಬ ಹೆಸರಿತ್ತು. ನಂತರ ಇಲ್ಲಿ ಕುದುರೆಮುಖ ಅದಿರು ಸಂಸ್ಥೆ ಗಣಿಗಾರಿಕೆ ಪ್ರಾರಂಭಿಸಿ ಹೊಸ ನಗರವೊಂದು ಸೃಷ್ಟಿಯಾದ ಮೇಲೆ ಕುದುರೆಮುಖವಾಗಿದೆ. ಹಿಂದೆ ಭದ್ರಾನದಿ ಹುಟ್ಟುವ ಸ್ಥಳವಾದ ಗಂಗಾಮೂಲವು ಜನವಸತಿ ಪ್ರದೇಶವಾಗಿ ಇದ್ದಿರಬಹುದು ಎಂದು ಅಲ್ಲಿ ಕಾಣ ಸಿಗುವ ಕುರುಹುಗಳಿಂದ ತಿಳಿಯುತ್ತದೆ. ಜತೆಗೆ ಈ ಎಲ್ಲ ಪ್ರದೇಶಗಳಲ್ಲಿ ಹಿಂದುಗಳು, ವೀರಶೈವರು, ಜೈನರು ವಾಸಿಸುತ್ತಿದ್ದು, ಶಿವನನ್ನು ಆರಾಧಿಸುತ್ತಿದ್ದರು ಎಂದು ತಿಳಿಯುತ್ತದೆ. ಅವರೇ ಕುದುರೆಮುಖದಲ್ಲಿ ಹುಲ್ಲು ಮತ್ತು ಹೆಂಚುಗಳಿಂದ ನಿರ್ವಿುಸಿದ ಸಣ್ಣ ಗುಡಿಯೊಳಗೆ ವೇದೇಶ್ವರ ದೇವರನ್ನು ಪ್ರತಿಷ್ಠಾಪಿಸಿದರು.

ಗಣಿಗಾರಿಕೆ ಪ್ರಾರಂಭವಾಗಿ ಅದೊಂದು ನಗರವಾಗಿ ಪರಿವರ್ತನೆಯಾಗುವುದರ ಜತೆಗೆ ಸುಸಜ್ಜಿತ ದೇವಸ್ಥಾನ ನಿರ್ವಿುಸಿ ವೇದೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಿ, ಜತೆಗೆ ಮಹಾಗಣಪತಿ, ದುರ್ಗಾಂಭ, ಕಾಲಭೈರವ, ದಕ್ಷಿಣಮೂರ್ತಿ, ಸುಬ್ರಹ್ಮಣ್ಯ ಸ್ವಾಮಿ, ಕ್ಷೇತ್ರಪಾಲ ಹಾಗೂ ನವಗ್ರಹಗಳ ಪರಿವಾರ ದೇವತೆಗಳ ಪ್ರತಿಷ್ಠಾಪನೆ ಮಾಡಲಾಯಿತು. ಇದರೊಂದಿಗೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನೆರವೇರುತ್ತ ನಾಲ್ಕು ದಶಕಗಳ ಕಾಲ ವೈಭವದಿಂದ ಮೆರೆಯಿತು.

ಕುದುರೆಮುಖ ಗಣಿಗಾರಿಕೆ ಸ್ಥಗಿತಗೊಳ್ಳುತ್ತಿದ್ದಂತೆಯೇ ಪಟ್ಟಣ ಜನರಹಿತವಾಗುತ್ತ ಈಗ ಬೆರಳೆಣಿಕೆಯಷ್ಟು ಜನರನ್ನು ಮಾತ್ರ ಕಾಣಬಹುದಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತ ದೇವಸ್ಥಾನ ನಿರ್ವಹಣೆ ಮಾಡುವುದೇ ಅಸಾಧ್ಯವಾಯಿತು. ಇಲ್ಲಿಯ ದೇವಸ್ಥಾನಗಳ ನಿರ್ವಹಣೆಗಿದ್ದ ಮಲ್ಲೇಶ್ವರ ದೇವಸ್ಥಾನಗಳ ಸಮಿತಿ ಇದ್ದು, ಕೆಲವು ವಿಶೇಷ ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಅಂದು ಪ್ರಧಾನವಾಗಿ ಸಮಿತಿಯಲ್ಲಿದ್ದ ನೌಕರರು ಇಂದು ಇಲ್ಲದೆ ಸ್ಥಳೀಯರು ಮುನ್ನಡೆಸುತ್ತಿದ್ದಾರೆ. ಭಕ್ತರಿಲ್ಲದೆ ಆದಾಯದ ಕೊರತೆಯಿಂದ ದೇವಸ್ಥಾನವನ್ನು ನಿರ್ವಹಿಸುವುದೇ ಸವಲಾಗಿ ನಿಂತಿದೆ.

ಜೀವ ನೀಡುತ್ತಿದೆ ಶಾಶ್ವತ ಸೇವೆಯ ಪೂಜಾ ಯೋಜನೆ: ದೇವಸ್ಥಾನದ ನಿರ್ವಹಣೆಯೇ ಅಸಾಧ್ಯವಾದಾಗ ದೇವಸ್ಥಾನ ಸಮಿತಿ ಆರಂಭಿಸಿದ ಶಾಶ್ವ್ವ ಪೂಜಾ ಯೋಜನೆಯೇ ಸಮಿತಿಗೆ ಒಂದಷ್ಟು ಬಲ ತುಂಬುತ್ತಿದೆ. ಭಕ್ತರ ಸಂಪರ್ಕಕ್ಕಾಗಿ ಈ ಬಾರಿ ಶಿವರಾತ್ರಿಗೆ ಕುಟುಂಬ ಮಿಲನ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಇದರಿಂದ ಇಲ್ಲಿ ಈ ಹಿಂದೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬಗಳನ್ನು ಒಟ್ಟುಗೂಡಿಸಿ ಇಲ್ಲಿ ಮುಂದೆ ಆಗಬೇಕಾದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೈಜೋಡಿಸಲು ಕೇಳಿಕೊಳ್ಳಲಾಗುತ್ತಿದೆ. ಊರು ಬಿಟ್ಟು ಹೋಗಿದ್ದ ಹಳಬರ ಕುದುರೆಮುಖದೊಂದಿಗಿನ ಭಾವನಾತ್ಮಕ ಸಂಬಂಧದಿಂದ ಸಹಾಯ ಪಡೆಯಲಾಗುತ್ತಿದೆ. ಜತೆಗೆ ದೇವಸ್ಥಾನದಿಂದ ದೂರವೇ ಉಳಿದಿದ್ದ ಸ್ಥಳಿಯ ಭಕ್ತರನ್ನು ವ್ಯವಸ್ಥೆಯ ಒಳಗೆ ತರುವ ಪ್ರಯತ್ನ ನಡೆಯುತ್ತಿದೆ.

ರಾಜ ವೈಭೋಗದಿಂದ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದ ಶಿವನ ಸನ್ನಿಧಿಯಲ್ಲಿ ದೀಪ ಉರಿಸುವುದೂ ಕಷ್ಟವಾಗಿದೆ. ಪಕ್ಕದಲ್ಲಿ ಇರುವ ಎರಡು ದೇವಸ್ಥಾನಗಳಿಗೆ ಪೂಜೆ ಮಾಡುವ ಪುರೋಹಿತರೇ ಈ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದಾರೆ. ಕಲಶೇಶ್ವರ ಪಂಚಲಿಂಗ ಪುರಾಣಕ್ಷೇತ್ರಗಳಲ್ಲಿ ಒಂದಾದ ಈ ಈಶ್ವರ ಸನ್ನಿಧಿಯನ್ನು ಉಳಿಸಿ ಬೆಳೆಸುವುದು ಆಸ್ತಿಕರ ಜವಾಬ್ದಾರಿ.

ಮಳೆಗಾಗಿ ನಡೆಯುತ್ತಿತ್ತು ಪ್ರಾರ್ಥನೆ: ಕುದುರೆಮುಖ ಕಂಪನಿ ಹಾಗೂ ಸ್ಥಳೀಯರು ಯಾವುದೇ ಕೆಲಸವನ್ನು ಮಾಡಬೇಕಿದ್ದರೂ ಇಲ್ಲಿಯ ಈಶ್ವರನ ಅಪ್ಪಣೆ ಕೇಳಿಯೇ ಮುಂದುವರಿಸುತ್ತಿದ್ದರು. ಮಳೆಗಾಗಿ ಪ್ರಾರ್ಥನೆ ಮಾಡಿದರೆ ನೆರವೇರುತ್ತಿತ್ತು. ಮಳೆ ನಿಲ್ಲಬೇಕಾದರೂ ಪ್ರಾರ್ಥಿಸಬೇಕಿತ್ತು. ಯಾವುದೇ ಬೇಡಿಕೆಯನ್ನು ಇಟ್ಟರೂ ಈಡೇರಿಸುತ್ತಿದ್ದ ಇಲ್ಲಿಯ ವೇದೇಶ್ವರ.