ದಾಹ ನೀಗಿಸುವ ಚಾಲಕ-ನಿರ್ವಾಹಕ!

ಮುಳಗುಂದ: ಏರುತ್ತಿರುವ ತಾಪಮಾನದಿಂದಾಗಿ ಜಲಕ್ಷಾಮ ಹೆಚ್ಚುತ್ತಿದ್ದು, ಜನ-ಜಾನುವಾರು ಪರಿತಪಿಸುವಂತಾಗಿದೆ. ಎಲ್ಲೆಲ್ಲೂ ಹಾಹಾಕಾರ ಶುರುವಾಗಿದೆ. ಆದರೆ, ಪ್ರಯಾಣಿಕರ ದಾಹ ನೀಗಿಸಲು ಬಸ್​ವೊಂದರ ಚಾಲಕ ಹಾಗೂ ನಿರ್ವಾಹಕ ಮಾಡುತ್ತಿರುವ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಹುಬ್ಬಳ್ಳಿ-ಶಿರಹಟ್ಟಿ ರೂಟ್​ನ ಬಸ್ ಕೆಎ 42 ಎಫ್ 1644ರ ಚಾಲಕ ವಿ.ಎಸ್. ಬಡಿಗೇರ ಹಾಗೂ ನಿರ್ವಾಹಕ ವಿ.ಎಂ. ಹಾದಿಮನಿ ಈ ರೀತಿ ಭಗೀರಥ ಸೇವೆ ಒದಗಿಸುತ್ತಿದ್ದಾರೆ. ಕೇವಲ ಬೇಸಿಗೆ ಸಮಯ ಮಾತ್ರವಲ್ಲದೆ, ವರ್ಷಪೂರ್ತಿ ಈ ರೀತಿ ಸೇವೆ ಒದಗಿಸುತ್ತಿರುವುದು ಶ್ಲಾಘನೀಯ.

ಕಳೆದ ಎಂಟು 8 ವರ್ಷಗಳಿಂದ ಇದೇ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನೀರು ಒದಗಿಸುವುದರಿಂದಾಗಿ ಈ ಮಾರ್ಗದ ಪ್ರತಿ ಪ್ರಯಾಣಿಕರಿಗೂ ಇವರು ಚಿರಪರಿಚಿತರಾಗಿದ್ದಾರೆ. ನೀರು ಖಾಲಿಯಾದ ತಕ್ಷಣ ಮಾರ್ಗ ಮಧ್ಯೆ ಯಾವುದಾದರೂ ಶುದ್ಧ ನೀರಿನ ಘಟಕ ಸಿಕ್ಕರೆ ನೀರು ತುಂಬಿಸಿಡುತ್ತಾರೆ. ನೀರಿನ ಸೇವೆಯಿಂದಾಗಿ ಇಬ್ಬರೂ ಪ್ರಯಾಣಿಕರ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಸರ್ಕಾರವೇ ಒದಗಿಸಲಿ

ಚಾಲಕ-ನಿರ್ವಾಹಕನ ಸೇವೆ ಗಮನಿಸಿರುವ ಪ್ರಯಾಣಿಕರು, ‘ಪ್ರತಿ ಬಸ್​ನಲ್ಲಿ ಸರ್ಕಾರವೇ ನೀರು ಒದಗಿಸಿದರೆ ಬೇಸಿಗೆಯಲ್ಲಿ ಪ್ರಯಾಣಿಕರಿಗೆ ದಾಹ ನೀಗಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ನಮ್ಮ ಬಸ್​ನ ಪ್ರಯಾಣಿಕರಾರೂ ದಾಹದಿಂದ ಬಳಲದೇ ಸುಖಕರ ಪ್ರಯಾಣ ಮಾಡಲಿ ಎಂಬ ಸದುದ್ದೇಶದಿಂದ ನಾವಿಬ್ಬರೂ ಈ ನೀರನ್ನು ಇಟ್ಟಿದ್ದೇವೆ. ನೀರು ಕುಡಿದ ಪ್ರಯಾಣಿಕರು ನಮ್ಮನ್ನು ಹಾರೈಸುತ್ತಾರೆ.
| ವಿ.ಎಸ್. ಬಡಿಗೇರ ಚಾಲಕ, ವಿ.ಎಂ. ಹಾದಿಮನಿ ನಿರ್ವಾಹಕ.

ಬಸ್​ನಲ್ಲಿ ವರ್ಷ ಪೂರ್ತಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು ಉತ್ತಮ ಕಾರ್ಯ. ಈ ಬಸ್​ನಲ್ಲಿ ಪ್ರಯಾಣಿಸುವಾಗ ಹಣ ಕೊಟ್ಟು ಯಾವುದೇ ನೀರಿನ ಬಾಟಲ್ ಕೊಳ್ಳುವ ಅಗತ್ಯವಿಲ್ಲ. ಇದು ಮಕ್ಕಳು, ಮಹಿಳೆಯರು ಹಾಗೂ ವೃದ್ಧರಿಗೆ ಉಪಯುಕ್ತವಾಗಿದೆ. 
| ಎಸ್.ಸಿ. ಅಮರಶೆಟ್ಟಿ ಪ್ರಯಾಣಿಕ

Leave a Reply

Your email address will not be published. Required fields are marked *