ದಾಸರಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ

ಚನ್ನರಾಯಪಟ್ಟಣ: ತಾಲೂಕಿನ ಕಬ್ಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸರಹಳ್ಳಿ ಗ್ರಾಮದಲ್ಲಿ ಕಳೆದ ಆರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.

ಗ್ರಾಮದಲ್ಲಿ 120 ಮನೆಗಳಿದ್ದು, ಸುಮಾರು 760 ಜನಸಂಖ್ಯೆ ಇದೆ. ಈ ಬಾರಿ ವಾಡಿಕೆಯಂತೆ ಮಳೆಯಾಗದ ಕಾರಣ ಹಾಗೂ ಕೊಳವೆ ಬಾವಿಯಲ್ಲಿ ನೀರು ಬರಿದಾಗಿರುವ ಕಾರಣ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮದಲ್ಲಿರುವ 6 ನೀರಿನ ತೊಂಬೆಗಳು ನೀರು ಕಾಣದೆ ಭಣಗುಡುತ್ತಿವೆ. ನಿರ್ವಹಣೆ ಕೊರತೆಯಿಂದ ನಲ್ಲಿ ಹಾಗೂ ಪೈಪ್‌ಗಳು ಹಾಳಾಗಿದ್ದು, ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿವೆ.

ಮಳೆಗಾಲದಲ್ಲಿ ಸುತ್ತಮುತ್ತಲ ತೋಟದಲ್ಲಿರುವ ಖಾಸಗಿ ಕೊಳವೆ ಬಾವಿಗಳಿಂದ ನೀರು ತಂದು ಹೇಗೋ ಜೀವನ ನಡೆಸುತ್ತಿದ್ದೆವು. ಆದರೀಗ ಬೇಸಿಗೆ ಹಿನ್ನೆಲೆ ಹನಿ ಹನಿಗೂ ಪರದಾಡುವಂತಾಗಿದೆ. ಇತ್ತೀಚೆಗೆ ಶಾಸಕರ ನೆರವಿನಿಂದ ಗ್ರಾಮದಲ್ಲಿ ಒಂದು ಕೊಳವೆ ಬಾವಿ ಕೊರೆಸಿ ಪಂಪ್‌ಸೆಟ್ ಅಳವಡಿಸಲಾಗಿದ್ದು, ಅದರಲ್ಲಿಯೂ ನೀರು ಬರುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಸದ್ಯಕ್ಕೀಗ ಕಬ್ಬಳಿ ಗ್ರಾಪಂ ವತಿಯಿಂದ ಗ್ರಾಮಕ್ಕೆ ನಿತ್ಯವೂ ಎರಡು ಟ್ಯಾಂಕರ್ ನೀರು ಪೂರೈಸಲಾಗುತ್ತಿದ್ದು, ತಲಾ ಒಂದು ಮನೆಗೆ 6 ಬಿಂದಿಗೆ ನೀರನ್ನು ನಿಗದಿಪಡಿಸಿ ನೀಡಲಾಗುತ್ತಿದೆ. ಆದರೆ ಈ 6 ಬಿಂದಿಗೆ ನೀರು ಅಡುಗೆ, ತಿಂಡಿ, ನಿತ್ಯಕರ್ಮ ಹಾಗೂ ಇತರೆ ಕೆಲಸಕ್ಕೆ ಸಾಲುತ್ತಿಲ್ಲ ಎನ್ನುತ್ತಾರೆ ಮಹಿಳೆಯರು.

ಹಾಗೆಯೇ ದಾಸರಹಳ್ಳಿ ಸಮೀಪದಲ್ಲಿರುವ ಗಿರಿಕ್ಷೇತ್ರದ ವಡ್ಡರಹಟ್ಟಿ ಗ್ರಾಮದಲ್ಲೂ ಕಳೆದೊಂದು ವರ್ಷದಿಂದ ನೀರಿನ ಸಮಸ್ಯೆ ಇದೆ. ವಡ್ಡರಹಟ್ಟಿಯಲ್ಲಿ 47 ಮನೆಗಳಿದ್ದು, 165 ಜನಸಂಖ್ಯೆ ಹೊಂದಿದೆ. ಹಟ್ಟಿಯಲ್ಲಿ 2 ನೀರಿನ ತೊಂಬೆಗಳಿದ್ದು, ಕಳೆದ 1 ವರ್ಷದಿಂದ ನೀರು ಹರಿದಿಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಎರಡೂ ಗ್ರಾಮಗಳಿಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.