ಸಿನಿಮಾ

ದಾವಣಗೆರೆ ಬಿಜೆಪಿ ಕಾರ್ಯಕರ್ತರ ಬಂಧನ- ಬಿಡುಗಡೆ

ದಾವಣಗೆರೆ: ಬಜರಂಗದಳ ಸಂಘಟನೆ ನಿಷೇಧಿಸುವ ಕಾಂಗ್ರೆಸ್ ಹೇಳಿಕೆ ವಿರೋಧಿಸಿ ಹಿಂದು ಜನಜಾಗೃತಿ ವೇದಿಕೆ ವತಿಯಿಂದ ಆಯೋಜಿಸಿದ್ದ ಜಾಥಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 14 ಮಂದಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದು, ಆನಂತರ ಬಿಡುಗಡೆಗೊಳಿಸಿದರು.

ಬಜರಂಗದಳ ಸಂಘಟನೆ ನಿಷೇಧಿಸುವ ಹೆಸರಲ್ಲಿ ಹಿಂದುಗಳನ್ನು ಭಾವನಾತ್ಮಕವಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದ್ದು ಇದರ ವಿರುದ್ಧದ ಜಾಗೃತಿ ಸಂಬಂಧ ಜಾಥಾ ಹಾಗೂ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿದ್ಯಾನಗರ, ಆಂಜನೇಯ ಬಡಾವಣೆ, ಶಿವಪ್ಪಯ್ಯ ವೃತ್ತ ಹಾಗೂ ವಿನೋಬನಗರ ನಾಲ್ಕು ಕಡೆಗಳಿಂದ ಜಾಥಾ ಆರಂಭಗೊಂಡು ಸದ್ಯೋಜಾತ ಹಿರೇಮಠದಲ್ಲಿ ಸಮಾವೇಶಗೊಂಡಿತ್ತು. ನಂತರ ಅಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಿಂದು ಕಾರ್ಯಕರ್ತ ದೋ. ಕೃಷ್ಣಮೂರ್ತಿ ಎಂಬುವರು ವಿಷಯದ ಕುರಿತಾಗಿ ಉಪನ್ಯಾಸ ಮಾಡಿದ್ದರು.
ಜಾಥಾ ಆರಂಭದಿಂದಲೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂಬುದಾಗಿ ಆಕ್ಷೇಪಿಸಿದ್ದರು ಎನ್ನಲಾದ ಪೊಲೀಸರು ಕಾರ್ಯಕ್ರಮದ ಬಳಿಕ ಕಾರ್ಯಕರ್ತರನ್ನು ವಶಕ್ಕೆ ಪಡೆದು ಕೆಲ ಕಾಲ ಡಿಆರ್‌ಆರ್ ಮೈದಾನದಲ್ಲಿ ಇರಿಸಿದ್ದಾರೆ.
ಈ ನಡುವೆ ಪೊಲೀಸರು ಮತ್ತು ಚುನಾವಣಾಧಿಕಾರಿ ನಡೆಗೆ ಬಿಜೆಪಿ ಕಾರ್ಯಕರ್ತರು ಕಿಡಿ ಕಾರಿದರು. ಹಿಂದು ಜನಜಾಗೃತಿ ವೇದಿಕೆಯಿಂದ ಆಯೋಜಿಸಲಾದ ಈ ಕಾರ್ಯಕ್ರಮ ಪಕ್ಷಾತೀತವಾದುದು. ನೀತಿ ಸಂಹಿತೆ ಉಲ್ಲಂಘನೆ ಎನ್ನಲು ಇದು ಚುನಾವಣಾ ರ‌್ಯಾಲಿಯೂ ಅಲ್ಲ. ಬಿಜೆಪಿ ಬಾವುಟಗಳನ್ನೂ ಪ್ರದರ್ಶಿಸಿಲ್ಲ ಎಂದು ವಾದ ಮಾಡಿದರೂ ಪೊಲೀಸರು ವಶಕ್ಕೆ ಪಡೆದು, ಮುಚ್ಚಳಿಕೆ ಬರೆಸಿಕೊಂಡ ನಂತರ ಬಿಡುಗಡೆ ಮಾಡಿದರು ಎನ್ನಲಾಗಿದೆ.
ವಶದಲ್ಲಿದ್ದ ಮಾಜಿ ಮೇಯರ್ ಎಸ್.ಟಿ.ವೀರೇಶ್, ಎನ್. ರಾಜಶೇಖರ್, ಎಲ್.ಎನ್. ಕಲ್ಲೇಶ್, ಕೆ.ಪ್ರಸನ್ನಕುಮಾರ್, ಚಂದ್ರಶೇಖರ್, ಶಿವಯೋಗಿ, ಹರೀಶ್ ಶಾಮನೂರು, ಚುಕ್ಕಿ ಮಂಜುನಾಥ್ ಇತರರು ಬಿಡುಗಡೆಯಾದರು.
‘ಜಾಥಾ ಮತ್ತು ಕಾರ್ಯಕ್ರಮ ನಡೆಸುವ ಸಂಬಂಧ ಮೂರು ದಿನದ ಹಿಂದೆ ದಾವಣಗೆರೆ ಉತ್ತರ ಚುನಾವಣಾಧಿಕಾರಿಗೆ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಕಾರ್ಯಕ್ರಮ ನಡೆಸಬೇಡಿ ಎಂದು ಹೇಳುವುದಾದಲ್ಲಿ ಎಂಡಾರ್ಸ್‌ಮೆಂಟ್ ಕೊಡಬೇಕಿತ್ತು. ಯಾವುದೇ ಮಾಹಿತಿ ನೀಡದ್ದರಿಂದ ಕಾರ್ಯಕ್ರಮ ನಡೆಸಿದ್ದೇವೆ. ಇದು ಮಾದರಿ ನೀತಿ ಸಂಹಿತೆಗೆ ಅಡ್ಡಿಯಾಗಿಲ್ಲ. ಇದರ ನೆಪದಲ್ಲಿ ನಮ್ಮನ್ನು ವಶಕ್ಕೆ ಪಡೆಯಲಾಗಿತ್ತು’ ಎಂದು ಪಾಲಿಕೆ ಸದಸ್ಯ ಪ್ರಸನ್ನಕುಮಾರ್ ಪ್ರತಿಕ್ರಿಯಿಸಿದರು.

Latest Posts

ಲೈಫ್‌ಸ್ಟೈಲ್