20ರಂದು ದಾವಣಗೆರೆಯಲ್ಲಿ ಪಂಚಮಸಾಲಿ ಸಮಾಜದಿಂದ ಸಾಮೂಹಿಕ ‌ವಿವಾಹ, ಒಂದಾಗಲಿವೆ 26 ಜೋಡಿ

ದಾವಣಗೆರೆ: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದವರಿಗಾಗಿ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮೇ 20ರ ಬೆಳಗ್ಗೆ 9-30ಕ್ಕೆ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಹಾಗೂ ಹರ ಸೇವಾ ಸಂಸ್ಥೆ ಸಹಯೋಗದಲ್ಲಿ ನಡೆಯುವ ಮದುವೆಯಲ್ಲಿ 26 ಜೋಡಿ ದಾಂಪತ್ಯಕ್ಕೆ ಕಾಲಿರಿಸಲಿರುವುದಾಗಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ. ಉಮಾಪತಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2004ರಿಂದ ಸಾಮೂಹಿಕ ವಿವಾಹ ಕಾರ್ಯ ಆರಂಭಿಸಿದ್ದು, ಈವರೆಗೆ 1,036 ಜೋಡಿ ವಿವಾಹ ನೆರವೇರಿಸಲಾಗಿದೆ. 760 ಜೋಡಿಗೆ 91.20 ಲಕ್ಷ ರೂ. ಪ್ರೋತ್ಸಾಹಧನ ಕೊಡಿಸಲಾಗಿದೆ. ವಧು-ವರರಿಗೆ ಬಟ್ಟೆ, ಬಾಸಿಂಗ, ಮೈಸೂರು ಪೇಟ, ತಾಳಿ, ಕಾಲುಂಗರ ಒದಗಿಸಲಾಗುವುದು ಎಂದು ವಿವರಿಸಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಹಗರಿಬೊಮ್ಮನಹಳ್ಳಿ ಶಾಖಾಮಠದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜ್ಯ ಸಂಘದ ಮಾಜಿ ಅಧ್ಯಕ್ಷ ಬಾವಿ ಬೆಟ್ಟಪ್ಪ, ನಿಕಟಪೂರ್ವ ಅಧ್ಯಕ್ಷ ಬಸವರಾಜ್ ದಿಂಡೂರು, ರಾಜ್ಯ ಉಪಾಧ್ಯಕ್ಷ ಜಿ.ಪಿ. ಪಾಟೀಲ್, ಹನಸಿ ಸಿದ್ದೇಶ್, ಮಲ್ಲಣ್ಣ ಬೊಮ್ಮಸಾಗರ ಭಾಗವಹಿಸುವರು ಎಂದರು. ಹದಡಿ ನಟರಾಜ್, ಬಾದಾಮಿ ಕರಿಬಸಪ್ಪ, ಎಂ. ದೊಡ್ಡಪ್ಪ, ಲಿಂಗರಾಜು ಇದ್ದರು.

Leave a Reply

Your email address will not be published. Required fields are marked *