ಡಿ.ಎಂ.ಮಹೇಶ್, ದಾವಣಗೆರೆ: ಕಳೆದ ವರ್ಷ ಮೇ 1ರಂದು ಕಾರ್ಯಾರಂಭ ಮಾಡಿದ್ದ ದಾವಣಗೆರೆ ಅಂಚೆ ವಿಭಾಗ ಚೊಚ್ಚಲ ವರ್ಷ ಪೂರೈಸಿದೆ. ಈ ಅವಧಿಯಲ್ಲಿ 15.06 ಕೋಟಿ ರೂ.ಗಳ ವರಮಾನ ಅಂಚೆ ಡಬ್ಬಿಗೆ ಸೇರಿದೆ!
ದಾವಣಗೆರೆ ಜಿಲ್ಲೆಯ ತಾಲೂಕುಗಳು ಚಿತ್ರದುರ್ಗ ಹಾಗೂ ಶಿವಮೊಗ್ಗ ವಿಭಾಗಗಳಿಗೆ ಹರಿದು ಹಂಚಿ ಹೋಗಿದ್ದವು. ಹಿಂದಿನ ವರ್ಷ ದಾವಣಗೆರೆ ಜಿಲ್ಲೆಯ ಆರು ತಾಲೂಕು ಸೇರಿ ಪ್ರತ್ಯೇಕ ವಿಭಾಗ ರಚನೆಯಾಗಿತ್ತು.
ಗ್ರಾಹಕರು ಸಮಸ್ಯೆ- ದೂರು ಸಲ್ಲಿಸಲು ಚಿತ್ರದುರ್ಗಕ್ಕೆ ತೆರಳುವುದು ತಪ್ಪಿದೆ. ಸಾಂಪ್ರದಾಯಿಕ ಅಂಚೆ ಸೇವೆ ಹೊರತಾಗಿಯೂ ಜನರ ಬೇಡಿಕೆಗಳಿಗೆ ಸ್ಪಂದಿಸುತ್ತ ಬಂದಿದೆ. ಅಂಚೆ ಇಲಾಖೆ ಪತ್ರಗಳ ವಿಲೇವಾರಿಗೆ ಸೀಮಿತ ಎಂಬುದೀಗ ಹಳೆಮಾತು. ಅಂಚೆಯೇತರ ಸೇವೆಗಳೇ ಆದಾಯದ ಸಂಪನ್ಮೂಲವಾಗಿವೆ.
ದಾವಣಗೆರೆ ಪ್ರಧಾನ ಅಂಚೆ ಕಚೇರಿಯಲ್ಲಿ ಪ್ರಸಕ್ತ ಸಾಲಿನಲ್ಲಿ 9911 ಅರ್ಜಿದಾರರು ಪಾಸ್‌ಪೋರ್ಟ್ ಪಡೆದಿದ್ದಾರೆ. ಒಂದು ವರ್ಷದಲ್ಲಿ 49,558 ಅಂಚೆ ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ. ಬ್ಯಾಂಕಿಂಗ್‌ಗಿಂತಲೂ ಹೆಚ್ಚು ಬಡ್ಡಿ ದರ ಜನರನ್ನು ಉಳಿತಾಯದತ್ತ ಆಕರ್ಷಿಸುತ್ತಿವೆ.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಮನೆ ಬಾಗಿಲಲ್ಲೇ 13,622 ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ. ಆಧಾರ್ ಕಾರ್ಡ್, ಮೊಬೈಲ್ ನಂಬರ್ ಒಂದಿದ್ದರೆ ಖಾತೆ ಸಿದ್ಧವಾಗಲಿದೆ. ಇಲ್ಲಿನ ಆಧಾರ್ ಕೇಂದ್ರದಿಂದ 24 ಸಾವಿರಕ್ಕೂ ಹೆಚ್ಚು ಆಧಾರ್ ನೋಂದಣಿ/ ತಿದ್ದುಪಡಿ ಮಾಡಿಕೊಡಲಾಗಿದೆ. ಮನೆ ಬಾಗಿಲಲ್ಲೇ 4,648 ಗ್ರಾಹಕರ ಮೊಬೈಲ್ ನಂಬರ್ ತಿದ್ದುಪಡಿಯಾಗಿವೆ.
ಬ್ಯಾಂಕ್ ಗ್ರಾಹಕರಿಗೆ ಅಂಚೆ ಪಾಲಕರು ಬೆರಳಚ್ಚು ಪಡೆದು ಇದ್ದಲ್ಲಿಯೇ ಬಿಡಿಸಿಕೊಡುತ್ತಿದ್ದಾರೆ. 57566 ಜನರಿಗೆ 15.90 ಕೋಟಿ ರೂ. ಹಣವನ್ನು ಶುಲ್ಕರಹಿತವಾಗಿ ಬಿಡಿಸಿಕೊಡಲಾಗಿದೆ. 84727 ಚುನಾವಣಾ ಗುರ್ತಿನ ಚೀಟಿಗಳನ್ನು ನಿಯಮಿತ ಶುಲ್ಕದಲ್ಲಿ ವಿತರಿಸಲಾಗಿದೆ ಎನ್ನುತ್ತಾರೆ ಸಿಬ್ಬಂದಿ.
ಅಂಚೆ ನೌಕರರಿಗೆ ಸೀಮಿತವಿದ್ದ ವಿಮಾ ಸೌಲಭ್ಯವಿಂದು ಸರ್ಕಾರಿ ನೌಕರರು, ಪದವೀಧರರು, ಐಟಿಐ – ಡಿಪ್ಲೊಮಾ ಓದಿದವರಿಗೂ ವಿಸ್ತರಣೆಯಾಗಿದೆ. ವರ್ಷಾವಧಿಯಲ್ಲಿ 1,500ಕ್ಕೂ ಹೆಚ್ಚು ಪಿಎಲ್‌ಐ, ಆರ್‌ಪಿಎಲ್‌ಐ ಪಾಲಿಸಿಯಾಗಿವೆ.
ನೂತನ ವಿಭಾಗದಲ್ಲಿ 47 ಉಪ, 213 ಗ್ರಾಮೀಣ ಅಂಚೆ ಕಚೇರಿಗಳಿದ್ದು, 530 ಸಿಬ್ಬಂದಿ ಇದ್ದಾರೆ. ಹೆಚ್ಚುವರಿ ವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ. ಮೊದಲ ಪ್ರಾಯೋಗಿಕ ವರ್ಷದಲ್ಲೇ ಉತ್ತಮ ಸಾಧನೆ ಮಾಡಿದೆ ಎನ್ನುತ್ತಾರೆ ಅಂಚೆ ವಿಭಾಗದ ಸಹಾಯಕ ಅಧೀಕ್ಷಕ ಜೆ.ಎಸ್.ಗುರುಪ್ರಸಾದ್.
ಅಂಚೆ ಇಲಾಖೆಯ ಸೇವಾಸಕ್ತರು 1800-2666-868 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಬಹುದು. ಅಂಚೆ ಇಲಾಖೆಯ ತಾಣದಲ್ಲೂ ಮನವಿ ಸಲ್ಲಿಸಬಹುದು.
—
*ಮಹಿಳಾ ಸಮ್ಮಾನ್ ಖಾತೆ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ ಮಹಿಳಾ ಸಮ್ಮಾನ್ ಉಳಿತಾಯ ಖಾತೆ ಏಪ್ರಿಲ್‌ನಿಂದ ಆರಂಭವಾಗಿದೆ. 1 ಸಾವಿರ ರೂ.ನಿಂದ 2 ಲಕ್ಷ ರೂ.ವರೆಗೆ ಠೇವಣಿ ಇರಿಸಬಹುದು. ಇದಕ್ಕೆ ವಿಶೇಷ ಬಡ್ಡಿದರವಿದ್ದು, 273 ನೀರೆಯರು ಮನ ಸೋತಿದ್ದಾರೆ.
* ಅಪಘಾತ ಸುರಕ್ಷಾ ವಿಮೆ
299 ರೂ. ಹಾಗೂ 399 ರೂ.ಗಳಲ್ಲಿ ಎರಡು ವಿಧದ ಅಪಘಾತ ಸುರಕ್ಷಾ ವಿಮೆ ಚಾಲ್ತಿಯಲ್ಲಿದೆ. ಅಪಘಾತದಲ್ಲಿ ವ್ಯಕ್ತಿ ಮೃತನಾದಲ್ಲಿ 10 ಲಕ್ಷ ರೂ.ವರೆಗೆ ನೆರವು ಸಿಗಲಿದೆ. ವೈದ್ಯಕೀಯ ವೆಚ್ಚ, ಒಳರೋಗಿ ಧನಸಹಾಯ ಇನ್ನಿತರೆ ಸಹಾಯ ಸಿಗಲಿದೆ. 5724 ಮಂದಿ ನೋಂದಣಿಯಾಗಿದ್ದಾರೆ.
—
*ವಿಭಾಗ ಕಚೇರಿಗೆ ಬಿದ್ದಿಲ್ಲ ಸೀಲು
ದೇವರಾಜ ಅರಸು ಬಡಾವಣೆಯಲ್ಲಿ 100-100 ಅಡಿ ನಿವೇಶನದಲ್ಲಿ ಅಂಚೆ ವಿಭಾಗ ಕಚೇರಿ ನಿರ್ಮಾಣಕ್ಕೆ ಬೆಂಗಳೂರು ಪ್ರಧಾನ ಕಚೇರಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇನ್ನೂ ಅಂಚೆ ಇಲಾಖೆಯ ಸೀಲು ಬಿದ್ದಿಲ್ಲ!
—
* ಕೋಟ್
ದಾವಣಗೆರೆ ಅಂಚೆ ವಿಭಾಗದ ಸ್ವಂತ ಕಟ್ಟಡಕ್ಕಾಗಿ ಮತ್ತೊಮ್ಮೆ ಸಂಸದರಿಗೆ ಮನವಿ ಮಾಡಲಾಗುವುದು. ನಿಯಮ ಉಲ್ಲಂಸಿದ ವಾಹನಗಳಿಗೆ ಅಂಚೆ ಕಚೇರಿಗಳಲ್ಲಿ ದಂಡ ಕಟ್ಟಿಸಿಕೊಳ್ಳುವ ಕ್ರಮ ಮಂಗಳೂರಿನಲ್ಲಿದೆ. ಇಲ್ಲಿಯೂ ಚಾಲ್ತಿಗೆ ತರುವ ಪ್ರಯತ್ನದಲ್ಲಿದ್ದೇವೆ.
ಚಂದ್ರಶೇಖರ ಹೊಳ್ಳ
ದಾವಣಗೆರೆ ಅಂಚೆ ವಿಭಾಗದ ಅಧೀಕ್ಷಕ.
—-