More

  ದಾವಣಗೆರೆಯಲ್ಲಿ ‘ಮಹಾ ಸಂಗಮ’ಕ್ಕೆ ಭರದ ಸಿದ್ಧತೆ

  ದಾವಣಗೆರೆ : ರಾಜ್ಯದ 4 ದಿಕ್ಕುಗಳಿಂದ ಹೊರಟಿರುವ ಜನಸಂಕಲ್ಪ ಯಾತ್ರೆಗಳ ಸಮಾರೋಪ ‘ಮಹಾ ಸಂಗಮ’ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮಾರ್ಚ್ 25 ರಂದು ನಡೆಯಲಿದ್ದು ಸಿದ್ಧತೆಗಳು ಭರದಿಂದ ಸಾಗಿವೆ.
   ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಈ ವಿರಾಟ್ ಸಮಾವೇಶ ನಗರದ ಹಳೇ ಪಿಬಿ ರಸ್ತೆಯ ಜಿ.ಎಂ.ಐ.ಟಿ. ಕಾಲೇಜು ಪಕ್ಕದ 400 ಎಕರೆಗೂ ಹೆಚ್ಚು ಜಾಗದಲ್ಲಿ ಆಯೋಜನೆಯಾಗುತ್ತಿದೆ.
   ಹತ್ತು ಲಕ್ಷ ಜನರು ಸೇರುವ ನಿರೀಕ್ಷೆಯೊಂದಿಗೆ ಪೆಂಡಾಲ್, ಊಟ, ವಾಹನ ನಿಲುಗಡೆ ಸಹಿತ ಸಮಾವೇಶದ ಯಶಸ್ಸಿಗೆ ಬೇಕಾದ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ. 3 ಲಕ್ಷಕ್ಕೂ ಹೆಚ್ಚು ಆಸನಗಳನ್ನು ಹಾಕಲಾಗುತ್ತಿದ್ದು, ಬಿಜೆಪಿಯ ಸ್ಥಳೀಯ ಮುಖಂಡರ ಜತೆಗೆ ರಾಜ್ಯ ನಾಯಕರೂ ಕೈಜೋಡಿಸಿದ್ದಾರೆ.
   ಸಮಾವೇಶ ನಡೆಯಲಿರುವ ಸ್ಥಳಕ್ಕೇ 250 ಎಕರೆ ಕಾಯ್ದಿರಿಸಲಾಗಿದ್ದು ಪಾರ್ಕಿಂಗ್‌ಗೆ 200 ಎಕರೆಯಷ್ಟು ಪ್ರದೇಶ ಗುರುತಿಸಲಾಗಿದೆ. 650 ಅಡಿ ಅಗಲ, 1 ಸಾವಿರ ಅಡಿ ಉದ್ದದ ಬೃಹತ್ ಪೆಂಡಾಲ್, 80 ಅಡಿ ಅಗಲ, 100 ಅಡಿ ಉದ್ದ, 8 ಅಡಿ ಎತ್ತರದ ವೇದಿಕೆ ನಿರ್ಮಿಸಲು ಯೋಜಿಸಲಾಗಿದ್ದು ಬೆಂಗಳೂರಿನ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗಿದೆ.
   ಸಮಾವೇಶ ಸ್ಥಳಕ್ಕೆ ಜನರು ಪ್ರವೇಶ ಪಡೆಯಲು 3 ಮಹಾದ್ವಾರಗಳನ್ನು ಮಾಡುವ ಉದ್ದೇಶವಿದೆ. ಒಳಗೆ 3-5 ಅಡುಗೆ ಮನೆ, 300-500 ಊಟದ ಕೌಂಟರ್ ತೆರೆಯಲಾಗುತ್ತಿದ್ದು 40-50 ದೊಡ್ಡ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗುವುದು. ಕುಡಿಯುವ ನೀರಿನ ನಲ್ಲಿಗಳು, ಟ್ಯಾಂಕರ್, ಶೌಚಗೃಹ, ಸ್ವಚ್ಛತೆಯ ಏರ್ಪಾಟು ಮಾಡಲಾಗುತ್ತಿದೆ.
   ಬಹಳ ದೊಡ್ಡ ಸಂಖ್ಯೆಯಲ್ಲಿ ಜನರು ಬರುವ ಸಾಧ್ಯತೆ ಇರುವುದರಿಂದ ವಾಹನಗಳ ನಿಲುಗಡೆಗೆ ಜಿಲ್ಲಾ ಕ್ರೀಡಾಂಗಣ, ಐಟಿಐ ಮೈದಾನ, ಮಾಗನೂರು ಬಸಪ್ಪ ಮೈದಾನ, ಎಪಿಎಂಸಿ, ಅರುಣ ವೃತ್ತದ ಎದುರಿನ ಜಾಗ, ಬಾಡಾ ಕ್ರಾಸ್, ಆವರಗೆರೆ, ಬಾತಿ, ಯರಗುಂಟೆ, ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದ ಜಾಗಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ ತಿಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts