ಎಂಎಸ್​ಬಿ ಕಲಾ ಕಾಲೇಜು ವಿದ್ಯಾರ್ಥಿಗಳಿಂದ ದಾವಣಗೆರೆಯಲ್ಲಿ ಮತದಾನ ಜಾಗೃತಿ ಜಾಥಾ

ದಾವಣಗೆರೆ: ನಗರದ ಎಂ.ಎಸ್.ಬಿ. ಕಾಲೇಜು ವಿದ್ಯಾರ್ಥಿಗಳು ಗುರುವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾಥಾ ನಡೆಸುವ ಮೂಲಕ ಮತದಾನದ ಕುರಿತು ಅರಿವು ಮೂಡಿಸಿದರು.

ಕಾಲೇಜಿನಿಂದ ಮೆರವಣಿಗೆ ಆರಂಭಿಸಿದ ವಿದ್ಯಾರ್ಥಿಗಳು ವಿವಿಧ ರಸ್ತೆಗಳ ಮೂಲಕ ಸಾಗಿದರು. ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಬೀದಿನಾಟಕ ಪ್ರದರ್ಶಿಸಿ ಮತದಾನದ ಮಹತ್ವವನ್ನು ಸಾರಿದರು.

ವಿದ್ಯಾರ್ಥಿಗಳು, ‘ನಿಮ್ಮ ನಡೆ ಮತಗಟ್ಟೆ ಕಡೆ’, ‘ನಮ್ಮ ಮತ, ನಮ್ಮ ಹಕ್ಕು’, ‘ನೈತಿಕ ಮತದಾನ ನಮ್ಮ ಬದ್ಧತೆ’, ‘ಮದ್ಯಪಾನ ಬಿಡಿ, ಮತದಾನ ಮಾಡಿ’, ‘ನಿಮ್ಮ ಮತ, ನಿಮ್ಮ ಧ್ವನಿ’, ‘ನಮ್ಮ ಮತ ಅಮೂಲ್ಯ, ಕಟ್ಟಲಾರೆವು ಇದರ ಮೌಲ್ಯ’ ಎಂಬ ಬರಹಗಳುಳ್ಳ ಭಿತ್ತಿಪತ್ರಗಳನ್ನು ಕೈಯಲ್ಲಿ ಹಿಡಿದಿದ್ದರು.

ಕಾಲೇಜು ಪ್ರಾಂಶುಪಾಲ ಡಾ. ಕೆ. ಹನುಮಂತಪ್ಪ ಮಾತನಾಡಿ, ಈ ಚುನಾವಣೆ ದೇಶಕ್ಕೆ ಒಳ್ಳೆಯ ಭವಿಷ್ಯ ರೂಪಿಸಲಿ ಎಂಬ ಉದ್ದೇಶದಿಂದ ಎಲ್ಲರೂ ಮತದಾನ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.