More

  ದಾವಣಗೆರೆಯಲ್ಲಿ ಆಯುಷ್ ಜಿಲ್ಲಾಸ್ಪತ್ರೆ ಸೇವಾರಂಭ ಶೀಘ್ರ 

  ಡಿ.ಎಂ.ಮಹೇಶ್, ದಾವಣಗೆರೆ: ಆಯುರ್ವೇದ, ಯುನಾನಿ, ಹೋಮಿಯೋಪಥಿ ಹಾಗೂ ನ್ಯಾಚುರೋಪಥಿ ನಾಲ್ಕೂ ವೈದ್ಯ ಪದ್ಧತಿಯ ಚಿಕಿತ್ಸೆಯನ್ನು ಒಂದೇ ಸೂರಿನಡಿ ಕಲ್ಪಿಸುವ ಜಿಲ್ಲಾ ಮಟ್ಟದ ಸರ್ಕಾರಿ ಸಂಯುಕ್ತ ಆಯುಷ್ ಆಸ್ಪತ್ರೆ ಕಟ್ಟಡ ದಾವಣಗೆರೆ ಹೊರವಲಯದ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿ ತಲೆ ಎತ್ತಿ ನಿಂತಿದೆ.
  ಆಯುರ್ವೇದಕ್ಕೆ ಜಿಲ್ಲೆಯಲ್ಲಿ ಹಿತಾನುಭವವಿದೆ. ಇಲ್ಲಿರುವ 25 ಆಯುರ್ವೇದ ಚಿಕಿತ್ಸಾಲಯ, ನಾಲ್ಕು ಆಯುಷ್ ಆಸ್ಪತ್ರೆಗಳು ಮಾಸಿಕ 10 ಸಾವಿರದಷ್ಟು ರೋಗಿಗಳ ದೀರ್ಘಕಾಲೀನ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದೆ. ಇನ್ನಷ್ಟು ಗುಣಮಟ್ಟದ ಮತ್ತು ಉಚಿತ ಸೇವೆಗೆ ಸಜ್ಜಾಗುತ್ತಿದೆ ಜಿಲ್ಲಾ ಆಯುಷ್ ಆಸ್ಪತ್ರೆ.
  ಆಯಷ್ ಇಲಾಖೆಯ ರಾಜ್ಯ ವಲಯದಡಿ ಕರ್ನಾಟಕದಲ್ಲಿ ನಿರ್ಮಾಣಗೊಂಡ, 50 ಹಾಸಿಗೆ ಸಾಮರ್ಥ್ಯದ ಮೂರನೇ ಆಸ್ಪತ್ರೆ ಇದಾಗಿದೆ. 3 ಸಾವಿರ ಚದರ ಅಡಿ ವಿಸ್ತೀರ್ಣವನ್ನು ಒಳಗೊಂಡಿದೆ. 7.5 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಆರೋಗ್ಯ ಇಂಜಿನಿಯರಿಂಗ್ ವಿಭಾಗ ನಾಲ್ಕಂತಸ್ತಿನ ಆಸ್ಪತ್ರೆಯ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಿದೆ. 2019ರ ಜೂನ್ ತಿಂಗಳಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಭೂಮಿಪೂಜೆ ನೆರವೇರಿಸಿದ್ದರು.
  ನೆಲ ಮಹಡಿಯಲ್ಲಿ ಆಡಳಿತ ಬ್ಲಾಕ್, ಹೊರರೋಗಿಗಳ ವಿಭಾಗ, ಪ್ರಯೋಗಾಲಯ ಇರಲಿವೆ. ಮೊದಲು ಮತ್ತು ಎರಡನೇ ಅಂತಸ್ತಿನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ತಲಾ ಪ್ರತ್ಯೇಕ ಚಿಕಿತ್ಸಾ ಕೊಠಡಿಗಳಿವೆ. ಮೂರನೇ ಮಹಡಿಯಲ್ಲಿ ಔಷಧದ ಉಗ್ರಾಣ ಇತ್ಯಾದಿ ವ್ಯವಸ್ಥೆ ಮಾಡಲಾಗುತ್ತಿದೆ.
  ವಾತ, ಅಸ್ತಮಾ, ಪಾರ್ಶ್ವವಾಯು, ಮಂಡಿನೋವು, ಕೀಲುನೋವು, ಮೂಲವ್ಯಾಧಿ, ಚರ್ಮರೋಗ ಸೇರಿ ದೀರ್ಘಕಾಲಿಕ ಕಾಯಿಲೆಗಳಿಗೆ ಇಲ್ಲಿ ಚಿಕಿತ್ಸೆ ಸಿಗಲಿದೆ. ಜಿಲ್ಲೆಯ ನಾಗರಿಕರು ಇದರ ಲಾಭ ಪಡೆಯಬಹುದು. ಇಲ್ಲಿ ದಾಖಲಾಗುವ ಒಳ ರೋಗಿಗಳಿಗೆ ಇಲಾಖೆ ಮಾರ್ಗಸೂಚಿಯನ್ವಯ ದಿನವೂ ಊಟದ ಸೌಲಭ್ಯ ಇರಲಿದೆ. ಪಂಚಕರ್ಮ ಚಿಕಿತ್ಸೆ ಹಾಗೂ ವಿವಿಧೇತರ ಥೆರಪಿ ಸೌಕರ್ಯವೂ ಸಿಗಲಿವೆ.
  ಆಸ್ಪತ್ರೆ ಆರಂಭವಾದಲ್ಲಿ 9 ಮಂದಿ ವೈದ್ಯರಲ್ಲದೆ ಶುಶ್ರೂಷಕರು, ಪ್ರಯೋಗಾಶಾಲಾ ತಂತ್ರಜ್ಞರು, ಭದ್ರತೆ ಸೇರಿ 54 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಆಯಾ ವೈದ್ಯ ಪದ್ಧತಿಯಡಿ ವೈದ್ಯಕೀಯ ಉಪಕರಣ, ಹಾಸಿಗೆ, ಮಂಚ ಸೇರಿ ಪೀಠೋಕರಣಗಳ ಸೌಲಭ್ಯಗಳ ನಿರೀಕ್ಷೆ ಇದೆ. ಕಾರ್ಯ ನಿರ್ವಹಣೆ ಸಂಬಂಧ ಆಯುಷ್ ನಿರ್ದೇಶನಾಲಯದಿಂದ ಇನ್ನಷ್ಟೇ ನಿರ್ದೇಶನ ಬರಬೇಕಿದೆ.
  ಸದ್ಯಕ್ಕೆ ಅತಿ ಅವಶ್ಯಕವಾದ ಸೆಫ್ಟಿಕ್ ಟ್ಯಾಂಕ್ ಹಾಗೂ ಸೋಪಿಟ್ ಟ್ರೀಟ್ಮೆಂಟ್ ಪ್ಲಾಂಟ್ ಕೂಡ ನಿರ್ಮಾಣವಾಗಬೇಕಿದೆ. ಇದಕ್ಕೆ ಇಲಾಖೆಯಿಂದ 94 ಲಕ್ಷ ರೂ.ಗಳ ಹೆಚ್ಚುವರಿ ವೆಚ್ಚ ಭರಿಸಬೇಕಿದೆ. ಈ ಕಾರ್ಯ ಪೂರ್ಣಗೊಂಡು ಇಲಾಖೆಗೆ ಹಸ್ತಾಂತರವಾದಲ್ಲಿ ಇನ್ನು 2-3 ತಿಂಗಳಲ್ಲಿ ಲೋಕಾರ್ಪಣೆ ಆಗಲಿದೆ.
  * ಆಯುಷ್ ಅಧಿಕಾರಿಗಳ ಕಟ್ಟಡ
  ಆಸ್ಪತ್ರೆ ಸನಿಹವೇ ಜಿಲ್ಲಾ ಆಯುಷ್ ಅಧಿಕಾರಿಗಳ ಕಟ್ಟಡ ಕೂಡ ಜಿಪಂ ಇಂಜಿನಿಯರಿಂಗ್ ವಿಭಾಗದಿಂದ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಸದ್ಯಕ್ಕೆ ಜಿಪಂ ಇಂಜಿನಿಯರಿಂಗ್ ಇಲಾಖೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಕಚೇರಿ ಶೀಘ್ರವೇ ನೂತನ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ. ಎರಡೂ ಕಟ್ಟಡ ಸೇರಿ 1 ಎಕರೆ 31 ಗುಂಟೆ ಜಾಗ ಆಯುಷ್ ಇಲಾಖೆ ಸುಪರ್ದಿಯಲ್ಲಿದೆ.

  *ಕೋಟ್
  ನಿರೀಕ್ಷಿತ ಆಯುಷ್ ಜಿಲ್ಲಾಸ್ಪತ್ರೆ ಶೀಘ್ರವೇ ಇಲಾಖೆಗೆ ಹಸ್ತಾಂತರವಾಗಲಿದ್ದು, ಇನ್ನು 2-3 ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ. ದಾವಣಗೆರೆ ಜಿಲ್ಲೆಯ ಸಾರ್ವಜನಿಕರಿಗೆ ಇಲ್ಲಿ ಉಚಿತ ಹಾಗೂ ಉತ್ಕೃಷ್ಟ ಚಿಕಿತ್ಸೆ ಸೇವಾ ಸೌಲಭ್ಯಗಳು ದೊರಕಲಿವೆ.
  ಡಾ. ಶಂಕರಗೌಡ
  ಜಿಲ್ಲಾ ಆಯುಷ್ ಅಧಿಕಾರಿ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts