ದಾಳಿಂಬೆ ಹೂವುಗಳ ಪರಾಗಸ್ಪರ್ಶ ಹೇಗೆ?

ನಮ್ಮ ಗಾರ್ಡನ್​ನಲ್ಲಿ ಮೂರು ದಾಳಿಂಬೆ ಸಸ್ಯಗಳಿವೆ. ಆದರೆ, ಅದರ ಹೂವುಗಳು ಉದುರಿ ಹೋಗುತ್ತಿವೆ. ಕಾರಣ ಏನಿರಬಹುದು? ಪರಿಹಾರವೇನು?

| ಸಿದ್ದರಾಜು

ವಾಸ್ತವವೇನೆಂದರೆ ಯಾವುದನ್ನೂ ನೋಡದೇ ಹೇಳುವುದು ಸರಿಯಲ್ಲ. ಕೆಲವು ಸಸ್ಯಗಳು ಹಿತ್ತಿಲಿನಲ್ಲಿ ನೆಟ್ಟರೆ ಫಲ ಕೊಡುವುದಿಲ್ಲ. ಕೆಲವು ಹಿತ್ತಿಲಿನಲ್ಲಿ ಮಾತ್ರ ಫಲ ಬಿಡುತ್ತವೆ. ಹೀಗಾಗಿ ನೀವು ನೆಟ್ಟ ಗಿಡ ಯಾಕೆ ಫಲ ಕೊಡುತ್ತಿಲ್ಲ ಎನ್ನುವುದು ಅಲ್ಲಿನ ಪರಿಸರ, ಅದಕ್ಕಾಗುತ್ತಿರುವ ತೊಂದರೆ, ಅದು ಎದುರಿಸುತ್ತಿರುವ ಹೊಟ್ಟೆಪಾಡನ್ನು ಅವಲಂಬಿಸಿದೆ.

ಕೆಲವೊಮ್ಮೆ ದಾಳಿಂಬೆಯ ಗಿಡಗಳು ಹೆಚ್ಚು ಹೆಣ್ಣು ಹೂವುಗಳನ್ನು ಮಾತ್ರ ಅರಳಿಸಿ ಗಂಡು ಹೂವುಗಳನ್ನು ಅರಳಿಸದೇ ಇದ್ದಾಗ ಅಥವಾ ಬರೀ ಗಂಡು ಹೂವುಗಳನ್ನು ಮಾತ್ರ ಅರಳಿಸಿ ಹೆಣ್ಣು ಹೂವುಗಳು ಇಲ್ಲದಿದ್ದಾಗ, ಇವೆರೆಡೂ ಇದ್ದು ಅರಳುವ ಸಮಯ ಬೇರೆ ಬೇರೆ ಆಗಿದ್ದಾಗ ಇದೆಲ್ಲ ಸಾಧ್ಯ. ದಾಳಿಂಬೆ ತೋಟಗಳಲ್ಲಿ ಬೆಳೆಯುವವರು ಸಾವಯವ ಕೃಷಿಕರಾಗಿದ್ದರೂ ಸಹ ಹೂವುಗಳು ಸೂಕ್ತ ಕಾಲದಲ್ಲಿ ಅರಳುವಂತೆ ಮಾಡಲು ಹಾಮೋನ್ ಸಿಂಪಡಣೆ ಮಾಡುತ್ತಾರೆ. ಆಗ ಗಂಡು ಮತ್ತು ಹೆಣ್ಣು ಎರಡೂ ಹೂವುಗಳು ಒಂದಕ್ಕೊಂದು ಪೂರಕವಾಗಿ ಅರಳಿ ಗಿಡದ ತುಂಬ ಕಾಯಿಗಳು ನಳನಳಿಸುತ್ತವೆ. ನೀವು ಒಮ್ಮೆ ಎಲ್ಲಾದರೂ ಪ್ರಯಾಣಿಸುತ್ತಿರುವಾಗ ಯಾರದ್ದಾದರೂ ದಾಳಿಂಬೆ ತೋಟಕ್ಕೆ ಹೋಗಿ ಹೆಣ್ಣು ಹೂವುಗಳು ಮತ್ತು ಗಂಡು ಹೂವುಗಳ ಪರಿಚಯ ಮತ್ತು ಅವು ಪರಾಗಸ್ಪರ್ಶವಾಗುವ ಕ್ರಮಗಳನ್ನು ತಿಳಿದುಕೊಳ್ಳಿ. ಆಗ ನೀವೇ ಅದಕ್ಕೆ ಉಪಾಯ ಹುಡುಕಬಹುದು.

ಹೂವರಳುವ ಕಾಲದಲ್ಲಿ ನುಸಿಗಳ ಬಾಧೆಯಾದರೂ ಕಾಯಿ ಕಚ್ಚದೆ ಹೀಚುಗಳು ಉದುರುವ ಸಾಧ್ಯತೆ ಇದೆ. ಅದಕ್ಕಾಗಿ ಈಗಾಗಲೇ ತಿಳಿಸಿದ ಹಳದಿ ಬಣ್ಣದ ಅಂಟು ಷೀಟ್​ನಿಂದ ನುಸಿಯನ್ನು ನಿಯಂತ್ರಿಸಿ. ನೀವು ಇದನ್ನು ಓದಿದ ಬಳಿಕ, ನಿಮ್ಮಲ್ಲಿರುವ ಗಿಡಗಳನ್ನು ಸಣ್ಣದಾಗಿ ಸವರಿ ಬಿಡಿ. ಒಂದು ವಾರಗಳ ಬಳಿಕ ಪೊಟ್ಯಾಶ್ ಹಾಗೂ ರಂಜಕವಿರುವ ಗೊಬ್ಬರವನ್ನು ಕೊಡಿ. ಅಥವಾ ಸೂಕ್ಷ್ಮಜೀವಿ ಗೊಬ್ಬರವನ್ನಾದರೂ ನೀಡಿ. ಗೊಬ್ಬರ ನೀಡಿದ ಮೇಲೆ ಒಂದು ಹೊತ್ತು ಮಾತ್ರ ನೀರನ್ನು ನೀಡಿ. ಸುಮಾರು ಮಾರ್ಚ್ ತಿಂಗಳಿನಲ್ಲಿ ಹೂವುಗಳು ಬಿಡಲು ಪ್ರಾರಂಭವಾಗುತ್ತವೆ. ಗಿಡದ ತುಂಬಾ ಹೂವುಗಳು ಬಿಟ್ಟ ಮೇಲೆ ಒಮ್ಮೆ ಗಿಡವನ್ನು ಹಿಡಿದು ಗಟ್ಟಿಯಾಗಿ ಅಲ್ಲಾಡಿಸಿ. ಹಾಗೆ ಮಾಡುವಾಗ ‘ಯಾಕೆ ನೀನು ಹಣ್ಣುಗಳನ್ನು ಕೊಡುತ್ತಿಲ್ಲಾ?’ ಎಂದು ದೊಡ್ಡದಾಗಿ ಕೇಳಿ. ಅಲುಗಾಡಿಸಿದ ಪ್ರಯುಕ್ತ ಒಂದಿಷ್ಟು ಹೂವುಗಳು ಉದುರಿ ಹೋಗುತ್ತವೆ. ಉಳಿದವುಗಳು ಹೀಚಾಗಿ ಕಾಯಿಗಟ್ಟುತ್ತವೆ. ಇದು ಯಶಸ್ವಿಯಾದರೆ ತಿಳಿಸಿ.

ದಾಳಿಂಬೆ ಗಿಡಕ್ಕೆ ಶೇಂಗಾದ ಹಿಂಡಿಯನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕು?

| ಸಿದ್ದರಾಜು ಎಚ್.ಎಸ್.

ದಾಳಿಂಬೆ ಗಿಡಗಳಿಗೆ ಶೇಂಗಾ ಹಿಂಡಿ ಗೊಬ್ಬರ ಹಾಕುವುದರಿಂದ ಅವುಗಳ ಕಸುವು ಹೆಚ್ಚುತ್ತದೆ. ಹೀಗಾಗಿ ಪ್ರಾರಂಭದಿಂದಲೇ ನೀಡಬಹುದು. ಒಂದು ವರ್ಷದ ಪ್ರತಿಗಿಡಕ್ಕೆ ಪ್ರತಿ ವರ್ಷ 250 ಗ್ರಾಮ್ಳಷ್ಟು ಸಾಕಾಗುತ್ತದೆ. ವರ್ಷದ ಬಳಿಕ ಕನಿಷ್ಠ ಒಂದು ಕಿಲೋಗ್ರಾಮ್ ಹಿಂಡಿಯನ್ನು ಹಾಕಬಹುದು. ಕೆಲವರು ಬಹಾರ್ ಸಮಯದಲ್ಲಿ ಸಾರಜನಕದ ಪ್ರಮಾಣ ಕಡಿಮೆ ಇರಬೇಕು ಎನ್ನುತ್ತಾರೆ. ಆದರೆ, ಹೂಬಿಡುವ ಸಮಯಕ್ಕೆ ಹಿಂಡಿಗೊಬ್ಬರ ನೀಡುವುದರಿಂದ ಅದರಲ್ಲಿರುವ ರಂಜಕ ಮತ್ತು ಪೊಟ್ಯಾಶ್ ಹೂವುಗಳು ಕಚ್ಚಿಕೊಳ್ಳಲು, ಹೀಚುಗಳು ಫಲಭರಿತವಾಗಿ ನಿಲ್ಲಲೂ ಸಹಾಯಕ ಎನ್ನಬಹುದು. ಹೀಗಾಗಿ ನಿಮ್ಮಲ್ಲಿ ವಾರ್ಷಿಕವಾಗಿ ಎಷ್ಟು ಸಾರಿ ಹಣ್ಣು ಬಿಡುತ್ತದೆ ಅಥವಾ ಯಾವಾಗ ಹಣ್ಣನ್ನು ಬಿಡಿಸುತ್ತೀರಿ ಎನ್ನುವುದರ ಆಧಾರದ ಮೇಲೆ ಹಿಂಡಿಗೊಬ್ಬರವನ್ನು ಒಂದು ಅಥವಾ ಎರಡು ಬಾರಿ ನೀಡುವುದು ಉತ್ತಮ. ಇದು ರೈತರೇ ಮಾಡಿದ ಪ್ರಯೋಗ.