ದಾಳಿಂಬೆ ಬೆಳೆಗೆ ಸೀರೆ ನೆರಳು !

ಮುಂಡರಗಿ:ಬರಪೀಡಿತ ಪ್ರದೇಶದಲ್ಲಿ ರೈತರು ಬೆಳೆ ಬೆಳೆಯುವುದೇ ಒಂದು ಸವಾಲಿನ ಕೆಲಸ. ಬೇಸಿಗೆ ಸಮಯದಲ್ಲಂತೂ ಬೆಳೆ ಉಳಿಸಿಕೊಳ್ಳುವುದು ತುಂಬಾನೇ ಕಷ್ಟಕರ. ಹೀಗಾಗಿ ಇಲ್ಲೊಬ್ಬ ರೈತರು ಬಿರು ಬಿಸಿಲಿನಿಂದ ತನ್ನ ಬೆಳೆ ರಕ್ಷಿಸಿಕೊಳ್ಳಲು ಸೀರೆಯ ಮೊರೆ ಹೋಗಿದ್ದಾರೆ.

ಹೌದು, ಪಟ್ಟಣದ ಗದಗ ರಸ್ತೆಯಲ್ಲಿನ ವೆಂಕಟೇಶ ಬಂಡೆಣ್ಣವರ ಎಂಬ ರೈತ ತಮ್ಮ 10 ಎಕರೆಯಲ್ಲಿ ದಾಳಿಂಬೆ ಬೆಳೆ ಬೆಳೆದಿದ್ದಾರೆ. ಬೇಸಿಗೆಯಲ್ಲಿ ಬೆಳೆಗೆ ನೀರಿನ ಕೊರತೆ ಎದುರಾಗುವುದು ಸಾಮಾನ್ಯ. ಬಿರು ಬಿಸಿಲಿನಿಂದ ಭೂಮಿಯಲ್ಲಿನ ತೇವಾಂಶ ಬೇಗ ಕಡಿಮೆಯಾಗಿ ಬೆಳೆಗಳು ಬಾಡಲಾರಂಭಿಸುತ್ತವೆ. ಇಳುವರಿ ಕುಸಿತಗೊಳ್ಳುತ್ತದೆ. ಆದ್ದರಿಂದ ಪ್ರಸಕ್ತ ಬೇಸಿಗೆಯಲ್ಲಿ ಉತ್ತಮವಾಗಿ ಬೆಳೆದಿರುವ ದಾಳಿಂಬೆಯನ್ನು ಸಂರಕ್ಷಿಸಿಕೊಂಡು ಅಧಿಕ ಇಳುವರಿ ಪಡೆಯುವ ಉದ್ದೇಶದಿಂದ ದಾಳಿಂಬೆ ಗಿಡದ ಮೇಲ್ಭಾಗದಲ್ಲಿ ಸೀರೆ ಹೊದಿಸಿದ್ದಾರೆ. ಸೀರೆ ಮಹಿಳೆಯರ ಉಡುಗೆಗಷ್ಟೇ ಸೀಮಿತವಲ್ಲ. ಬೆಳೆ ರಕ್ಷಣೆಗೂ ಸಹಕಾರಿಯಾಗುವ ಮೂಲಕ ಗಮನ ಸೆಳೆದಿದೆ. ಗದಗಕ್ಕೆ ಸಂಚರಿಸುವ ಪ್ರತಿಯೊಬ್ಬರೂ ವೆಂಕಟೇಶ ಅವರ ತೋಟದ ಕಡೆ ಕಣ್ಣು ಹಾಯಿಸುತ್ತಿದ್ದಂತೆ, ದಾಳಿಂಬೆ ಗಿಡಗಳಿಗೆ ಹಾಕಿರುವ ಬಣ್ಣ ಬಣ್ಣದ ಸೀರೆ ಆಕರ್ಷಿಸುತ್ತವೆ. 10 ಎಕರೆ ಜಮೀನಿನಲ್ಲಿ ಗುಜರಾತ್​ನ ಕೆಡಿಲಾ ಕಂಪನಿಯಿಂದ 6 ಸಾವಿರ ದಾಳಿಂಬೆ ಸಸಿ ಮತ್ತು ಕೊಲ್ಲಾಪುರದ ತೈವಾನ್ ರೇಡ್​ಲೇಡಿ ತಳಿಯ 7 ಸಾವಿರ ಪಪ್ಪಾಯಿ ಸಸಿಗಳನ್ನು ತಂದು 2017ರ ಆಗಸ್ಟ್​ನಲ್ಲಿ 8/8 ಅಡಿ ಅಂತರದಲ್ಲಿ ದಾಳಿಂಬೆ ಸಸಿ ನೆಟ್ಟು ಅವುಗಳ ಮಧ್ಯದಲ್ಲಿ ಒಂದೊಂದು ಪಪ್ಪಾಯ ಬೆಳೆದಿದ್ದಾರೆ. ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. 6 ಸಾವಿರ ದಾಳಿಂಬೆ ಗಿಡಗಳಲ್ಲಿ 1500 ಗಿಡಗಳನ್ನು ಸಸಿ ತಯಾರಿಸಲು ಬೆಳೆದಿದ್ದಾರೆ. ಇನ್ನುಳಿದ 4500 ದಾಳಿಂಬೆ ಗಿಡಗಳು ಹಣ್ಣು ಬಿಡಲು ಪ್ರಾರಂಭಿಸಿವೆ. ಬಿಸಿಲಿನಿಂದ ಹಣ್ಣಿನ ಮೇಲ್ಭಾಗ ಮತ್ತು ಒಳಭಾಗ ಕಪ್ಪಾಗುವುದನ್ನು ತಡೆದು, ಕೆಂಪು ಬಣ್ಣ ಮೂಡುವುದರ ಜೊತೆಗೆ ಉತ್ತಮ ಇಳುವರಿ ಪಡೆಯುವುದಕ್ಕೆ ಎಲ್ಲ ಗಿಡಗಳಿಗೆ ಸೀರೆ ಹೊದಿಕೆ ಹಾಕಿದ್ದಾರೆ. ಹುಬ್ಬಳ್ಳಿಯಿಂದ ಹಳೆಯ ಸೀರೆಗಳನ್ನು 16 ರೂ.ಗೆ ಒಂದರಂತೆ 72 ಸಾವಿರ ರೂ. ನೀಡಿ ಖರೀದಿಸಿ ತಂದಿದ್ದಾರೆ. ಒಟ್ಟು 4500 ಸೀರೆ ದಾಳಿಂಬೆ ಗಿಡಗಳಿಗೆ ಹೊದಿಸಿದ್ದಾರೆ. ಈ ಸೀರೆಯನ್ನು ಐದಾರು ವರ್ಷ ಬಳಸಬಹುದಾಗಿದೆ.

ಸಸಿ ತಯಾರಿಕೆ

1500 ದಾಳಿಂಬೆ ಗಿಡಗಳಿಂದ ಸುಮಾರು 30 ಸಾವಿರ ದಾಳಿಂಬೆ ಸಸಿ ಬೆಳೆಸಿದ್ದಾರೆ. 10 ಸಾವಿರ ಸಸಿಗಳನ್ನು ವೆಂಕಟೇಶ ಅವರು ತಮ್ಮ ಬೇರೊಂದು ಜಮೀನಿನಲ್ಲಿ ನೆಟ್ಟಿದ್ದಾರೆ. ಪ್ರತಿಗಿಡಕ್ಕೆ 20 ರೂ.ದಂತೆ 20 ಸಾವಿರ ಸಸಿಗಳನ್ನು ಬೇರೆ ರೈತರಿಗೆ ಮಾರಾಟ ಮಾಡಿದ್ದಾರೆ.

ಕೈ ಹಿಡಿದ ಪಪ್ಪಾಯ

2017ರ ಆಗಸ್ಟ್​ನಲ್ಲಿ ಪಪ್ಪಾಯ ಸಸಿ ನಾಟಿ ಮಾಡಿದರು. ಇದು 9 ತಿಂಗಳಲ್ಲಿ ಉತ್ತಮ ಫಸಲು ಕೊಡಲು ಪ್ರಾರಂಭಿಸಿತು. ನಿರಂತರ 6 ತಿಂಗಳು ಪಪ್ಪಾಯ ಇಳುವರಿ ನೀಡಿತು. 7 ಸಾವಿರ ಪಪ್ಪಾಯಿ ಗಿಡಗಳಿಂದ ಒಟ್ಟು 240 ಟನ್ ಇಳುವರಿ ತೆಗೆದರು. ಪ್ರತಿ ಟನ್​ಗೆ 8 ರಿಂದ 20 ಸಾವಿರ ರೂ.ವರೆಗೆ ಮಾರಾಟ ಮಾಡಿ ಒಟ್ಟು 24 ಲಕ್ಷ ರೂ. ದಷ್ಟು ಆದಾಯ ಗಳಿಸಿದರು. ಹಲವು ಬೆಳೆಗಳಿಂದ ಕೃಷಿಯಲ್ಲಿ ಉತ್ತಮ ಆದಾಯ ಗಳಿಸಿ ಆರ್ಥಿಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

ಒಂದೂವರೆ ವರ್ಷದ ಹಿಂದೆ ದಾಳಿಂಬೆ, ಪಪ್ಪಾಯ ಬೆಳೆದೆ. ಅದರಲ್ಲಿ ಪಪ್ಪಾಯ 24 ಲಕ್ಷ ರೂ.ದಷ್ಟು ಉತ್ತಮ ಆದಾಯ ನೀಡಿತು. ಈಗ ದಾಳಿಂಬೆ ಗಿಡಗಳು ಹಣ್ಣು ಬಿಡಲು ಪ್ರಾರಂಭಿಸಿದ್ದು, 1 ಗಿಡಕ್ಕೆ 10 ಕೆಜಿಯಂತೆ 4500 ದಾಳಿಂಬೆ ಗಿಡಗಳಲ್ಲಿ ಒಟ್ಟು 45 ಟನ್ ಇಳುವರಿ ಬರುವ ನಿರೀಕ್ಷೆ ಇದೆ. ಪ್ರತಿ ಟನ್​ಗೆ 55 ಸಾವಿರ ರೂ. ದರ ಸಿಕ್ಕರೂ ಅಂದಾಜು 24.75 ಲಕ್ಷ ರೂ. ಆದಾಯ ಸಿಗಲಿದೆ. ಬೇಸಿಗೆಗೆ ದಾಳಿಂಬೆ ಹಣ್ಣಿನ ಮೇಲ್ಭಾಗ ಮತ್ತು ಒಳಭಾಗ ಕಪ್ಪಾಗುತ್ತದೆ. ಹಣ್ಣಿನ ತ್ವೆಚೆ ಮತ್ತು ರಕ್ಷಣೆಗೆ ಸೀರೆಗಳನ್ನು ತಂದು ಹೊದಿಸಿದ್ದೇವೆ. ಇದನ್ನು ನೋಡಲು ನೂರಾರು ರೈತರು ಬರುತ್ತಿದ್ದಾರೆ.

|ವೆಂಕಟೇಶ ಬಂಡೆಣ್ಣವರ, ರೈತ