ಗುರು: (ನಸುನಗುತ್ತಾ) ‘‘ಶರ್ವೆ! ಭವಾನಿ! ರುದ್ರಾಣಿ! ಈಗ ಇದು ನಿನ್ನ ಅಭಿಧಾನ! ನಾರಾಯಣಿ ಎಂಬುದು ಮೂಲಸ್ವರೂಪ! ಅದು ಬಿಟ್ಟ ಮನೆ. ರುದ್ರಾಣಿ ಎಂಬುದು ಹೊಕ್ಕ ಮನೆಯ ಅಭಿಧಾನ! ಪತ್ನಿಗೆ ಕರ್ತವ್ಯ ಪತಿಕಾರ್ಯದಲ್ಲಿ ಎಂಬುದು ಧರ್ಮಶಾಸ್ತ್ರ ಹೃದಯ. ಒಪ್ಪದ ಆಸುರೀ ಜನ್ಮರೀತಿಗಳ ಮಾತು ನನಗೂ ನಿನಗೂ ಸೇರುವುದಿಲ್ಲ.’’
ದಾಕ್ಷಾಯಣಿ: ‘‘ತಾವು ಪ್ರಶ್ನೆಯನ್ನು ಬಳಸಿ ಮಾತಾಡುತ್ತಿದ್ದೀರಿ! ಇದೆಲ್ಲ ನಾನು ಬಲ್ಲ ವಿಷಯಗಳು. ತವರು ಮನೆ, ಬಿಟ್ಟ ಮನೆ. ಸದಾ ವಾಸಕ್ಷೇತ್ರವಲ್ಲ. ಕೈಲಾಸವೇ ನನ್ನ ನಿತ್ಯಕ್ಷೇತ್ರ. ಆದರೆ, ತವರು ಮನೆ ಸದಾ ರ್ವ್ಯಜ ಎಂದು ಯಾವ ಶಾಸ್ತ್ರವೂ ಹೇಳುವುದಿಲ್ಲವಲ್ಲ? ಅಲ್ಲಿನದು ಮುಗಿಯುವ ಸಂಬಂಧವೇ? ಈಗ ನಾನು ಅಲ್ಲಿ ಹೋಗಬೇಕೇ ಬೇಡವೇ?’’
ಗುರು: (ಗಂಭೀರ ಚಿಂತನೆಯಲ್ಲಿದ್ದು, ಮೌನ ಮುರಿಯುತ್ತ) ‘‘ದೇವಿ – ಒಂದು ಗೀತೆ ಹಾಡುತ್ತೇನೆ. ಅರ್ಥ ಯೋಚಿಸು’’
ದೇವಗತಿಯಲ್ಲೇ ಬಹುದು, ಪರಿಧಿಯ ರುದ್ರಗತಿ.
ಅದು ಜೀವರಾಶಿಯ ಪರಮಗತಿ, ಸಾವು, ಶ್ಮಶಾನ ಸ್ಥಿತಿ.
ಸ್ಥಿತಿಯಂತ್ಯದಲ್ಲೇ ಸಾವು, ಸಾವಿನಲ್ಲೇ ಸೃಷ್ಟಿ, ಅದು ದೇವರೀತಿ.
ಯಜ್ಞದಲ್ಲಿ ಸೃಷ್ಟಿಯುಂಟು, ಸ್ಥಿತಿಯುಂಟು, ಅಂತ್ಯೇಷ್ಟಿ ನೀತಿ.
ರುದ್ರನಿಲ್ಲದ ಲೋಕ – ಮಿತಿಮೀರಿದ ಸೃಷ್ಟಿಯ ಹಾಳು ತೋಟ.
ರುದ್ರನೆಲ್ಲೂ ಇರಲು – ಶ್ಮಶಾನವಿಸ್ತರಣೆ, ಶೋಕ, ಸಾವಿನಾಟ!
ಸ್ಥಾನವೆಲ್ಲಕು ಉಂಟು, ಅಲ್ಲಲ್ಲೇ, ಆಟದಲ್ಲಿ, ನಿರ್ಣಯಿಸಲು ಕಷ್ಟ!
ಆಟ ನಡೆಯುತಲಿರಬೇಕು, ಸೋಲುಗೆಲುವಿರಲೆಂದು ದೇವನಿಷ್ಟ!
ಅವರವರ ನಿರ್ಣಯಕೆ ಅವರವರೇ ಹೊಣೆ, ಬಹಳ ಮಾತೇಕೆ?
ನಿರ್ಣಯದಿ ನೋವಿರಲಿ, ಪರಿಣಾಮ ಸುಖವಿರಲಿ, ಚಿಂತೆಯೇಕೆ?
ಎಲ್ಲಿದ್ದರೂ ಬಿಡನು ಈಶ್ವರ, ಆಟ ನಡೆಸುತ್ತ, ಸೂತ್ರ ಹೆಣೆದು
ನಾವೆಲ್ಲ ಗೊಂಬೆಗಳು, ಕುಣಿವುದೇ ಕರ್ತವ್ಯ, ಅವಗೆ ತಲೆ ಮಣಿದು.
***
ಶಿವ: ‘‘ಪ್ರಿಯೆ! ದೇವಗುರು ಏನು ಹೇಳಿದರು?’’
ಶಿವೆ: ‘‘ಏನೂ ಹೇಳದೆಯೇ ಹೇಳಿದಂತೆ ನಾಟಕವಾಡುವ ಬೃಹಸ್ಪತಿ ಅವರಲ್ಲವೇ?’’
ಶಿವ: ‘‘ಅವರ ಮೇಲೇಕೆ ಇಷ್ಟು ಕೋಪ?’’
ಶಿವೆ: ‘‘ಅಲ್ಲ, ಅಲ್ಲ… ದಾರಿಗಾಣದ ತಾಪ!’’
ಶಿವ: ‘‘ದಾರಿಯಿಲ್ಲದಲ್ಲಿ ದಾರಿ ಹುಡುಕಿದರೆ?’’
ಶಿವೆ: ‘‘ನೀವಾದರೂ ಹೇಳಬಾರದೆ, ನನಗಾವ
ದಾರಿ, ಈಗ?’’
ಶಿವ: ‘‘ಇಲ್ಲಿ ಗೋಜಲಿದೆ, ದೇವಿ! ದಾರಿ ಕೆಲವರಿಗೆ ಕಾಣುತ್ತದೆ. ಅತ್ತ ನಡೆಯಲು ರುಚಿ ಬರುವುದಿಲ್ಲ! ಕಾಣದ, ಇಲ್ಲದ, ದಾರಿಯಲ್ಲೇ ರುಚಿ ಬರುವುದು ವಿಧಿ ವಿಚಿತ್ರ!’’
ಶಿವೆ: ‘‘ಇಲ್ಲದ ದಾರಿಯತ್ತ ನನಗೇಕೆ ರುಚಿ ಬರಬೇಕು?’’
ಶಿವ: ‘‘ಅದನ್ನು ನೀನೇ ಹೇಳಬೇಕು! ನನಗೆ ಕಾಣುವುದು ಒಂದೇ ದಾರಿ… ನಾನು ಹೇಳಿ ಕೇಳಿ ಲಯಾಧಿಪತಿ… ಎಲ್ಲ ದಾರಿಗಳೂ, ಯಾವ ದಾರಿಯೂ, ಜೀವನದಲ್ಲಿ ಬದುಕಿದ್ದಾಗ ವಿಧವಿಧವಾಗಿ ಕಾಣುವುದೆಲ್ಲ ದಾರಿಗಳೂ ಸೇರುವುದು ಒಂದೇ ಎಡೆ. ಅದೇ ಕಡೆ. ನಾನು ಅಲ್ಲೇ!’’
ಶಿವೆ: ‘‘ಶ್ಮಶಾನವೇ? ಶಿವ ಶಿವ! ಏಕೆ ಹಾಗೆನ್ನುತ್ತೀರಿ? ಇದು ಶುಭ ಯಾಗ ಪ್ರಸಂಗ ಅಲ್ಲವೇ?’’
ಶಿವ: (ವ್ಯಂಗ್ಯವಾಗಿ ನಗುತ್ತ) ?ಶಿವ, ಶಿವ! ಎನ್ನುವೆ!… ನೀನು ಕೈ ಹಿಡಿದದ್ದೇ ಅವನನ್ನು… ಅವನೋ ಶ್ಮಶಾನವಾಸಿ! ಅಲ್ಲೇ ಇದೆ ನಿನ್ನ ವಿಧಿ… ನಿನ್ನ ತಂದೆಯ ಕ್ರೋಧದ ರೂಪದ್ದು… ಅದೂ ಯಜ್ಞಭೂಮಿಯೇ! ಅಲ್ಲೂ ದಾರಿಯಿದೆ… ಮುಂದಕ್ಕೆ… ಅದು ಲೋಕಕ್ಕೆ ಕಂಗಳಿಗೆ ಕಾಣದ ಮಹಾದಾರಿ… ಜೀವನದಾಚೆಯದು…’’
ಶಿವೆ: ‘‘ಥೂ!… ಈಗ… ಒಂದು ನಿರ್ಣಯ ಮಾಡೋಣವೇ?… ನಿಮಗೆ ಇಷ್ಟವಿಲ್ಲವಾದರೆ ಇಲ್ಲೇ ಇರಬಹುದು. ನಾನಂತೂ ಹೋಗಿ ಬರಲೇ?… ಅಪ್ಪಣೆಯೇ…?’’