ದಾನದಿಂದ ಜೀವನದಲ್ಲಿ ಆನಂದ

ಗದಗ: ಮನುಷ್ಯನ ಜೀವನದ ಉದ್ದೇಶ ಕೇವಲ ಹಣ ಮಾಡುವುದಲ್ಲ. ತಾನು ಸಂಪಾದನೆ ಮಾಡಿ ಕೇವಲ ತನ್ನ ಸಂಸಾರಕ್ಕೆ, ವೈಭವಕ್ಕೆ ಉಪಯೋಗಿಸಲೂ ಅಲ್ಲ. ಸಂಪಾದಿಸಿದ ಹಣವನ್ನು ದಾನ, ಧರ್ಮ ಮಾಡಿ ನಿಜವಾದ ಜೀವನದ ಉದ್ದೇಶವನ್ನು ಅರಿಯಬೇಕು. ಅಂದಾಗ ಜೀವನದ ಆನಂದ ಅನುಭವಿಸಲು ಸಾಧ್ಯ ಎಂದು ಸೂಡಿ ಜುಕ್ತಿಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸ್ಥಳೀಯ ವೀರಸೋಮೇಶ್ವರ ನಗರದಲ್ಲಿ ಇತ್ತೀಚೆಗೆ ಜರುಗಿದ ಶ್ರೀ ಪವಾಡ ಆಂಜನೇಯ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಿಲಾಮೂರ್ತಿ ಪ್ರಾಣ ಪ್ರತಿಪ್ಠಾಪನೆ ನೆರವೇರಿಸಿ ಮಾತನಾಡಿದ ಅವರು, ಕೇವಲ ಹಣಕ್ಕಾಗಿ ಓದುವುದು, ಅದಕ್ಕಾಗಿಯೇ ದುಡಿಯುವುದರಲ್ಲಿ ಆನಂದವಿಲ್ಲ. ಅದರ ಜೊತೆಗೆ ದಾನ, ಧರ್ಮ ಮಾಡಿ ನಿಸ್ವಾರ್ಥ ಸೇವೆಯಿಂದ ದೇವರ, ಸದ್ಗುರು ವಿನ ಸನ್ನಿಧಿಯಲ್ಲಿ, ಸತ್ಸಂಗದಲ್ಲಿ ಜೀವನ ಮಾಡಬೇಕು. ಅಂದಾಗ ಜೀವನದ ಮೋಕ್ಷಕ್ಕೆ ದಾರಿ ಸಿಗುವುದು ಎಂದರು.

ಮುಕ್ತಿಮಂದಿರದ ವಿಮಲರೇಣುಕ ಶ್ರೀಗಳು ಮಾತನಾಡಿ, ಉತ್ತಮ ವಿಚಾರದಿಂದ ಸಂವೇದನಶೀಲ ರಾಗುತ್ತೇವೆ. ಸಂವೇದನೆಯಿಂದ ಕೆಲಸವಾಗುತ್ತದೆ. ಅಂದಾಗ ನಮ್ಮ ಸ್ವಯಂ ಖುಷಿಯ ಜತೆಗೆ ಪರಿಸರದಲ್ಲಿ ಖುಷಿ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿದರು. ಡಾ. ಜಯಶ್ರೀ ಹೊಸಮನಿ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಮಾತನಾಡಿದರು. ಎಸ್.ವೈ. ಚಿಕ್ಕಟ್ಟಿ, ಉಮೇಶ ನಾಲ್ವಾಡ, ಕೆ.ಎನ್. ಕಂಕಾಳೆ, ವಿ.ಬಿ. ಬಿಸನಳ್ಳಿ, ಶಂಭುಲಿಂಗ ಪಟ್ಟದಕಲ್ಲು, ಅಶೋಕ ಗೊಜನೂರ, ಮೃತ್ಯುಂಜಯ ಸಂಕೇಶ್ವರ ಇದ್ದರು. ಮಲ್ಲಿಕಾರ್ಜುನ ಹಿರೇಮಠ ಪ್ರಾರ್ಥಿಸಿದರು. ಶಿವಾನಂದ ಹಿರೇಮಠ ಸ್ವಾಗತಿಸಿದರು. ಶಿವಪ್ಪ ಕ್ಯಾಗಿ, ಲಲಿತಾ ಬಾಳಿಹಳ್ಳಿಮಠ ನಿರೂಪಿಸಿದರು. ಬಸವರಾಜ ವಾಲಿ ವಂದಿಸಿದರು.

ನಮ್ಮ ಮನಸ್ಸಿನ ಎಲ್ಲ ದ್ವಂದ್ವಗಳಿಗೆ ಸಮತೋಲನ ಕಾಯ್ದುಕೊಳ್ಳಲು ಧ್ಯಾನ ಮುಖ್ಯ. ನಾವು ಇಡೀ ದಿನ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವಂತೆ ನಮ್ಮಲ್ಲಿ ಶಕ್ತಿ ತುಂಬುತ್ತದೆ. ದೇವಸ್ಥಾನಗಳಲ್ಲಿ ಸೂಸುವ ಧನಾತ್ಮಕ ವಾತಾವರಣ ಮನುಷ್ಯನ ಮೇಲೆ ಪರಿಣಾಮ ಬೀರುತ್ತದೆ.
|ಮಲ್ಲಿಕಾರ್ಜುನ ಸ್ವಾಮೀಜಿ ನರೇಗಲ್ಲ ಹಿರೇಮಠ