ಬಾಳೆಹೊನ್ನೂರು: ಆರೋಗ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ದಾದಿಯರು ಆರೋಗ್ಯ ರಕ್ಷಣೆಯ ಬೆನ್ನೆಲುಬಾಗಿದ್ದಾರೆ ಎಂದು ಕುಂದೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸುರೇಂದ್ರ ಹೇಳಿದರು.

ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ವಿಶ್ವ ದಾದಿಯರ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ದಾದಿಯ ಕೆಲಸ ಮಾಡಲು ಮಹಿಳೆಯಲ್ಲಿ ಪ್ರಮುಖವಾಗಿ ಮಾತೃ ಹೃದಯದ ಅಗತ್ಯವಿದ್ದು, ಅವರ ಆರೈಕೆ, ಹಾರೈಕೆಗಳಿಂದ ರೋಗವನ್ನು ಹೆಚ್ಚು ಪಾಲು ಗುಣಪಡಿಸಲು ಸಾಧ್ಯವಿದೆ. ಆರೋಗ್ಯ ವ್ಯವಸ್ಥೆ ಬೆಂಬಲಿಸುವಲ್ಲಿ ದಾದಿಯರ ಪಾತ್ರ ಮಹತ್ವದ್ದಾಗಿದ್ದು, ಸಮಾಜದಲ್ಲಿ ದಾದಿಯರ ಪಾತ್ರ ಎತ್ತಿ ತೋರಿಸಬೇಕಿದೆ ಎಂದರು.
ಅಂತಾರಾಷ್ಟ್ರೀಯ ದಾದಿಯರ ದಿನವು ಆರೋಗ್ಯ ವ್ಯವಸ್ಥೆ ಮತ್ತು ಸಮಾಜಕ್ಕೆ ದಾದಿಯರು ನೀಡುವ ಮಹತ್ವದ ಕೊಡುಗೆಗಳನ್ನು ಗುರುತಿಸುತ್ತದೆ. ಆರೋಗ್ಯ ಕ್ಷೇತ್ರದ ಎರಡನೇ ಸ್ತರದಲ್ಲಿ ಕಾರ್ಯನಿರ್ವಹಿಸುವ ದಾದಿಯರನ್ನು ಗುರುತಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಶೀಜಾ ಮಾತನಾಡಿ, ಪ್ರತಿ ವರ್ಷ ಮೇ 12ರಂದು ಆಧುನಿಕ ಶುಶ್ರೂಷೆಯ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನಚ ಅಂಗವಾಗಿ ಅಂತಾರಾಷ್ಟ್ರೀಯ ದಾದಿಯರ ದಿನ ಆಚರಿಸಲಾಗುತ್ತದೆ. ದಾದಿಯರಿಗೆ ಹಲವು ಸಮಸ್ಯೆಗಳಿದ್ದರೂ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ದಾದಿಯರು ಆರೋಗ್ಯ ರಕ್ಷಣಾ ಉದ್ಯಮದ ಮೂಲಾಧಾರಾವಾಗಿದ್ದು, ವೈದ್ಯಕೀಯ ಜವಾಬ್ದಾರಿ ಮೀರಿ ವಿವಿಧ ಸಾಮರ್ಥ್ಯಗಳಲ್ಲಿ ಸೇವೆ ಸಲ್ಲಿಸುತ್ತಾರೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿಯರಾದ ಶೀಜಾ ಮತ್ತು ಎ.ಪಿ.ಶೈಲಾ ಹರೀಶ್ ಅವರನ್ನು ಸನ್ಮಾನಿಸಲಾಯಿತು. ಜೆಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ, ಕಾರ್ಯದರ್ಶಿ ವಿ.ಅಶೋಕ್, ಪೂರ್ವಾಧ್ಯಕ್ಷ ಸುಧಾಕರ್, ಚೈತನ್ಯ ವೆಂಕಿ, ಸದಸ್ಯರಾದ ಶಾಹಿದ್, ಸಿ.ವಿ.ಸುನೀಲ್, ಎಂ.ಸಿ.ಅಭಿಷೇಕ್, ಹಿರಿಯ ಕ್ರೀಡಾಪಟು ಒ.ಡಿ.ಸ್ಟೀಫನ್ ಇತರರಿದ್ದರು.