ದಾಖಲೆ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕ

ಬ್ಯಾಡಗಿ: ಅಂತಾರಾಷ್ಟ್ರೀಯ ಖ್ಯಾತಿಯ ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸೋಮವಾರ ಇತಿಹಾಸದಲ್ಲಿ ದಾಖಲೆಯ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕವಾಯಿತು.

2,55,083 ಚೀಲಗಳನ್ನು ಟೆಂಡರ್ ಹಾಕಲಾಗಿದ್ದರೆ, ಪ್ರಾಂಗಣದ ಕೊರತೆಯಿಂದ ಸುಮಾರು 45 ಸಾವಿರದಷ್ಟು ಚೀಲಗಳನ್ನು ಹೊತ್ತ ವಾಹನಗಳು ರಸ್ತೆಯಲ್ಲಿ ನಿಂತಿದ್ದವು.

ಪ್ರಸಕ್ತ ಸಾಲಿನಲ್ಲಿ ಐದು ಬಾರಿ ಲಕ್ಷ ಚೀಲ ಆವಕವಾದ ದಾಖಲೆಯಾಗಿದೆ. ಫೆ. 13 ಹಾಗೂ 14ರಂದು ಎರಡು ದಿನಗಳ ಕಾಲ ಬ್ಯಾಡಗಿ ಮಾರುಕಟ್ಟೆ ವಹಿವಾಟು ಸ್ಥಗಿತಗೊಳಿಸಲು ವರ್ತಕರು ನಿರ್ಧರಿಸಿದ್ದಾರೆ. ಬಳ್ಳಾರಿ, ಆಂಧ್ರಪ್ರದೇಶ ಗಡಿಯಲ್ಲಿ ಮೋಡಕವಿದ ವಾತಾವರಣವಿರುವ ಕಾರಣದಿಂದ ಚೀಲಗಳಲ್ಲಿ ಮೆಣಸಿನಕಾಯಿ ತುಂಬಿಟ್ಟರೆ ಹಾಳಾಗುವ ಆತಂಕದಲ್ಲಿದ್ದ ರೈತರು ದಿಢೀರನೇ ಮೆಣಸಿನಕಾಯಿ ತಂದಿದ್ದಾರೆ ಎನ್ನಲಾಗಿದೆ.

ಓಡಾಡಲು ಜಾಗೆಯಿರಲಿಲ್ಲ..: ಪ್ರಸಕ್ತ ದಿನ ಸುಮಾರು ಮೂರು ಲಕ್ಷಚೀಲ ಹೊತ್ತ ನೂರಾರು ವಾಹನಗಳು ಮಾರುಕಟ್ಟೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಮಾರುಕಟ್ಟೆಯ ಎಲ್ಲೆಡೆ ವಾಹನಗಳೇ ಕಣ್ಣಿಗೆ ರಾಚುತ್ತಿದ್ದವು. ಅನಿವಾರ್ಯವಾಗಿ ಕೆಲವಾಹನಗಳು ಮಾರುಕಟ್ಟೆಯ ಸುತ್ತಲಿನ ರಸ್ತೆಗೆ ತೆರಳಿದರೂ ಪ್ರಾಂಗಣ ತುಂಬಿ ತುಳುಕುತ್ತಿವೆ. ಪ್ರಾಂಗಣ ತುಂಬಿದ ಪರಿಣಾಮ ಬಹುತೇಕ ವರ್ತಕರು ಚೀಲಗಳನ್ನು ರಸ್ತೆಯ ಮೇಲಿಟ್ಟು ಟೆಂಡರ್ ಹಾಕಿದ್ದಾರೆ. ಮೆಣಸಿನಕಾಯಿ ಗುಣಮಟ್ಟ ಕೊರತೆಯಿಂದ 793 ಲಾಟ್​ಗಳು ಬಿಡ್ ಆಗಿಲ್ಲ.

ದರ ಕುಸಿತ..: ಕಳೆದ ವಾರ ಫೆ. 7ರಂದು ಬ್ಯಾಡಗಿ ಕಡ್ಡಿಯ ಮಾದರಿ ದರ 9,599 ಆದರೆ ಸೋಮವಾರ ಫೆ. 11ರಂದು 7.924 ರೂ. ಮಾದರಿ ದರವಾಗಿದ್ದು, 1,500 ರೂ.ಗಳಷ್ಟು ದರ ಕುಸಿದಿದೆ. ಡಬ್ಬಿಕಾಯಿ ಹಿಂದಿನ ವಾರ ಮಾದರಿ ದರ 11,509, ಸದ್ಯ 9,687ರೂ. ಇದ್ದು, 2 ಸಾವಿರ ರೂ. ಕುಸಿತ ಕಂಡಿದೆ. ಗುಂಟೂರು ಕಾಯಿ ದರ ಕೂಡ 800-900 ರೂ. ಇಳಿಕೆಯಾಗಿದೆ. ಹೆಚ್ಚು ಸೀಡ್ ತಳಿಯ ಮೆಣಸಿನಕಾಯಿ ಆವಕವಾಗಿದ್ದು, ಬಹುತೇಕ ಮೆಣಸಿನಕಾಯಿಗಳ ಗುಣಮಟ್ಟ ಕೊರತೆಯೂ ದರ ಕುಸಿತಕ್ಕೆ ಇನ್ನೊಂದು ಕಾರಣವೆಂದು ವರ್ತಕರು ತಿಳಿಸಿದ್ದಾರೆ.

ಮಾರುಕಟ್ಟೆ ವಿಸ್ತೀರ್ಣಕ್ಕೆ ಬೇಡಿಕೆ..: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ವರ್ಷದಿಂದ ವರ್ಷಕ್ಕೆ ದಾಖಲೆ ಪ್ರಮಾಣದಲ್ಲಿ ಆವಕವಾಗುತ್ತಿದೆ. ಇಂದು 3 ಲಕ್ಷ ಚೀಲಗಳು ಆವಕವಾಗಿದ್ದರಿಂದ 50 ಸಾವಿರದಷ್ಟು ಚೀಲಗಳಿಗೆ ಟೆಂಡರ್ ಹಾಕಲು ಸಾಧ್ಯವಾಗಿಲ್ಲ. ಹೀಗಾಗಿ ಮಾರುಕಟ್ಟೆ ವಿಸ್ತೀರ್ಣಗೊಳಿಸಲು ಎಪಿಎಂಸಿಯಿಂದ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರವೂ ಇದರ ಬಗೆಗೆ ಗಂಭೀರವಾಗಿ ಗಮನಹರಿಸಬೇಕು ಎಂದು ಎಪಿಎಂಸಿ ಸದಸ್ಯ ವೀರಭದ್ರಪ್ಪ ಗೊಡಚಿ ಒತ್ತಾಯಿಸಿದರು.

ಡ್ರೋಣ ಕ್ಯಾಮರಾದಿಂದ ಚಿತ್ರೀಕರಣ: ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ ದಾಖಲೆ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕವಾಗಿದ್ದರಿಂದ ಅದರ ಅಪರೂಪದ ದೃಶ್ಯಗಳನ್ನು ಚಿಕ್ಕಬಾಸೂರ ಎಪಿಎಂಸಿ ಸದಸ್ಯರಾದ ವೀರಭದ್ರಪ್ಪ ಗೊಡಚಿಯವರು ಡ್ರೋಣ ಕ್ಯಾಮರಾ ತರಿಸಿ ಸೆರೆಹಿಡಿಸಿದರು.

ಇಂದಿನ ದರ: ಬ್ಯಾಡಗಿ ಕಡ್ಡಿ 850-10,800, ಡಬ್ಬಿ 1,025-13,589, ಗುಂಟೂರು 500-7,936

ದರ ಕುಸಿತ ಖಂಡಿಸಿ ರೈತರ ಪ್ರತಿಭಟನೆ: ಮೆಣಸಿನಕಾಯಿ ದರ ಕುಸಿತದಿಂದ ಆಕ್ರೋಶಗೊಂಡ ಸಾವಿರಾರು ರೈತರು ಎಪಿಎಂಸಿ ಕಾರ್ಯಾಲಯದ ಎದುರು ರಸ್ತೆಗೆ ಮೆಣಸಿನಕಾಯಿ ಸುರಿದು ಸೋಮವಾರ ಪ್ರತಿಭಟನೆ ನಡೆಸಿದರು.

ಸೋಮವಾರ ಮಾರುಕಟ್ಟೆಗೆ ದಾಖಲೆ ಪ್ರಮಾಣದಲ್ಲಿ ಆವಕವಾದ ಪರಿಣಾಮ ಜಾಗದ ಕೊರತೆಯಿಂದ 45 ಸಾವಿರದಷ್ಟು ಚೀಲಗಳನ್ನು ವಾಹನದಿಂದ ಇಳಿಸಲಿಲ್ಲ. ಆವಕ ಏರಿಕೆಯಾಗುತ್ತಿದ್ದಂತೆ ದರ ಕುಸಿತ ಕಂಡಿದ್ದು, ರೈತರ ಆಕ್ರೋಶಕ್ಕೆ ಕಾರಣವಾಯಿತು.

ಕಳೆದ ವಾರ ಟೆಂಡರ್​ನಲ್ಲಿ ಬ್ಯಾಡಗಿ ಕಡ್ಡಿ ಕಾಯಿ ಸರಾಸರಿ 9,599 ರೂ.ಗೆ ಮಾರಾಟವಾಗಿತ್ತು. ಸೋಮವಾರ 7,924 ದರಕ್ಕೆ ಇಳಿದಿದೆ. ಡಬ್ಬಿ ಕಾಯಿ 2 ಸಾವಿರ, ಗುಂಟೂರು ಕೂಡ ಸಾವಿರಾರು ರೂ. ಕಡಿಮೆಯಾಗಿದ್ದು ರೈತರ ಆಕ್ರೋಶಕ್ಕೆ ಕಾರಣವಾಯಿತು. 3 ತಾಸುಗಳ ಕಾಲ ರೈತರು ಪ್ರತಿಭಟನೆ ನಡೆಸಿದರು. ಬೆಳಗ್ಗೆಯಿಂದ ಪೊಲೀಸ್ ಮೀಸಲು ಪಡೆ ಸಿಬ್ಬಂದಿ ಕಾರ್ಯಾಲಯದ ಸುತ್ತ ಬಿಗಿಬಂದೋಬಸ್ತ್ ಒದಗಿಸಿದ್ದರು. ರೈತರು ಕಾರ್ಯಾಲಯದ ಬಳಿ ಆಗಮಿಸುತ್ತಿದ್ದಂತೆ ಎರಡೂ ಬದಿಯ ಗೇಟ್​ಗಳನ್ನು ಭದ್ರಪಡಿಸಿ ತಡೆದರು.

ರೈತರನ್ನು ಸಮಾಧಾನಪಡಿಸಿದ ಕಾರ್ಯದರ್ಶಿ: ಗುಣಮಟ್ಟ ಹಾಗೂ ಇತರೆ ಕಾರಣಗಳಿಂದ ದರ ಕುಸಿತಗೊಂಡಿದೆ. ಈ ಕುರಿತು ವರ್ತಕರು ಹಾಗೂ ಖರೀದಿದಾರರ ಬಳಿ ರ್ಚಚಿಸಿ ನ್ಯಾಯ ಒದಗಿಸಿಕೊಡುವುದಾಗಿ ಎಪಿಎಂಸಿ ಆಡಳಿತ ಮಂಡಳಿ ಅಧ್ಯಕ್ಷ ಕರಬಸಪ್ಪ ನಾಯ್ಕರ ಹಾಗೂ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಎಸ್.ಬಿ. ನ್ಯಾಮಗೌಡ ಭರವಸೆ ನೀಡಿದರು. ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು.